ಸರ್ಕಾರದ 6ನೇ ಗ್ಯಾರಂಟಿ ಗೃಹ ಆರೋಗ್ಯ ಯೋಜನೆ: ಸಚಿವ ದಿನೇಶ್ ಗುಂಡೂರಾವ್
ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ನೀಡಿ ಯಶಸ್ವಿಯಾಗಿದ್ದು, ಈಗ 6ನೇ ಗ್ಯಾರಂಟಿಯಾಗಿ ಗೃಹ ಆರೋಗ್ಯ ಯೋಜನೆ ಅನುಷ್ಠಾನಗೊಳಿಸಿದೆ. ಇದು ಗ್ರಾಮೀಣ ಜನರಿಗೆ ಹೆಚ್ಚು ಅನುಕಾಲಕರವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬಂಗಾರಪೇಟೆ (ಜ.25): ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ನೀಡಿ ಯಶಸ್ವಿಯಾಗಿದ್ದು, ಈಗ 6ನೇ ಗ್ಯಾರಂಟಿಯಾಗಿ ಗೃಹ ಆರೋಗ್ಯ ಯೋಜನೆ ಅನುಷ್ಠಾನಗೊಳಿಸಿದೆ. ಇದು ಗ್ರಾಮೀಣ ಜನರಿಗೆ ಹೆಚ್ಚು ಅನುಕಾಲಕರವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ಗೃಹ ಆರೋಗ್ಯ ಸೇವೆ ಮನೆ ಬಾಗಿಲಿಗೆ ಯೋಜನೆಯ ಅನುಷ್ಠಾನದ ಸಾಧಕ ಬಾಧಕಗಳನ್ನು ಮನೆಗಳಿಗೆ ತೆರಳಿ ಅವರಿಂದ ಮಾಹಿತಿ ಪಡೆದು ಪರಿಶೀಲಿಸಿ ಆರೋಗ್ಯ ಸಚಿವರು ಮಾತನಾಡಿದರು.
ಸಿಎಂ ಕನಸಿನ ಕೂಸು: ಗೃಹ ಆರೋಗ್ಯ ಯೋಜನೆ ಮುಖ್ಯಮಂತ್ರಿಗಳ ಕನಸಿನ ಕೂಸಾಗಿದೆ ಅದನ್ನು ರಾಜ್ಯ ವ್ಯಾಪ್ತಿಯಲ್ಲಿ ವಿಸ್ತರಿಸಬೇಕಾಗಿದೆ, ಪ್ರಾಯೋಗಿಕವಾಗಿ ಈ ಯೋಜನೆಯನ್ನು ಕೋಲಾರ ಜಿಲ್ಲೆಯಲ್ಲಿ ಆರಂಭಿಸಲಾಗಿದೆ ಇಲ್ಲಿ ಯೋಜನೆ ಯಶಸ್ವಿಯಾದರೆ ಬೇರೆ ಜಿಲ್ಲೆಗಳಲ್ಲಿ ಲೋಪವಿಲ್ಲದೆ ಅನುಷ್ಟಾನಗೊಳಿಸಲು ಸಹಕಾರಿಯಾಗಲಿದ್ದು ಎರಡು ತಿಂಗಳಲ್ಲಿ ರಾಜ್ಯಾದ್ಯತ ಯೋಜನೆ ಜಾರಿಯಾಗಲಿದೆ ಎಂದರು. ಈ ಹಿಂದೆ ಯಾವ ಸರ್ಕಾರ ಸಹ ಇಂತಹ ಯೋಜನೆಯನ್ನು ಜಾರಿಗೊಳಿಸಿಲ್ಲ, ಆದರೆ ಕಾಂಗ್ರೆಸ್ ಸರ್ಕಾರ ಸದಾ ಬಡವರ ಅನುಕೂಲಕ್ಕಾಗಿ ಶ್ರಮಿಸುತ್ತಿದೆ, ಹಿಂದೆ ಗ್ರಾಮೀಣರ ಆರೋಗ್ಯ ಕೆಟ್ಟರೆ ತಾಲೂಕು ಆಸ್ಪತ್ರೆಗೆ ಅಲೆಯಬೇಕಾಗಿತ್ತು, ಬಿಪಿ ಸಕ್ಕರೆ ಖಾಯಿಲೆ ಇದ್ದರೂ ತಪಾಸಣೆ ಮಾಡಿಸದೆ ನಿರ್ಲಕ್ಷ್ಯ ಮಾಡುತ್ತಿದ್ದರು. ಇದನ್ನು ಅರಿತ ಸರ್ಕಾರ ಆರಂಭದಲ್ಲೆ ಈ ರೋಗಗಳನ್ನು ತಡೆಗಟ್ಟಿ ಜನರ ಆರೋಗ್ಯ ರಕ್ಷಣೆ ಮಾಡಲು ಸರ್ಕಾರ ಗೃಹ ಆರೋಗ್ಯ ಯೋಜನೆ ಜಾರಿ ಮಾಡಿದೆ ಎಂದರು.
ಯೋಜನೆ ಯಶಸ್ಸಿಗೆ ಸಹಕರಿಸಿ: ಗ್ರಾಮಗಳಲ್ಲಿ ಪ್ರತಿ ಮನೆಗೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಅಧಿಕಾರಿಗಳು ತೆರಳಿ ಆರೋಗ್ಯ ತಪಾಸಣೆ ಮಾಡಿ ಔಷಧಿಗಳನ್ನು ನೀಡುತ್ತಾರೆ. ಇದರಿಂದ ಗ್ರಾಮಸ್ಥರ ಆರ್ಥಿಕ ಸ್ಥಿತಿ ಸಹ ಸುಧಾರಿಸಲಿದೆ ಎಂದರಲ್ಲದೆ ಈ ಗೃಹ ಆರೋಗ್ಯ ಯೋಜನೆಯ ಫಲ ಈಗಲೇ ನಿರೀಕ್ಷೆ ಮಾಡಲು ಆಗದು, ಮುಂದಿನ ೧೫ ವರ್ಷಗಳ ಬಳಿಕ ಇಡೀ ಸಮಾಜಕ್ಕೆ ಸಿಗಲಿದೆ. ಆದ್ದರಿಂದ ಈ ಯೋಜನೆ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವೆಂದರು. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಗೃಹ ಆರೋಗ್ಯ ಯೋಜನೆ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿದೆ. ಈ ಹಿಂದೆ ಯಾವ ಸರ್ಕಾರ ಸಹ ಗ್ರಾಮೀಣ ಜನರ ಆರೋಗ್ಯ ರಕ್ಷಣೆ ಮಾಡುವ ಯೋಜನೆ ರೂಪಿಸಿಲ್ಲ, ಎಲ್ಲರೂ ಯೋಜನೆಗಳನ್ನು ರೂಪಿಸುತ್ತಾರೆ. ಅದು ಬರೀ ಪೇಪರ್‌ನಲ್ಲಿ ಮಾತ್ರ ಇರುತ್ತದೆ. ಆದರೆ ಸಚಿವರು ಖುದ್ದಾಗಿ ಯೋಜನೆ ಸಾಧಕ ಬಾಧಕಗಳನ್ನು ಪರಿಶೀಲನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಅನ್ನೋ ನಂಬಿಕೆ ಇತ್ತು: ಸಚಿವ ದಿನೇಶ್ ಗುಂಡೂರಾವ್
ಬೂದಿಕೋಟೆಯಲ್ಲಿ ಆಸ್ಪತ್ರೆ ಸ್ಥಾಪಿಸಿ: ಬೂದಿಕೋಟೆ ಗ್ರಾಮದಲ್ಲಿ ಮತ್ತೊಂದು ತಾಲೂಕು ಆಸ್ಪತ್ರೆ ನಿರ್ಮಾಣ ಮಾಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.ಬೂದಿಕೋಟೆಯಲ್ಲಿ ಬಸ್ ನಿಲ್ದಾಣದ ಕೊರತೆಯಿದ್ದು ಸ್ಥಳಾಭಾವದಿಂದ ನಿರ್ಮಾಣವಾಗಿರಲಿಲ್ಲ,ಈಗ ಅಲ್ಲಿ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾವಾಗಿದ್ದು ಹಳೇ ಆಸ್ಪತ್ರೆ ಜಾಗವನ್ನು ಕೆಎಸ್‌ಆರ್‌ಟಿಸಿಗೆ ವಹಿಸಿದರೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡಬಹುದು ಎಂದು ತಮ್ಮ ಭಾಷಣದಲ್ಲಿ ಸಚಿವರ ಗಮನಕ್ಕೆ ತಂದರು. ಈ ವೇಳೆ ಭೂ ಬ್ಯಾಂಕಿನ ಅಧ್ಯಕ್ಷ ರಘುನಾಥ್, ಕೆಯುಡಿಯ ಅಧ್ಯಕ್ಷ ಗೋಪಾಲರೆಡ್ಡಿ ಪಂಃಅಧ್ಯಕ್ಷ ಪ್ರಮೀಳಮ್ಮ,ಡಿಹೆಚ್‌ಒಶ್ರೀನಿವಾಸ್,ಟಿಹೆಚ್‌ಒ ಸುನೀಲ್,ಮಾಜಿ ತಾಪಂ ಅಧ್ಯಕ್ಷ ಮಹಾದೇವ್,ಮಾಜಿ ಜಿಪಂ ಸದಸ್ಯ ಕೃಷ್ಣ,ಎ.ಬಾಬು ಇತರರು ಇದ್ದರು.