ಶ್ರೀರಂಗಪಟ್ಟಣ(ಜ.11): ನನ್ನ ಮೇಲೆ ನಂಬಿಕೆ ಇಟ್ಟು ಒಮ್ಮೆ ಜೆಡಿಎಸ್‌ಗೆ ಪೂರ್ಣ ಬಹುಮತ ಕೊಡಿ. ಕರ್ನಾಟಕ ರಾಜ್ಯವನ್ನು ನಿಜವಾದ ರಾಮರಾಜ್ಯವನ್ನಾಗಿ ಮಾಡಿ ತೋರಿಸುವೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಭಾನು​ವಾರ ಕಾರ್ಯ​ಕ್ರ​ಮ​ವೊಂದ​ರಲ್ಲಿ ಮಾತ​ನಾ​ಡಿದ ಅವರು, ಮುಂದಿನ ಚುನಾವಣೆಯಲ್ಲಿ ಜಾತಿ, ಹಣದ ವ್ಯಾಮೋಹ ಬಿಟ್ಟು ಒಂದು ಬಾರಿ ಜೆಡಿಎಸ್‌ ಪಕ್ಷವನ್ನು ಗೆಲ್ಲಿಸಿ. ಮುಂದೆ ನನ್ನ ಯೋಜನೆಗೆ ಪಂಚರತ್ನ ಎಂದು ಹೆಸರಿಡುತ್ತೇನೆ. ಪಂಚರತ್ನ ಕಾರ್ಯಕ್ರಮ ಬೇಕೆಂದರೆ ಜೆಡಿಎಸ್‌ ಬೆಂಬಲಿಸಿ. ಅಭ್ಯರ್ಥಿ ಯಾರೇ ಇರಲಿ, ಎಲ್ಲಾ ಕ್ಷೇತ್ರದಲ್ಲೂ ನಾನೇ ಅಭ್ಯರ್ಥಿ ಎಂದು ಮತ ಕೊಡಿ. ನನ್ನ ಕನಸಿನ ಯೋಜನೆಗಳನ್ನು ಜಾರಿಗೆ ತಂದು ರಾಜ್ಯವನ್ನು ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ. ಬಿಜೆಪಿಯವರಂತೆ ಮಾತಿನಲ್ಲಷ್ಟೇ ನನ್ನ ರಾಮರಾಜ್ಯ ಇರುವುದಿಲ್ಲ. ನಿಜವಾದ ಅರ್ಥದಲ್ಲಿ ರಾಮರಾಜ್ಯ ಹೇಗಿರಬೇಕೆಂದು ನಿರ್ಮಾಣ ಮಾಡಿ ತೋರಿಸುತ್ತೇನೆ ಎಂದು ಹೇಳಿದರು. ಈ ಮೂಲಕ ಬಿಜೆಪಿ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ಅವರು ಯಾರೋ ನನಗೆ ಗೊತ್ತಿಲ್ಲ!

ಶ್ರೀರಂಗಪಟ್ಟಣ: ನೇರಳೇಕೆರೆಯಲ್ಲಿ ಸುದ್ದಿಗಾರರು ರಾಧಿಕಾ ಕುಮಾರಸ್ವಾಮಿ ಹಾಗೂ ಯುವರಾಜ್‌ ನಡುವಿನ ಹಣಕಾಸು ವ್ಯವಹಾರ, ಸಿಸಿಬಿ ವಿಚಾರಣೆ ಎದುರಿಸುತ್ತಿರುವ ಬಗ್ಗೆ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಯಾರಪ್ಪ ಅವರೆಲ್ಲ? ಅದ್ಯಾರೋ ನನಗೆ ಗೊತ್ತಿಲ್ಲ. ನನಗೆ ದುಡ್ಡು ಹೊಡೆಯೋ ಆಸಕ್ತಿ ಇಲ್ಲ. ನನಗಿರೋದು ಹೆಸರು ಮಾಡೋ ಆಸಕ್ತಿ ಅಷ್ಟೇ ಎಂದರು.