Asianet Suvarna News Asianet Suvarna News

ಸರ್ಕಾರಿ ನೌಕರರು ಸ್ವ ಇಚ್ಛೆಯಿಂದ ಗ್ಯಾರಂಟಿ ಸ್ಕೀಂ ತ್ಯಜಿಸಿದ್ದಾರೆ: ಡಿ.ಕೆ.ಶಿವಕುಮಾರ್‌

ಬಸವಣ್ಣನವರ ನಾಡಿನಲ್ಲಿ ನುಡಿದಂತೆ ನಡೆದಿದ್ದೇವೆ. ಎಲ್ಲಾ ಐದು ಗ್ಯಾರಂಟಿ ಅನುಷ್ಠಾನ ಘೋಷಿಸಿದ್ದೇವೆ. ಸರ್ಕಾರಿ ನೌಕರರು ಹಾಗೂ ಇತರೆ ಸಂಘಸಂಸ್ಥೆಗಳು ನಮಗೆ ಈ ಯೋಜನೆಗಳ ಸೌಲಭ್ಯ ಬೇಡ ಎಂದು ಸ್ವಇಚ್ಛೆಯಿಂದ ನಮಗೆ ಪತ್ರ ಬರೆದಿದ್ದಾರೆ. 

Govt employees voluntarily quit guarantee scheme Says DK Shivakumar gvd
Author
First Published Jun 3, 2023, 2:40 AM IST

ಬೆಂಗಳೂರು (ಜೂ.03): ಬಸವಣ್ಣನವರ ನಾಡಿನಲ್ಲಿ ನುಡಿದಂತೆ ನಡೆದಿದ್ದೇವೆ. ಎಲ್ಲಾ ಐದು ಗ್ಯಾರಂಟಿ ಅನುಷ್ಠಾನ ಘೋಷಿಸಿದ್ದೇವೆ. ಸರ್ಕಾರಿ ನೌಕರರು ಹಾಗೂ ಇತರೆ ಸಂಘ ಸಂಸ್ಥೆಗಳು ನಮಗೆ ಈ ಯೋಜನೆಗಳ ಸೌಲಭ್ಯ ಬೇಡ ಎಂದು ಸ್ವಇಚ್ಛೆಯಿಂದ ನಮಗೆ ಪತ್ರ ಬರೆದಿದ್ದಾರೆ. ಯೋಜನೆಯ ಲಾಭವನ್ನು ತ್ಯಜಿಸಲು ಇಚ್ಛಿಸಿದರೆ ಅದನ್ನು ಸರ್ಕಾರ ಸ್ವಾಗತ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನ ನಮ್ಮ ಭರವಸೆಗಳ ಮೇಲೆ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ನಾವು ಬಸವಣ್ಣ, ಕುವೆಂಪು, ಶಿಶುನಾಳ ಷರೀಫರು, ಕನಕದಾಸರ ನಾಡಿನವರು. 

ಹೀಗಾಗಿ ಕೊಟ್ಟ ಮಾತಿಗೆ ಬದ್ಧರಾಗಿರುತ್ತೇವೆ. 5 ಗ್ಯಾರಂಟಿಗಳನ್ನು ನೀಡಲು ತೀರ್ಮಾನ ಮಾಡಿ ದಿನಾಂಕವನ್ನೂ ನಿಗದಿ ಮಾಡಿದ್ದೇವೆ. ಆ ಮೂಲಕ ನಮ್ಮ ಬದ್ಧತೆ ಪ್ರದರ್ಶಿಸಿದ್ದೇವೆ ಎಂದು ಹೇಳಿದರು. ಗೃಹಜ್ಯೋತಿ, ಗೃಹ ಲಕ್ಷ್ಮೇ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳ ಅನುಷ್ಠಾನ ಘೋಷಿಸಿದ್ದೇವೆ. ಈ ಪೈಕಿ ನಾಲ್ಕು ಯೋಜನೆಗಳು ಜೂ.11ರಿಂದ ಆಗಸ್ಟ್‌ 15ರ ನಡುವೆ ಅನುಷ್ಠಾನಗೊಳ್ಳಲಿವೆ. ಯುವನಿಧಿ ಯೋಜನೆಗೆ ಮಾತ್ರ 6 ತಿಂಗಳ ಕಾಲಾವಕಾಶ ಇರಲಿದೆ ಎಂದು ಹೇಳಿದರು.

ನನಗೆ ಮಂತ್ರಿ ಸ್ಥಾನಕ್ಕಿಂತ ಸಿದ್ದರಾಮಯ್ಯ ಸಿಎಂ ಆಗಿದ್ದು ಸಂತಸ ತಂದಿದೆ: ಶಾಸಕ ರಾಯರಡ್ಡಿ

ಮನೆಯೊಡತಿಯ ಖಾತೆಗೆ ಆ.15ರಿಂದ 2000 ಜಮೆ: ಪ್ರತಿ ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳು 2000 ರು. ಸಹಾಯಧನ ನೀಡುವ ‘ಗೃಹ ಲಕ್ಷ್ಮೀ’ ಯೋಜನೆ ಸ್ವಾತಂತ್ರ್ಯ ದಿನಾಚರಣೆ ದಿನ ಚಾಲನೆಗೆ ಬರಲಿದೆ. ಈ ಯೋಜನೆ ಬಡತನ ರೇಖೆಗಿಂತಲೂ ಕೆಳಗಿರುವ (ಬಿಪಿಎಲ್‌) ಕುಟುಂಬಗಳಿಗೆ ಮಾತ್ರವಲ್ಲ, ಬಡತನ ರೇಖೆಗಿಂತಲೂ ಮೇಲಿರುವ (ಎಪಿಎಲ್‌) ಕುಟುಂಬದವರಿಗೂ ಅನ್ವಯವಾಗಲಿದೆ. ಮಾತ್ರವಲ್ಲ ವೃದ್ಧಾಪ್ಯ ವೇತನ, ವಿಧವಾ ಮಾಸಾಶನ, ವಿಕಲಚೇತನರ ಪಿಂಚಣಿಯಂತಹ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಪಡೆಯುತ್ತಿದ್ದರೂ, ಹೆಚ್ಚುವರಿಯಾಗಿ ಗೃಹ ಲಕ್ಷ್ಮೀ ಯೋಜನೆಯಡಿ ಮನೆಯೊಡತಿ 2000 ರು. ಮಾಸಾಶನ ಪಡೆಯಲು ಅರ್ಹತೆ ಹೊಂದಿರುತ್ತಾರೆ.

ಸದ್ಯದಲ್ಲಿಯೇ ಈ ಯೋಜನೆಗೆ ಸಲ್ಲಿಸಬೇಕಾದ ಅರ್ಜಿ ಕುರಿತಂತೆ ತಂತ್ರಾಂಶ (ಸಾಫ್ಟ್‌ವೇರ್‌) ಅಭಿವೃದ್ಧಿಪಡಿಸಲಾಗುತ್ತದೆ. ಗೃಹ ಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಜೂನ್‌ 15 ರಿಂದ ಜುಲೈ 15ರೊಳಗೆ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು. ಅರ್ಜಿಯಲ್ಲಿ ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆಯ ವಿವರಗಳನ್ನು ನಮೂದಿಸುವುದು ಕಡ್ಡಾಯ. ಜತೆಗೆ ಮನೆಯೊಡತಿಯನ್ನು ಕುಟುಂಬದವರೇ ನಿರ್ಧರಿಸಬೇಕು.

ಕನ್ನಡ ವಿವಿ ಪಿಎಚ್‌ಡಿ ಪರೀಕ್ಷೆಗೆ ಅಭ್ಯರ್ಥಿಗಳ ನಿರಾಸಕ್ತಿ: ಶೇ. 54ರಷ್ಟು ಮಾತ್ರ ಹಾಜರಾತಿ!

ಸ್ವೀಕೃತ ಅರ್ಜಿಗಳನ್ನು ಜುಲೈ 15 ರಿಂದ ಆಗಸ್ಟ್‌ 15 ರವರೆಗೆ ಪರಿಶೀಲಿಸಿ, ನೇರ ಹಣ ವರ್ಗಾವಣಾ ವ್ಯವಸ್ಥೆಯಲ್ಲಿ ಲಿಂಕ್‌ ಮಾಡಲಾಗುವುದು. ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ದಿನ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ 2 ಸಾವಿರ ರು. ಸಹಾಯಧನ ನೇರವಾಗಿ ಜಮಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

Follow Us:
Download App:
  • android
  • ios