* ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ಶಾಸಕರಿಂದ ಅಡ್ಡಮತದಾನ* ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? * ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶ್ರೀನಿವಾಸ್ ಗೌಡ

ಕೋಲಾರ, (ಜೂನ್.11): ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸುವ ಸಲುವಾಗಿ ಜೆಡಿಎಸ್‌ ವರಿಷ್ಠರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯತಂತ್ರದಲ್ಲಿ ವಿಫಲರಾಗಿದ್ದು, ಅಸಮಾಧಾನಿತ ಐವರ ಪೈಕಿ ಮೂವರು ಮಾತ್ರ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಿದ್ದಾರೆ. ಗುಬ್ಬಿಯ ಎಸ್‌.ಆರ್‌.ಶ್ರೀನಿವಾಸ್‌ ಬಿಜೆಪಿಗೆ ಮತ ಚಲಾಯಿಸಿದರೆ, ಕೋಲಾರದ ಶೀನಿವಾಸ ಗೌಡ ಕಾಂಗ್ರೆಸ್‌ಗೆ ಮತ ಹಾಕಿದರು. ಇದರಿಂದ ಜೆಡಿಎಸ್‌ಗೆ ತೀವ್ರ ಮುಖಭಂಗವಾದಂತಾಗಿದೆ. ಇದರಿಂದ ಜೆಡಿಎಸ್‌ ವರಿಷ್ಠರು ಇಬ್ಬರು ಶಾಸಕರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೋಲಾರ ಶ್ರೀನಿವಾಸ್ ಗೌಡ, ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ನಾನು ಯಾಕೆ ಅಡ್ಡ ಮತದಾನ ಮಾಡಿದೆ ಎಂಬುದಕ್ಕೆ ಈಗ ಹಳೆ ಕಥೆ ಬಿಚ್ಚಿಟ್ಟು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಜೆಡಿಎಸ್‌ಗೆ ಇಬ್ಬರು ಶಾಸಕರ ಅಡ್ಡ ಮತದಾನದ ಏಟು!

ನಿನ್ನೆ (ಶುಕ್ರವಾರ) ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ಗೆ ಮತ ಹಾಕಿದ್ದೇನೆ. ಈ ಹಿನ್ನೆಲೆ ಜೆಡಿಎಸ್ ಮುಖಂಡರು ನನ್ನ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. 7 ತಿಂಗಳ ಹಿಂದೆಯೇ ಪ್ರಜ್ವಲ್ ರೇವಣ್ಣ ಅವರು ನನ್ನನ್ನು ಉಚ್ಚಾಟನೆ ಮಾಡಿದ್ದರು. ಇದೀಗ ಜೆಡಿಎಸ್‌ನವರಿಗೆ ನನ್ನ ವಿಷಯದಲ್ಲಿ ಮಾತನಾಡುವ ಹಕ್ಕು ಇಲ್ಲ. ಅವರು ಉಚ್ಚಾಟನೆ ಮಾಡಿದ ಬಳಿಕ ನಾನು ಯಾವುದೇ ಪಕ್ಷಕ್ಕೂ ಹೋಗಬಹುದು ಎಂದು ಹೇಳಿದರು.

ನಾನೊಬ್ಬ ಹಿರಿಯ ಶಾಸಕನಾಗಿದ್ದರೂ ನನ್ನನ್ನು ಸಚಿವನನ್ನಾಗಿ ಮಾಡಿಲ್ಲ. ನಾನು ಮಂತ್ರಿಯಾಗಿದ್ದಾಗ ಕುಮಾರಸ್ವಾಮಿಯವರು ಶಾಸಕರೂ ಆಗಿರಲಿಲ್ಲ. ಇಂತಹ ಹಿರಿಯ ಶಾಸಕನನ್ನು ಪಕ್ಷ ಸರಿಯಾಗಿ ನೋಡಿಕೊಂಡಿಲ್ಲ. ನನ್ನ ಹಿನ್ನೆಲೆ ನೋಡಿಯಾದರೂ ಗೌರವ ನೀಡಬೇಕಿತ್ತು ಎಂದು ನುಡಿದರು.

ನಾನು ಧರಂ ಸಿಂಗ್ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಅವರ ನಡತೆ ನ್ಯಾಯಯುತವಾಗಿರಲಿಲ್ಲ. ಈಗ ತಾಲೂಕು, ಜಿಲ್ಲಾ ಪಂಚಾಯತ್ ಎಲ್ಲದರಿಂದಲೂ ನಾನು ಹೊರ ಬಂದಿದ್ದೇನೆ. ನನ್ನ ಕೈಲಾದಮಟ್ಟಿಗೆ ಅಭಿವೃದ್ಧಿ ಮಾಡಿದ್ದೇನೆ. ಕೋಲಾರಕ್ಕೆ ರಿಂಗ್ ರಸ್ತೆ ಮಾಡಿಸುವ ಕನಸಿದೆ ಎಂದು ತಿಳಿಸಿದರು.

2018ರಲ್ಲಿ ನನಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತಪ್ಪಿತ್ತು. ಕಾಂಗ್ರೆಸ್‌ನಲ್ಲಿ ಟಿಕೆಟ್ ಕೇಳಿದ್ದಾಗ ಮಿಸ್ ಆಯ್ತು ಎಂದು ಜೆಡಿಎಸ್‌ನಿಂದ ಸ್ಪರ್ಧೆಗೆ ನಿಂತಿದ್ದೆ. ವಿಧಾನಪರಿಷತ್ ಚುನಾವಣೆಯಲ್ಲಿ ಎಲ್ಲಾ ಶಾಸಕರಿಗೂ 50 ಲಕ್ಷ ರೂ. ನೀಡಲಾಗಿದೆ. ಅದನ್ನು ಎಲ್ಲಾ ಜೆಡಿಎಸ್ ಶಾಸಕರೂ ಪಡೆದಿದ್ದಾರೆ. ಆದರೆ ನಾನು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.