Karnataka Politics : ಮೈಯಲ್ಲಿ ದೆವ್ವ ಬಂದಂತೆ ಕಾಂಗ್ರೆಸ್ಸಿಗರ ವರ್ತನೆ : ಕಾರಜೋಳ ವ್ಯಂಗ್ಯ
- ಮೈಯಲ್ಲಿ ದೆವ್ವ ಬಂದಂತೆ ಕಾಂಗ್ರೆಸ್ಸಿಗರ ವರ್ತನೆ
- ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯ

ಬೆಳಗಾವಿ (ಜ.04) : ನನ್ನ ಬುಟ್ಟಿಯೊಳಗೆ ಹಾವು ಇದೆ ಎಂದಷ್ಟೇ ಹೇಳಿದ್ದೇನೆ. ಯಾವ ಹಾವಿದೆ ಎನ್ನುವುದನ್ನು ನಾನು ತೋರಿಸಿಲ್ಲ. ತೋರಿಸುವುದಕ್ಕಿಂತ ಮೊದಲೇ ಕಾಂಗ್ರೆಸ್ಸಿಗರು ಅಂಜಿ ಓಡಾಡುತ್ತಿದ್ದಾರೆ. ಮೈಯಲ್ಲಿ ದೆವ್ವ ಬಂದಂತೆ ಕುಣಿಯುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು. ಮೇಕೆದಾಟು (Mekedatu) ಯೋಜನೆ ವಿಳಂಬಕ್ಕೆ ಹೊಣೆಗಾರರು ಯಾರು ಎಂಬ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಕ್ಕೆ, ಕಾವೇರಿಯಿಂದ ಭೀಮಾ ನದಿವರೆಗೂ ಕಾಂಗ್ರೆಸ್‌ನವರು ಮೈಮೇಲೆ ದೆವ್ವ ಬಂದಂಗೆ ಕುಣಿ ದಾಡುತ್ತಿದ್ದಾರೆ ಎಂದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಬುದ್ದಿ ಹೇಳಬೇಕು ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆ ಸರಿಯಲ್ಲ. ಅಣ್ಣಾಮಲೈ ಅಧಿಕಾರದಿಂದ ಹೊರಗಿದ್ದಾರೆ.
ಡಿಎಂಕೆ (DMK) ನೆರಳಲ್ಲಿ ನೀವು ಆಡಳಿತ ಮಾಡುತ್ತಿದ್ದೀರಿ. ಯೋಜನೆ ಕುರಿತು ಮೊದಲು ಅವರಿಗೆ ತಿಳಿ ಹೇಳುವ ಕೆಲಸ ಮಾಡಿ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ಪಾದಯಾತ್ರೆ ಕೇವಲ ರಾಜಕೀಯ ಗಿಮಿಕ್. ಜನರಿಗೆ ಮೋಸ ಮಾಡುವ ತಂತ್ರ ಎಂದರು.
ಶೀಘ್ರ ಸ್ಫೋಟಕ ಸುದ್ದಿ : ಮೇಕೆದಾಟು (Mekedatu ) ಯೋಜನೆ ಕುರಿತು ಜ.3ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ನೀರಾವರಿ ಯೋಜನೆಯಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ನವರ(Congress) ಹೊಣೆಗೇಡಿತನದ ಬಗ್ಗೆ ಜ.9ಕ್ಕೆ ಮುನ್ನ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಹೇಳಿದ್ದಾರೆ.
"
ಶನಿವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಅಂದು ಕೃಷ್ಣೆಗೆ (ಕೂಡಲಸಂಗಮ) ಇಂದು ಕಾವೇರಿಗೆ (ಮೇಕೆದಾಟು) ಎಂದು ಪಾದಯಾತ್ರೆ ಕೈಗೊಂಡಿದ್ದಾರೆ. ಅರ್ಥಹೀನ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಮಿತ್ರರು ಅಧಿಕಾರದಲ್ಲಿದ್ದಾಗ ಮೇಕೆದಾಟು(Mekedatu) ಕುರಿತು ಮಾಡಿರುವ ಹೊಣೆಗೇಡಿತನಕ್ಕೆ ನಮ್ಮಲ್ಲಿ ಸಾಕ್ಷ್ಯ ಇದೆ. ಕೆಲವೇ ದಿನಗಳಲ್ಲಿ ಸ್ಫೋಟಕ ಮಾಹಿತಿ ಹೊರಹಾಕುತ್ತೇವೆ ಎಂದು ತಿಳಿಸಿದರು.
2013ರ ಜ.7ರಂದು ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಎಂದು ಪಾದಯಾತ್ರೆ ಕೈಗೊಂಡಿದ್ದರು. ಬಳಿಕ ಏಳು ವರ್ಷ ಅವರು ಅಧಿಕಾರದಲ್ಲಿದ್ದರು. ಆಗ ಕೃಷ್ಣಾ ಯೋಜನೆಗಾಗಿ(Krishna River) ಖರ್ಚು ಮಾಡಿದ್ದು 7,776 ಕೋಟಿ ರು ಮಾತ್ರ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ಮಾಜಿ ಗೃಹ ಸಚಿವ ಡಾ.ಜಿ.ಪರಮೇಶ್ವರ್(Dr G Parameshwara) ಇಬ್ಬರ ಮಧ್ಯ ಪೈಪೋಟಿಗಾಗಿ ನಡೆದಿದ್ದ ಪಾದಯಾತ್ರೆ ಅದಾಗಿತ್ತು. ಈಗ ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡುತ್ತಿದ್ದಾರೆ. ರಾಜ್ಯದ ಮತ್ತು ಜನತೆಯ ಹಿತದೃಷ್ಟಿಯಿಂದ ಸತ್ಯವನ್ನು ಗಮನಕ್ಕೆ ತರಬೇಕಾಗಿದೆ. ಕಾಂಗ್ರೆಸ್ ಗಿಮಿಕ್ ಮಾಡುತ್ತಿರುವುದು ಇದೇ ಮೊದಲಲ್ಲ ಎಂದರು.
ಅಧಿಕಾರದಲ್ಲಿದ್ದಾಗ ಆಲಸ್ಯತನ, ಕಡತ ಯಜ್ಞ ಮಾಡದೇ ಕಾಲಹರಣ ಮಾಡುವುದು, ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಅನಗತ್ಯ ಆಂದೋಲನ ಕೈಗೊಳ್ಳುವುದು ಕಾಂಗ್ರೆಸ್‌ನವರ ಜಾಯಮಾನ. ಅಧಿಕಾರದಲ್ಲಿದ್ದಾಗ ಕಾವೇರಿ(Kaveri River) ಕಣಿವೆಯ ರೈತರ(Farmers) ಮತ್ತು ಜನಹಿತದ ಕೆಲಸಗಳನ್ನು ವಿಳಂಬ ದ್ರೋಹದ ಮೂಲಕ ಮುಂದೂಡಿ ಈಗ ಪಾದಯಾತ್ರೆ ಮೂಲಕ ಗಿಮಿಕ್ ಮಾಡುವುದು ಜನರಿಗೆ ತಿಳಿಯುತ್ತದೆ. ಕಾಂಗ್ರೆಸ್ ಪಾದಯಾತ್ರೆ ಆರಂಭವಾಗುವ ಒಂದೆರಡು ದಿನಗಳ ಮುಂಚೆಯೇ ಮಾಹಿತಿಯನ್ನು ಬಹಿರಂಗಗೊಳಿಸಲಾಗುವುದು. ನೂರಾರು ಹೋರಾಟ ಮಾಡಿದರೂ ನಮಗೆ ಯಾವುದೇ ಆತಂಕ ಇಲ್ಲ. ಜನತೆ ಒಂದು ಸಲ ಮೋಸ ಹೋಗುತ್ತಾರೆ, ಎರಡನೇ ಸಲ ಮೋಸ ಹೋಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಧಿಕಾರ ಪಿತ್ರಾರ್ಜಿತ ಆಸ್ತಿಯಲ್ಲ:
ಸಚಿವ ಸಂಪುಟ ಪುನಾರಚನೆ ಸಂಬಂಧ ಪ್ರತಿಕ್ರಿಯಿಸಿದ ಅವರು, ತಾವು ಯಾವಾಗಲೂ ಅಧಿಕಾರದಲ್ಲಿರಬೇಕು, ಸಚಿವನಾಗಿರಬೇಕು ಎಂದು ಬಯಸಿದವನಲ್ಲ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿ ಶಿಸ್ತಿನ ಸಿಪಾಯಿಯಂತೆ ಕೇಳುತ್ತೇನೆ. ಅಧಿಕಾರ ಎನ್ನುವುದು ಪಿತ್ರಾರ್ಜಿತ ಆಸ್ತಿಯಲ್ಲ ಎಂದು ಹೇಳಿದರು.
ಮೇಕೆದಾಟು ಕಾಂಗ್ರೆಸ್‌ನ ನಾಟಕ
ಮೇಕೆದಾಟು ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ನಾಟಕವಾಡುತ್ತಿದೆ. ಅದು ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯು ಈ ನಾಟಕದ ಒಂದು ಭಾಗವಷ್ಟೆಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ(CN Ashwathnarayan) ಕಿಡಿಕಾರಿದ್ದಾರೆ.
ನೀರಾವರಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basvaraj Bommai) ಪರಿಣತರಿದ್ದಾರೆ. ಮೇಕೆದಾಟು ವಿಚಾರದಲ್ಲಿ ಸರ್ಕಾರದ ನಿಲುವನ್ನು ಸದನದಲ್ಲೇ ಸ್ಪಷ್ಟವಾಗಿ ತಿಳಿಸಲಾಗಿದೆ. ತಾನು ಅಧಿಕಾರದಲ್ಲಿದ್ದಾಗ ಏನನ್ನೂ ಮಾಡದ ಕಾಂಗ್ರೆಸ್, ಈಗ ಗದ್ದಲ ಮಾಡುತ್ತಿರುವುದು ಹಾಸ್ಯಾಸ್ಪದ. ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ಅನುಕೂಲವಾಗಲಿದ್ದು, ಸರ್ಕಾರವು ಇದನ್ನು ಅನುಷ್ಠಾನಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಲಿದೆ. ಕುಡಿಯುವ ನೀರಿನ ಪೂರೈಕೆ ಉದ್ದೇಶದ ಈ ಯೋಜನೆಯನ್ನು ಜಾರಿಗೆ ತರದೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಕೆಲಸವಿಲ್ಲದೆ ಪಾದಯಾತ್ರೆಯ ನಾಟಕ ಮಾಡ್ತಿದ್ದಾರೆ: ಅಶೋಕ್
ರಾಜ್ಯದಲ್ಲಿ ಆರು ವರ್ಷ ಅಧಿಕಾರದಲ್ಲಿದ್ದರೂ ಮೇಕೆದಾಟು ಯೋಜನೆಗೆ ಏನೂ ಮಾಡದ ಕಾಂಗ್ರೆಸ್ ಈಗ ಮಾಡಲು ಕೆಲಸವಿಲ್ಲದೆ ಪಾದಯಾತ್ರೆಯ ಗಿಮಿಕ್ ಮಾಡಲು ಮುಂದಾಗಿದೆ. ಕಾಂಗ್ರೆಸ್ ಒಂದು ರೀತಿ ನಾಟಕದ ಪಾರ್ಟಿ ಎಂದು ಕಂದಾಯ ಸಚಿವ ಆರ್.ಅಶೋಕ್(R Ashok) ವ್ಯಂಗ್ಯವಾಡಿದ್ದಾರೆ.