ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ತಲುಪಿಸುವೆ: ಸಂಸದ ಸಂಗಣ್ಣ ಕರಡಿ
ಭಾರತದ ಕಟ್ಟಕಡೆಯ ವ್ಯಕ್ತಿಗೂ ದೇಶದ ಸೌಲಭ್ಯಗಳು ತಲುಪಬೇಕು ಎಂಬ ಸದುದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಕಸಿತ ಭಾರತ ಯಾತ್ರೆ ಆರಂಭಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಕೊಪ್ಪಳ (ಡಿ.31): ಭಾರತದ ಕಟ್ಟಕಡೆಯ ವ್ಯಕ್ತಿಗೂ ದೇಶದ ಸೌಲಭ್ಯಗಳು ತಲುಪಬೇಕು ಎಂಬ ಸದುದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಕಸಿತ ಭಾರತ ಯಾತ್ರೆ ಆರಂಭಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತವನ್ನು ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ತಪಸ್ಸಿನ ರೀತಿ ಕೆಲಸ ಮಾಡುತ್ತಿದ್ದಾರೆ. ವಿಕಸಿತ ಭಾರತ ಸಂಕಲ್ಪ ಯಾತ್ರೆ 52ನೇ ದಿನಕ್ಕೆ ಕಾಲಿಟ್ಟಿದ್ದು, ಗ್ರಾಮದಲ್ಲಿ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.
ಈ ಹಿಂದೆ ರಾಜ್ಯ, ಕೇಂದ್ರದ ಯೋಜನೆಯ ಪ್ರಯೋಜನ ಪಡೆಯಲು ಸರ್ಕಾರಿ ಕಚೇರಿ ಮುಂದೆ ತಿಂಗಳುಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಕಮಿಷನ್ ಕೊಟ್ಟರಷ್ಟೇ ಕೇಂದ್ರದ ಯೋಜನೆಯ ಪ್ರಯೋಜನ ಸಿಗುತ್ತಿತ್ತು. ಕೇಂದ್ರದ ₹100 ಅನುದಾನದಲ್ಲಿ ರಾಜ್ಯದ ಫಲಾನುಭವಿಗಳಿಗೆ ಕೇವಲ ₹15 ಸಿಗುತ್ತಿತ್ತು. ಉಳಿದುದನ್ನು ಬೋಕರ್‌ಗಳು ತಿಂದು ತೇಗುತ್ತಾರೆ ಎಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರೇ ಹೇಳಿದ್ದರು. ಆದರೀಗ ಒಂದು ರುಪಾಯಿ ಭ್ರಷ್ಟಾಚಾರ ಇಲ್ಲದೇ ನೇರವಾಗಿ ಫಲಾನುಭವಿಗಳಿಗೆ ಸಿಗುತ್ತಿದೆ ಎಂದರು.
ಪ್ರಧಾನಮಂತ್ರಿ ಮೋದಿ 51 ಕೋಟಿ ಜನರಿಗೆ ಹೊಸ ಬ್ಯಾಂಕ್ ಖಾತೆ ತೆರೆಸಿದ್ದಾರೆ. ಇದರಿಂದಾಗಿ ಜನ್‌ಧನ್ ಖಾತೆಗೆ ಎಲ್ಲ ಸವಲತ್ತು, ಕಮಿಷನ್ ರಹಿತವಾಗಿ ತಲುಪುತ್ತಿದೆ. ಮಧ್ಯವರ್ತಿಗಳಿಲ್ಲದೆ ಯೋಜನೆಗಳು ತಲುಪುತ್ತಿವೆ ಎಂದರು. ಬಿಜೆಪಿ ಮುಖಂಡರಾದ ಬಸವಲಿಂಗಪ್ಪ ಭೂತೆ, ಅರವಿಂದಗೌಡ ಪಾಟೀಲ್, ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಕಂಬಳಿ, ಉಪಾಧ್ಯಕ್ಷ ಈಶಪ್ಪ ಹಟ್ಟಿ, ಕೆಎಂಎಫ್ ನಿರ್ದೇಶಕ ಶಿವಪ್ಪ ವಾದಿ, ಮಲ್ಲಿಕಾರ್ಜುನ ಹರ್ಲಾಪುರ, ಅಯ್ಯನಗೌಡ್ರ ಕೆಂಚಮ್ಮನವರ, ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ರಾಚಪ್ಪ, ತಾಪಂ ಸದಸ್ಯ ಶರಣಪ್ಪ ಇಂಗಳದಾಳ ಇದ್ದರು. ಕೇಂದ್ರ ಸರ್ಕಾರದ ಯೋಜನೆಗಳನ್ನು ಪಡೆಯುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಬಿಜೆಪಿ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಕೇಂದ್ರದ ಯೋಜನೆ ಮನೆ ಮನೆಗೆ ಹೋಗಿ ತಿಳಿಸಬೇಕು ಎನ್ನುತ್ತಾರೆ ಸಂಸದ ಸಂಗಣ್ಣ ಕರಡಿ.
ಕೇಂದ್ರದ ಉಜ್ವಲ ಯೋಜನೆ ಸದುಪಯೋಗಪಡಿಸಿಕೊಳ್ಳಿ: ಅರ್ಹ ಫಲಾನುಭವಿಗಳು ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಸದುಪಯೋಗಪಡಿಸಿಕೊಂಡು ಸಬಲರಾಗಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಉಜ್ವಲಯೋಜನೆಯಡಿ ಫಲಾನುಭವಿಗಳಿಗೆ ಗ್ಯಾಸ್ ಹಾಗೂ ಸಿಲಿಂಡರ್ ವಿತರಿಸಿ ಮಾತನಾಡಿದರು. ಮುದ್ರಾ, ಜನಧನ್, ಪಿ.ಎಂ.ವಿಶ್ವಕರ್ಮ, ಉಜ್ವಲ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಎಲ್‌ಇಡಿ ವಾಹನಗಳ ಮೂಲಕ ಎಲ್ಲ ಗ್ರಾಪಂ ಹಾಗೂ ನಗರ ಪ್ರದೇಶದ ವಾರ್ಡ್‌ಗಳಲ್ಲಿ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಯೋಜನೆಗಳ ಲಾಭ ಪಡೆದ ಫಲಾನುಭವಿಗಳನ್ನು ಒಗ್ಗೂಡಿಸಬೇಕು.
ವೈಚಾರಿಕ ಪ್ರಜ್ಞೆ ಮೂಡಿಸುವುದೆ ನಮ್ಮ ಉದ್ದೇಶ: ಸಚಿವ ಸತೀಶ್ ಜಾರಕಿಹೊಳಿ
ಈ ಯೋಜನೆಗಳಿಂದ ವಂಚಿತರಾದ ಫಲಾನುಭವಿಗಳಿಗೆ ಅದರ ಲಾಭ ಸಿಗುವಂತೆ ಮಾಡುವ ಈ ಕಾರ್ಯಕ್ರಮ ಅಧಿಕಾರಿಗಳು ಯಶಸ್ವಿಗೊಳಿಸಬೇಕು ಎಂದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ವರ್ಗಗಳ ಅಭಿವೃದ್ಧಿಗೆ ಪೂರಕವಾಗುವ ಯೋಜನೆ ಜಾರಿಗೊಳಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಂತೆ ಒಂದು ವರ್ಗದ ತುಷ್ಠಿಕರಣಕ್ಕೆ ಸೀಮಿತವಾಗಿಲ್ಲ. ಜನರ ಅಭಿವೃದ್ಧಿಯಿಂದ ಮಾತ್ರ ದೇಶ ಅಭಿವೃದ್ಧಿ ಎಂಬ ಸಂಕಲ್ಪದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.