Asianet Suvarna News Asianet Suvarna News

ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ ಮಾಡಲು ಆಯೋಗ ರಚಿಸಿದ ಸರ್ಕಾರ

ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ)ಯ ವಾರ್ಡ್‌ಗಳ ಪುನರ್‌ ವಿಂಗಡಣೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಾಲ್ಕು ಮಂದಿ ಅಧಿಕಾರಿಗಳ ಆಯೋಗ ರಚಿಸಿ ರಾಜ್ಯ ಸರ್ಕಾರ ಶುಕ್ರವಾರ ರಾಜ್ಯಪತ್ರ ಹೊರಡಿಸಿದೆ. 

Govt formed commission to redistribute BBMP wards gvd
Author
First Published Jun 24, 2023, 7:26 AM IST

ಬೆಂಗಳೂರು (ಜೂ.24): ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ)ಯ ವಾರ್ಡ್‌ಗಳ ಪುನರ್‌ ವಿಂಗಡಣೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಾಲ್ಕು ಮಂದಿ ಅಧಿಕಾರಿಗಳ ಆಯೋಗ ರಚಿಸಿ ರಾಜ್ಯ ಸರ್ಕಾರ ಶುಕ್ರವಾರ ರಾಜ್ಯಪತ್ರ ಹೊರಡಿಸಿದೆ. ಆಯೋಗದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು ಅಧ್ಯಕ್ಷರಾಗಿದ್ದು, ಬಿಡಿಎ ಆಯುಕ್ತರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಸದಸ್ಯರಾಗಿದ್ದಾರೆ. ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಈ ಹಿಂದೆ 2021ರಲ್ಲಿ ಅಂದಿನ ರಾಜ್ಯ ಸರ್ಕಾರವು ಬಿಬಿಎಂಪಿ ವಾರ್ಡ್‌ಗಳ ಪುನರ್‌ ವಿಂಗಡಣಾ ಆಯೋಗವನ್ನು ರಚಿಸಲಾಗಿತ್ತು. ಅದರಂತೆ 2011ರ ಜನಗಣತಿ ಆಧಾರದ ಮೇಲೆ ವಾರ್ಡ್‌ಗಳ ಪುನರ್‌ ವಿಂಗಡಣೆ ಮಾಡಿ, 2022ರ ಜುಲೈ 14ರಂದು ವಾರ್ಡ್‌ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಅದನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಮಾಜಿ ಮೇಯರ್‌ ಮಂಜುನಾಥರೆಡ್ಡಿ ಮತ್ತಿತರ ಮುಖಂಡರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 

ನನಗೆ 100 ದಿನ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕೊಡಿ, ಪಕ್ಷವನ್ನು ಸಂಘಟಿಸುವೆ: ವಿ.ಸೋಮಣ್ಣ

ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಕಳೆದ ಜೂನ್‌ 19ರಂದು ಹೊಸದಾಗಿ ವಾರ್ಡ್‌ ಪುನರ್‌ ವಿಂಗಡಣೆಗೆ ಸೂಚಿಸಿ ರಾಜ್ಯ ಸರ್ಕಾರಕ್ಕೆ 12 ವಾರ ಕಾಲಾವಕಾಶ ನೀಡಿದೆ. ಹೈಕೋರ್ಟ್‌ ಸೂಚನೆಯಂತೆ ಇದೀಗ ರಾಜ್ಯ ಸರ್ಕಾರವು ಕೆಲವು ಷರತ್ತು ವಿಧಿಸಿ ವಾರ್ಡುಗಳ ಪುನರ್‌ ವಿಂಗಡಣಾ ಆಯೋಗವನ್ನು ಹೊಸದಾಗಿ ರಚಿಸಿ ಆದೇಶಿಸಿದೆ.

ವಿಧಿಸಿದ ಷರತ್ತುಗಳು
*ಆಯೋಗವು ನ್ಯಾಯಾಲಯ ನಿಗದಿಪಡಿಸಿರುವ ಅವಧಿಯೊಳಗೆ ಬಿಬಿಎಂಪಿ ವಾರ್ಡ್‌ಗಳ ಪುನರ್‌ ವಿಂಗಡಣೆಯನ್ನು ಪೂರ್ಣಗೊಳಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.

*ನ್ಯಾಯಾಲಯದ ಆದೇಶದಂತೆ ಹೊಸದಾಗಿ ವಾರ್ಡ್‌ಗಳನ್ನು ಪುನರ್‌ ವಿಂಗಡಣೆ ಮಾಡಬೇಕು.

*ಆಯೋಗದ ಸದಸ್ಯ ಕಾರ್ಯದರ್ಶಿಯವರು ಅಗತ್ಯ ಕ್ಷೇತ್ರ ಅಧ್ಯಯನ, ಸ್ಥಳ ಪರಿಶೀಲನೆ ಕಾರ್ಯಗಳನ್ನು ಹಾಗೂ ಅಗತ್ಯ ಸಮಾಲೋಚನೆಗಳನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು.

*ಆಯೋಗಕ್ಕೆ ಬೇಕಾದ ಎಲ್ಲ ಸೌಲಭ್ಯಗಳು, ವ್ಯವಸ್ಥೆಯನ್ನು, ವೆಚ್ಚವನ್ನು ಬಿಬಿಎಂಪಿ ನಿಧಿಯಿಂದಲೇ ಭರಿಸಬೇಕು.

ವಿಧಾನಸಭೆ ಚುನಾವಣೆ ಫಲಿತಾಂಶ ಬಿಜೆಪಿಗೆ ಕೆಟ್ಟಕನಸು: ಕೆ.ಎಸ್‌.ಈಶ್ವರಪ್ಪ

ಬಿಬಿಎಂಪಿ ಚುನಾವಣೆ ಮತ್ತಷ್ಟು ವಿಳಂಬ?: ವಾರ್ಡ್‌ಗಳ ಪುನರ್‌ ವಿಂಗಡಣೆ ಮಾಡಲು ಆಯೋಗವನ್ನು ಪುನರ್‌ ರಚನೆ ಮಾಡಿರುವುದರಿಂದ ಬಿಬಿಎಂಪಿ ಚುನಾವಣೆ ಮತ್ತಷ್ಟುವಿಳಂಬವಾಗುವ ಸಾಧ್ಯತೆಗಳಿವೆ. ಹೊಸದಾಗಿ ವಾರ್ಡ್‌ಗಳ ಪುನರ್‌ ವಿಂಗಡಣೆ ಮಾಡಿದ ನಂತರ ಅದಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಇದಾದ ನಂತರ ಮೀಸಲಾತಿ ಪ್ರಕಟ ಆಗಬೇಕಾಗುತ್ತದೆ. ಹೊಸದಾಗಿ ವಾರ್ಡ್‌ಗಳ ಪುನರ್‌ ವಿಂಗಡಣೆಯ ಬಗ್ಗೆ ಅಸಮಧಾನಿತರು ಮತ್ತೆ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ಹೀಗಾಗಿ, ಬಿಬಿಎಂಪಿಯ ಚುನಾವಣೆಗೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

Follow Us:
Download App:
  • android
  • ios