Asianet Suvarna News Asianet Suvarna News

ಜಮ್ಮು ಕಾಶ್ಮೀರ ರಾಜ್ಯದ ಪ್ರಚಾರ ಸಮಿತಿಗೆ ರಾಜೀನಾಮೆ, ಕಾಂಗ್ರೆಸ್‌ನಿಂದ ಆಜಾದ್ ಆಗ್ತಾರಾ ಗುಲಾಂ ನಬಿ?

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿದ ಎರಡು ಗಂಟೆಯ ಒಳಗಾಗಿ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದರ ಬೆನ್ನಲ್ಲಿಯೇ ಅವರು ಕಾಂಗ್ರೆಸ್‌ ತೊರೆಯುವ ಸುದ್ದಿಗಳು ಬರಲಾರಂಭಿಸಿದೆ. ಆದರೆ, ಕಾಂಗ್ರೆಸ್ ಮೂಲಗಳ ಪ್ರಕಾರ, ಜಮ್ಮು ಕಾಶ್ಮೀರದ ಪೂರ್ಣ ಕಮಾಂಡ್‌ ತಮ್ಮಲ್ಲಿ ಇರಬೇಕು ಎಂದು ಗುಲಾಂ ನಬಿ ಆಜಾದ್‌ ಬಯಸಿದ್ದು, ಹೈಕಮಾಂಡ್‌ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
 

Ghulam Nabi Azad will not leave Congress yet Resigns from JK Campaign Committee just to create pressure san
Author
Bengaluru, First Published Aug 17, 2022, 5:04 PM IST

ನವದೆಹಲಿ (ಆ.17): ಜಮ್ಮು ಕಾಶ್ಮೀರದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಗುಲಾಂ ನಬಿ ಆಜಾದ್‌ ಅವರನ್ನು ಕಾಂಗ್ರೆಸ್‌ ಹೈ ಕಮಾಂಡ್‌ ಆಯ್ಕೆ ಮಾಡಿತ್ತು. ಆದರೆ, ಈ ಘೋಷಣೆ ಬಿದ್ದ ಕೇವಲ ಎರಡೇ ಗಂಟೆಗಳಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರ ಬೆನ್ನಲ್ಲಿಯೇ ಅವರು ಬಿಜೆಪಿಗೆ ಹೋಗುವ ಯೋಚನೆಯಲ್ಲಿದ್ದಾರಾ? ಅಥವಾ ತಮ್ಮದೇ ಹೊಸ ಪಕ್ಷವನ್ನು ರಚನೆ ಮಾಡುವ ಯೋಚನೆಯಲ್ಲಿದ್ದಾರೆಯೇ? ಎನ್ನುವ ಚರ್ಚೆಗಳು ಆರಂಭವಾಗಿದೆ. ಆದರೆ, ಗುಲಾಂ ನಬಿ ಆಜಾದ್‌ ಅವರ ಆಪ್ತರೊಬ್ಬರ ಪ್ರಕಾರ, ಸದ್ಯದ ಮಟ್ಟಿಗೆ ಕಾಂಗ್ರೆಸ್‌ ಪಕ್ಷವನ್ನು ತೊರೆಯುವ ಯಾವ ಯೋಚನೆಗಳೂ ಅವರಲ್ಲಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿಯೇ ಇದ್ದುಕೊಂಡು ತಮ್ಮ ಆಕ್ರೋಶವನ್ನು ತೋರಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. 73ರ ಹರೆಯದ ಆಜಾದ್ ಅವರು ತಮ್ಮ ರಾಜಕೀಯದ ಕೊನೆಯ ಹಂತದಲ್ಲಿ ರಾಜ್ಯ ಕಾಂಗ್ರೆಸ್‌ನ ಸಾರಥ್ಯವನ್ನು ವಹಿಸಿಕೊಳ್ಳುವ ಆಸೆಯಲ್ಲಿದ್ದರು. ಆದರೆ ಕೇಂದ್ರ ನಾಯಕತ್ವವು ಈ ಜವಾಬ್ದಾರಿಯನ್ನು 47 ವರ್ಷದ ವಿಕಾರ್ ರಸೂಲ್ ವಾನಿಗೆ ನೀಡಿದೆ. ವಾನಿ, ಗುಲಾಂ ನಬಿ ಆಜಾದ್ ಅವರ ಆಪ್ತರಾಗಿದ್ದಾರೆ. ಅವರು ಬನಿಹಾಲ್‌ನಿಂದ ಶಾಸಕರಾಗಿದ್ದವರು. ಆಜಾದ್ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಆಜಾದ್ ಗೆ ಆಪ್ತರಾಗಿರುವ ನಾಯಕರನ್ನು ಕಾಂಗ್ರೆಸ್ ನಾಯಕತ್ವ ಕೆಣಕುತ್ತಿದೆ ಎಂದು ಇದನ್ನು ಅರ್ಥೈಸಲಾಗುತ್ತಿದೆ.

ಗುಲಾಂ ಹಾಗೂ ಕಾಂಗ್ರೆಸ್‌ ನಡುವ ತಿಕ್ಕಾಟ: ಕಳೆದ ಒಂದೂವರೆ ವರ್ಷಗಳಿಂದ ಗುಲಾಂ ನಬಿ ಆಜಾದ್ ಮತ್ತು ಕಾಂಗ್ರೆಸ್ ಹೈಕಮಾಂಡ್ ನಡುವೆ ಘರ್ಷಣೆ ನಡೆಯುತ್ತಿದೆ. ಸಮನ್ವಯದ ಬದಲಿಗೆ, ಈ ಸಂಘರ್ಷ ನಿರಂತರವಾಗಿ ಹೆಚ್ಚುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಗುಲಾಂ ನಬಿ ಆಜಾದ್ ಅವರ ರಾಜಕೀಯ ಪ್ರಭಾವವನ್ನು ಕಡಿಮೆ ಮಾಡಲು ಕಾಂಗ್ರೆಸ್ ನಾಯಕತ್ವ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಗುಲಾಂ ನಬಿ ಆಜಾದ್ ಕೂಡ ಕಾಲಕಾಲಕ್ಕೆ ನಾಯಕತ್ವಕ್ಕೆ ಸವಾಲು ಹಾಕುತ್ತಿದ್ದಾರೆ. ಆಜಾದ್ ಅವರ ಅಸಮಾಧಾನವು 2022 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಷ್ಟವಾಗಬಹುದು, ಏಕೆಂದರೆ ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್‌ನಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿದ್ದಾರೆ. ಗುಲಾಂ ನಬಿ ಆಜಾದ್ ಅವರು ಹಿಂದಿನ ರಾಜ್ಯಾಧ್ಯಕ್ಷ ಅಹ್ಮದ್ ಮಿರ್ ಅವರನ್ನು ವಿರೋಧಿಸುತ್ತಿದ್ದರು. ಮೀರ್ ಜೊತೆ ಬಹಳ ದಿನಗಳಿಂದ ಮನಸ್ತಾಪವಿತ್ತು. ಅವರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಹೈಕಮಾಂಡ್ ಕೂಡ ಮೀರ್ ಅವರನ್ನು ಪದಚ್ಯುತಗೊಳಿಸಿತ್ತು. ಕಾಂಗ್ರೆಸ್ ಅಧ್ಯಕ್ಷ ಸ್ಥಾನವೂ ಆಜಾದ್ ಅವರ ಆಪ್ತರಿಗೆ ಸಿಕ್ಕಿದ್ದರೂ, ಅದನ್ನೂ ಕೂಡ ಆಜಾದ್‌ ಇಷ್ಟಪಟ್ಟಿಲ್ಲ. ಅಷ್ಟೇ ಅಲ್ಲ, ಆಜಾದ್ ಅವರ ನಿಕಟವರ್ತಿಗಳನ್ನು ಒಂದಲ್ಲ ಒಂದು ಹುದ್ದೆಯಲ್ಲಿ ಇರಿಸಲಾಗುತ್ತಿದೆ, ಆದರೆ ಅನಾರೋಗ್ಯದ ಕಾರಣ ಆಜಾದ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ನಿರಾಕರಿಸಿದರು.

ನನ್ನ ಕೆಲಸವನ್ನೊಬ್ಬರು ಗುರುತಿಸಿದರು: ಗುಲಾಂ ನಬಿ ಅಜಾದ್‌

ಕಿಂಗ್‌ ಮೇಕರ್‌ ಆಗುವ ಗುರಿಯಲ್ಲಿ ಆಜಾದ್: ಆಜಾದ್ ಅವರ 20 ಆಪ್ತರು ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಿದಾಗ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದ್ದರು. ಇದರೊಂದಿಗೆ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಸಮಿತಿಯಲ್ಲಿ ತಮ್ಮ ನೆಲೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದರು, ಆದರೆ ಹೈಕಮಾಂಡ್ ತಲೆಬಾಗುವ ಬದಲು ರಾಜೀನಾಮೆಯನ್ನು ಅಂಗೀಕರಿಸಿತು. ಜಮ್ಮು ಪ್ರದೇಶದ ರಾಂಬನ್, ದೋಡಾ, ಕಿಶ್ತ್ವಾರ್, ರಿಯಾಸಿ ಮತ್ತು ಉಧಂಪುರ ಜಿಲ್ಲೆಗಳಲ್ಲಿ ಆಜಾದ್ ಹೆಚ್ಚು ಪ್ರಭಾವ ಹೊಂದಿದ್ದಾರೆ. ಈ 5 ಜಿಲ್ಲೆಗಳಲ್ಲಿ 12 ವಿಧಾನಸಭಾ ಸ್ಥಾನಗಳಿವೆ. ಎಂಟು ತಿಂಗಳ ಹಿಂದೆ ಆಜಾದ್ ಈ ಜಿಲ್ಲೆಗಳತ್ತ ಗಮನ ಹರಿಸಿ ಕಿಂಗ್ ಮೇಕರ್ ಆಗಲು ಯತ್ನಿಸುತ್ತಿದ್ದರು.

ಕಾಂಗ್ರೆಸ್‌ಗೆ ಮತ್ತೊಂದು ಸಂಕಷ್ಟ, ಗುಲಾಂ ನಬಿ ಆಜಾದ್ ರಾಜಕೀಯಕ್ಕೆ ಗುಡ್‌ಬೈ?

ಕಾಂಗ್ರೆಸ್‌ ನಾಯಕರ ಸಲಹೆ ಧಿಕ್ಕರಿಸಿದ್ದ ಆಜಾದ್: 2021ರ ಫೆಬ್ರವರಿಯಲ್ಲಿ ಗುಲಾಂ ನಬಿ ಆಜಾದ್‌ ಅವರ ರಾಜ್ಯಸಭಾ ಅವಧಿ ಕೊನೆಗೊಂಡ ಬಳಿಕ ಕಾಂಗ್ರೆಸ್‌ ಪಕ್ಷದ ಜೊತೆ ಅವರ ಭಿನ್ನಾಭಿಪ್ರಾಯ ಆರಂಭವಾಗಿತ್ತು. ಬೇರೆ ರಾಜ್ಯದಿಂದ ಮತ್ತೊಮ್ಮೆ ರಾಜ್ಯಸಭಾ ಟಿಕೆಟ್‌ ಪಡೆಯುವ ನಿರೀಕ್ಷೆಯಲ್ಲಿದ್ದ ಗುಲಾಂ ನಬಿ ಆಜಾದ್‌ಗೆ ಆಘಾತ ನೀಡಿದ್ದ ಕಾಂಗ್ರೆಸ್‌ ಅವರನ್ನು ರಾಜ್ಯಸಭೆಗೆ ಕಳಿಸುವ ನಿರ್ಧಾರ ಮಾಡಿರಲಿಲ್ಲ. ಆಜಾದ್‌ ಅವರ ರಾಜ್ಯಸಭಾ ಅವಧಿ ಕೊನೆಗೊಂಡ ಬಳಿಕ, ಪ್ರಧಾನಿ ನರೇಂದ್ರ ಕೂಡ ಭಾವುಕವಾಗಿ ವಿದಾಯ ನೀಡಿದ್ದರು. 2021ರಲ್ಲಿ ಮೋದಿ ಸರ್ಕಾರ ಗುಲಾಂ ನಬಿ ಆಜಾದ್‌ಗೆ ಪದ್ಮಭೂಷಣ ಪ್ರಶಸ್ತಿ ನೀಡಿತ್ತು. ಹಲವು ಕಾಂಗ್ರೆಸ್ ನಾಯಕರು ಇದನ್ನು ಅವರು ಸ್ವೀಕರಿಸಬಾರದು ಎಂದು ಹೇಳಿದ್ದರು. ಆದರೆ, ಈ ಸಲಹೆಯನ್ನು ಅವರು ಧಿಕ್ಕರಿಸಿದ್ದರು.
 

Follow Us:
Download App:
  • android
  • ios