ಹಸ್ತಕ್ಷೇಪ ಮಾಡೋದು ಬಿಡಿ. ಪೊಲೀಸ್‌ ಇಲಾಖೆ ಮೇಲೆ ಒತ್ತಡ ಹಾಕೋದು ಬಿಟ್ಟು ಮೊದಲು, ಕಳ್ಳರು, ಸುಲಿಗೆಕೋರರನ್ನ ಹದ್ದುಬಸ್ತಿನಲ್ಲಿಡಿ ಎಲ್ಲವೂ ಸರಿ ಹೋಗುತ್ತೆ. ದೇಶದ್ರೋಹಿಗಳು ದೇಶದ್ರೋಹಿಗಳೇ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ಬೀದರ್‌ (ಜೂ.02): ಹಸ್ತಕ್ಷೇಪ ಮಾಡೋದು ಬಿಡಿ. ಪೊಲೀಸ್‌ ಇಲಾಖೆ ಮೇಲೆ ಒತ್ತಡ ಹಾಕೋದು ಬಿಟ್ಟು ಮೊದಲು, ಕಳ್ಳರು, ಸುಲಿಗೆಕೋರರನ್ನ ಹದ್ದುಬಸ್ತಿನಲ್ಲಿಡಿ ಎಲ್ಲವೂ ಸರಿ ಹೋಗುತ್ತೆ. ದೇಶದ್ರೋಹಿಗಳು ದೇಶದ್ರೋಹಿಗಳೇ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು. ನಗರದಲ್ಲಿ ಭಾನುವಾರ ಮಂಗಳೂರಿನಲ್ಲಿನ ಕೋಮು ಸಂಘರ್ಷದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳೂರಿನಲ್ಲಿ ಕೇವಲ ಹಿಂದೂಗಳೇ ಇಲ್ಲ ಮುಸ್ಲಿಂ, ಕ್ರಿಶ್ಚಿಯನ್‌ ಎಲ್ಲರೂ ಇದ್ದಾರೆ.

ಪ್ರಚೋದನಕಾರಿ ಭಾಷಣ ಮಾಡಿ ರಾಜಕೀಯ ಬೇಳೆಯನ್ನ ಬೇಯಿಸುವುದನ್ನ ಬಿಜೆಪಿ ಮಾಡಲ್ಲ ಎಂಬುವುದನ್ನು ಕಾಂಗ್ರೆಸ್‌ ಸರ್ಕಾರ ಅರ್ಥ ಮಾಡಿಕೊಳ್ಳಲಿ ಎಂದರು. ಕೈಲಾಗದವರು ಮೈ ಪರಚಿಕೊಂಡರಂತೆ, ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಭಾರಿ ಸುಲಭ. ನಮ್ಮ ಕಾಲದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಒಂದಾಗಿರಲಿಲ್ವ ಎಂದು ಪ್ರಶ್ನಿಸಿದ ಅವರು ಈ ರೀತಿ ಸಣ್ಣತನದಿಂದ ನಡೆದುಕೊಳ್ಳತ್ತಿರಲಿಲ್ಲ ನಿಮ್ಮಲ್ಲಿ ಅಪರಾಧ ಪುನರಾವರ್ತನೆ ಆಗುತ್ತಿದೆ ಎಂದರು.

ಜನೌಷಧಿ ಉಳಿಸೋಣ: ಯಾವುದೇ ಕಾರಣಕ್ಕೂ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೇಡ. ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ನಿರ್ಧಾರ ವಾಪಸ್‌ ಪಡೆಯುವತ್ತ ರಾಜ್ಯ ಸರ್ಕಾರ ಹೆಜ್ಜೆ ಇಡುವ ಎಲ್ಲ ಭರವಸೆಗಳಿವೆ. ಜನೌಷಧಿ ಕೇಂದ್ರಗಳನ್ನು ಹೆಚ್ಚಿಸುವುದಕ್ಕೆ ಕೇಂದ್ರಕ್ಕೆ ಒತ್ತಾಯಿಸೋಣ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಜನೌಷಧಿ ಕೇಂದ್ರ ರಾಜಕೀಯ ಉದ್ದೇಶದಿಂದ ಕೂಡಿದ್ದಲ್ಲ.

ಜೀವ ರಕ್ಷಕ ಔಷಧಿಗಳು ಅತೀ ಕಡಿಮೆ ದರದಲ್ಲಿ ಸಿಗುವಂತಾಗಿ ಬಡವರಿಗೆ ಅನುಕೂಲ ಆಗಲಿ ಎಂದು ಇದನ್ನು ದಿ.ಅನಂತಕುಮಾರ ಅವರು ಕೇಂದ್ರ ಸಚಿವರಾಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭ ಮಾಡಿದ್ದಾರೆ. ಆಗ ನಾನೂ ಮಂತ್ರಿಯಾಗಿದ್ದೆ ಎಂದರು ತಿಳಿಸಿದರು. ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ಕೈಬಿಡುವಂತೆ ನಾನು ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಅವರಿಗೆ ಪತ್ರ ಬರೆದಿದ್ದು, ಶೀಘ್ರದಲ್ಲಿ ಭೇಟಿಯಾಗಿ ಮತ್ತೊಮ್ಮೆ ಮನವಿ ಸಲ್ಲಿಸುತ್ತೇನೆ ಎಂದರು.

ಕಮಲ್‌ ಕನ್ನಡಿಗರ ಕ್ಷಮೆ ಕೇಳಲಿ: ನಟ ಕಮಲ್‌ ಹಾಸನ್‌ ಅವರ ಕನ್ನಡದ ಕುರಿತ ವಿವಾದಾತ್ಮಕ ಹೇಳಿಕ ಬಗ್ಗೆ ಪ್ರತಿಕ್ರಿಯಿಸಿ, ವಿಷಾದ ವ್ಯಕ್ತಪಡಿಸಿದರೆ ನಿಮ್ಮ ತಾತನ ಗಂಟೇನೂ ಹೋಗಲ್ಲ. ನೀವು (ಕಮಲ್ ಹಾಸನ್‌) ಆಡಿರುವ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿ ದೇಶದ ಮುಖ್ಯವಾಹಿನಿಯಲ್ಲಿ ಒಟ್ಟಾಗಿ ಹೋಗುವ ಪ್ರಯತ್ನ ಮಾಡಿದರೆ ಇತಿಹಾಸದಲ್ಲಿ ಉಳಿದುಕೊಳ್ತೀರಾ. ಇಲ್ಲಾಂದ್ರೆ ಕಳೆದು ಹೋಗ್ತೀರಾ ಎಂದು ಸಚಿವ ವಿ.ಸೋಮಣ್ಣ ಎಚ್ಚರಿಸಿದರು. ಕಮಲಹಾಸನ್‌ ಅವರೇ 70ರ ಮೇಲೆ ದಾಟಿದ್ದೀರಾ ಅರುಳೋ ಮರಳೋ ಆಗಬೇಡಿ ಕನ್ನಡದ ಬಗ್ಗೆ ಉಡಾಫೆ ಮಾತುಗಳನ್ನು ಆಡೋದು ಸರಿಯಲ್ಲ ಎಂದರು.