ಮಂಗಳೂರು: ಬಿಜೆಪಿ ಶಾಸಕರ ಪ್ರತಿಭಟನೆಗೆ ಮಣಿದ ಸರ್ಕಾರ: ಅಮಾನತು ಆದೇಶ ವಾಪಾಸ್!
ಶಾಸಕರ ಹಕ್ಕುಚ್ಯುತಿ ಹಾಗೂ ಅಧಿಕಾರಿಗಳ ಅಮಾನತು ಖಂಡಿಸಿ ಮಂಗಳೂರಿನ ಬಿಜೆಪಿ ಶಾಸಕರು ಇಂದು ನಡೆಸಿದ ಧರಣಿಗೆ ಕೊನೆಗೂ ಸರ್ಕಾರ ಮಣಿದಿದ್ದು, ಅಧಿಕಾರಿಗಳ ಅಮಾನತು ಆದೇಶವನ್ನು ಅಧಿಕೃತವಾಗಿ ವಾಪಾಸ್ ಪಡೆದಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಆ.14): ಶಾಸಕರ ಹಕ್ಕುಚ್ಯುತಿ ಹಾಗೂ ಅಧಿಕಾರಿಗಳ ಅಮಾನತು ಖಂಡಿಸಿ ಮಂಗಳೂರಿನ ಬಿಜೆಪಿ ಶಾಸಕರು ಇಂದು ನಡೆಸಿದ ಧರಣಿಗೆ ಕೊನೆಗೂ ಸರ್ಕಾರ ಮಣಿದಿದ್ದು, ಅಧಿಕಾರಿಗಳ ಅಮಾನತು ಆದೇಶವನ್ನು ಅಧಿಕೃತವಾಗಿ ವಾಪಾಸ್ ಪಡೆದಿದೆ. ದ.ಕ ಜಿಲ್ಲೆಯ ಮೂಡಬಿದ್ರೆ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಅಮಾನತು ಆದೇಶವನ್ನು ಸರ್ಕಾರ ವಾಪಾಸ್ ಪಡೆದಿದೆ. ಮೂಡಬಿದ್ರೆ ತಾಲೂಕು ಪಂಚಾಯತ್ ಇಓ ದಯಾವತಿಯವರನ್ನು ಶಿಷ್ಟಾಚಾರ ಪಾಲಿಸದ ಹಿನ್ನೆಲೆ ದ.ಕ ಜಿ.ಪಂ ಸಿಇಓ ಅಮಾನತು ಮಾಡಿದ್ದರು.
ಇರುವೈಲ್ ಗ್ರಾ.ಪಂ ಕಟ್ಟಡ ಉದ್ಘಾಟನೆ ಆಮಂತ್ರಣದಲ್ಲಿ ಶಿಷ್ಟಾಚಾರ ಪಾಲಿಸದ ಹಿನ್ನೆಲೆ ಅಮಾನತು ಮಾಡಿದ್ದರು. ಆದರೆ ಅಮಾನತು ವಿರೋಧಿಸಿ ಇಂದು ಡಿಸಿ ಕಚೇರಿ ಎದುರು ಬಿಜೆಪಿ ಶಾಸಕರು ಹಾಗೂ ಸಂಸದ ನಳಿನ್ ಕಟೀಲ್ ಧರಣಿ ನಡೆಸಿದ್ದರು. ಅಮಾನತು ವಾಪಾಸ್ ಪಡೆಯಲು ಆಗ್ರಹಿಸಿ ಧರಣಿ ನಡೆಸಿದ್ದರು. ಕೊನೆಗೆ ಡಿಸಿ ಮುಲ್ಲೈ ಮುಗಿಲನ್ ಆಗಮಿಸಿ ಇಂದು ಸಂಜೆಯೊಳಗೆ ಅಮಾನತು ವಾಪಾಸ್ ಪಡೆಯುವ ಭರವಸೆ ನೀಡಿದ್ದರು. ಹೀಗಾಗಿ ಪ್ರತಿಭಟನೆ ಕೈ ಬಿಟ್ಟಿದ್ದ ಬಿಜೆಪಿ ಶಾಸಕರು ಇಂದು ಸಂಜೆಯೊಳಗೆ ಅಮಾನತು ಆದೇಶ ವಾಪಸ್ ಪಡೆಯದೇ ಇದ್ದರೆ ನಾಳೆ ಮತ್ತೆ ಧರಣಿ ಕೂರುವ ಎಚ್ಚರಿಕೆ ನೀಡಿದ್ದರು.
ಈ ಬಾರಿಯೂ ಅದ್ಧೂರಿ ದಸರಾ ಉತ್ಸವ ಆಚರಣೆ: ಸಚಿವ ಮಹದೇವಪ್ಪ
ಅದರಂತೆ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಆದೇಶ ವಾಪಾಸ್ ಪಡೆಯಲು ಮನವಿ ಮಾಡಿದ್ದರು. ಅದರಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಮೂಡಬಿದ್ರೆ ತಾ.ಪಂ ಇಓ ದಯಾವತಿಗೆ ಎಚ್ಚರಿಕೆ ಕೊಟ್ಟು ಅಮಾನತು ಆದೇಶ ವಾಪಾಸ್ ಪಡೆಯಲಾಗಿದೆ. ಜೊತೆಗೆ ಇರುವೈಲ್ ಗ್ರಾ.ಪಂ ಪಿಡಿಓ ಕಾಂತಪ್ಪ ಅಮಾನತು ಆದೇಶವೂ ವಾಪಾಸ್ ಆಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಬಿಜೆಪಿ ಇಂದು ನಡೆಸಿದ ಹೋರಾಟದ ಫಲವಾಗಿ ಅಮಾನತು ರದ್ದಾಗಿದೆ.
ದ.ಕ ಜಿಲ್ಲೆಯ ಮೂಡಬಿದಿರೆಯ ಇರುವೈಲ್ ಪಂಚಾಯ್ ಕಟ್ಟದ ಉದ್ಘಾಟನೆ ವಿಚಾರದಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿಲ್ಲ ಅಂತ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಶಿಷ್ಟಾಚಾರ ಉಲ್ಲಂಘನೆ ಹೆಸರಲ್ಲಿ ಪಿಡಿಓ ಹಾಗೂ ತಾ.ಪಂ ಇಓ ಸಸ್ಟೆಂಡ್ ಮಾಡಲಾಗಿತ್ತು. ಬಂಟ್ವಾಳದಲ್ಲೂ ಸರ್ಕಾರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ವಿವಾದದಲ್ಲಿ ಆಮಂತ್ರಣದಲ್ಲಿ ಕಾಂಗ್ರೆಸ್ ಎಂಎಲ್ ಸಿಗಳ ಹೆಸರು ಮೇಲೆಕೆಳಗಾಗಿದೆ ಅಂತ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಕಾರ್ಯಕ್ರಮವೂ ರದ್ದಾಗಿತ್ತು.
ಕವಾಡಿಗರಹಟ್ಟಿ ಪ್ರಕರಣ: ಕುಡಿಯುವ ನೀರಿನ ಕುರಿತು ಜಿಲ್ಲಾಡಳಿತದಿಂದ ವಿಶೇಷ ಜಾಗೃತಿ
ಬಂಟ್ವಾಳ ಮತ್ತು ಮೂಡಬಿದಿರೆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರಿಗೆ ಅವಮಾನ ಆರೋಪಿಸಿ ಅಮಾನತು ಆದೇಶ ಹಿಂಪಡೆಯಲು ಹಾಗೂ ಶಾಸಕರ ಹಕ್ಕಿನ ರಕ್ಷಣೆಗೆ ಒತ್ತಾಯಿಸಿ ಧರಣಿ ನಡೆಸಲಾಗಿತ್ತು. ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಕ್ಕುಚ್ಯುತಿ ಆಗಿದೆ. ಜೊತೆಗೆ ಸ್ಥಳೀಯ ಕಾಂಗ್ರೆಸ್ ಮಾಜಿ ಶಾಸಕರು, ಮಾಜಿ ಸಚಿವರು ಹಾಗೂ ಕೈ ನಾಯಕರಿಂದ ಆಡಳಿತದಲ್ಲಿ ಹಸ್ತಕ್ಷೇಪ ಆರೋಪಿಸಿ ಧರಣಿ ನಡೆದಿದ್ದು, ಡಿಸಿ ಭರವಸೆ ಬಳಿಕ ಗಡುವು ಕೊಟ್ಟು ಧರಣಿ ಕೈ ಬಿಡಲಾಗಿತ್ತು.