ಜೆಡಿಎಸ್‌ಗೆ ಇಬ್ಬರು ಶಾಸಕರ ಅಡ್ಡ ಮತದಾನದ ಏಟು!

* ಕೋಲಾರ ಶ್ರೀನಿವಾಸಗೌಡ ಕಾಂಗ್ರೆಸ್‌ಗೆ, ಗುಬ್ಬಿ ಶ್ರೀನಿವಾಸ್‌ ಬಿಜೆಪಿಗೆ ಮತ

* 32 ಮತಗಳನ್ನು ಕಾಯ್ದುಕೊಳ್ಳುವಲ್ಲಿ ವಿಫಲ

* ಜೆಡಿಎಸ್‌ಗೆ ತೀವ್ರ ಮುಖಭಂಗ

* ರಾಹುಕಾಲ ಮುಗಿಯಲೆಂದು 2 ತಾಸು ಕಾದು ಮತ ಹಾಕಿದರೂ ಸಿಗದ ಜಯ

Rajya Sabha polls 2 JDS lawmakers cross vote in Karnataka pod

ಬೆಂಗಳೂರು(ಜೂ,.11): ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸುವ ಸಲುವಾಗಿ ಜೆಡಿಎಸ್‌ ವರಿಷ್ಠರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯತಂತ್ರದಲ್ಲಿ ವಿಫಲರಾಗಿದ್ದು, ಅಸಮಾಧಾನಿತ ಐವರ ಪೈಕಿ ಮೂವರು ಮಾತ್ರ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಿದರು.

ಗುಬ್ಬಿಯ ಎಸ್‌.ಆರ್‌.ಶ್ರೀನಿವಾಸ್‌ ಬಿಜೆಪಿಗೆ ಮತ ಚಲಾಯಿಸಿದರೆ, ಕೋಲಾರದ ಶೀನಿವಾಸ ಗೌಡ ಕಾಂಗ್ರೆಸ್‌ಗೆ ಮತ ಹಾಕಿದರು. ಇದರಿಂದ ಜೆಡಿಎಸ್‌ಗೆ ತೀವ್ರ ಮುಖಭಂಗವಾದಂತಾಗಿದೆ.

ನಗರದ ಯಶವಂತಪುರ ಬಳಿಯ ತಾಜ್‌ ವಿವಾಂತದಲ್ಲಿ ತಂಗಿದ್ದ ಸದಸ್ಯರು ಶುಕ್ರವಾರ ಬೆಳಗ್ಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರೊಂದಿಗೆ ಒಂದೇ ಬಸ್‌ನಲ್ಲಿ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಅಸಮಾಧಾನಿತ ಶಾಸಕರು ನೇರವಾಗಿ ವಿಧಾನಸೌಧಕ್ಕೆ ಬಂದು ಮತ ಹಾಕಿದರು.

ಗುಬ್ಬಿಯ ಎಸ್‌.ಆರ್‌.ಶ್ರೀನಿವಾಸ್‌, ಅರಸೀಕೆರೆಯ ಕೆ.ಎಂ.ಶಿವಲಿಂಗೇಗೌಡ, ಕೋಲಾರದ ಶೀನಿವಾಸ ಗೌಡ, ಅರಕಲಗೂಡಿನ ಎ.ಟಿ.ರಾಮಸ್ವಾಮಿ ಮತ್ತು ಚಾಮುಂಡೇಶ್ವರಿಯ ಜಿ.ಟಿ.ದೇವೇಗೌಡ ಅವರು ಗುರುವಾರ ನಡೆದ ಜೆಡಿಎಸ್‌ ಶಾಸಕಾಂಗ ಸಭೆಗೆ ಗೈರಾಗಿದ್ದರು. ಇದು ರಾಜಕೀಯವಾಗಿ ತೀವ್ರ ಕುತೂಹಲ ಮೂಡಿಸಿತ್ತು.

ಅಸಮಾಧಾನಗೊಂಡಿದ್ದ ಐವರು ಶಾಸಕರ ಪೈಕಿ ಶ್ರೀನಿವಾಸ್‌ ಮತ್ತು ಶ್ರೀನಿವಾಸಗೌಡ ಅಡ್ಡಮತದಾನ ಮಾಡಿದ್ದಾರೆ. ಇನ್ನುಳಿದ ಮೂವರು ಪಕ್ಷದ ಅಭ್ಯರ್ಥಿ ಕುಪೇಂದ್ರರೆಡ್ಡಿಗೆ ಅವರಿಗೆ ಮತದಾನ ಮಾಡಿದರು. ಇನ್ನುಳಿದ ಸದಸ್ಯರು ಸಹ ಜೆಡಿಎಸ್‌ ಅಭ್ಯರ್ಥಿಗೆ ತಮ್ಮ ಹಕ್ಕು ಚಲಾಯಿಸಿದರು. ಒಟ್ಟು 30 ಮತಗಳು ಜೆಡಿಎಸ್‌ ಅಭ್ಯರ್ಥಿಗೆ ಬಂದಿವೆ. ಗುರುವಾರ ಶಾಸಕಾಂಗ ಪಕ್ಷದ ಸಭೆಯಿಂದಲೇ ಕುಮಾರಸ್ವಾಮಿ ಅವರು ಅಸಮಾಧಾನಿತರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ, ಶ್ರೀನಿವಾಸಗೌಡ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅಡ್ಡ ಮತದಾನ ಭೀತಿಯಿಂದಲೇ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹೋಟೆಲ್‌ಗೆ ಕರೆದೊಯ್ಯಲಾಗಿತ್ತು. ಬುಧವಾರ ರಾತ್ರಿಯೇ ಶಾಸಕರನ್ನು ಕರೆದೊಯ್ದು ಹೋಟೆಲ್‌ನಲ್ಲಿ ಇಡಲಾಗಿತ್ತು. ಆದರೂ ಗುಬ್ಬಿಯ ಶ್ರೀನಿವಾಸ್‌ ಪಕ್ಷದ ಏಜೆಂಟರಿಗೆ ತಿಳಿಯದಂತೆ ಚಾಣಾಕ್ಷತನದಿಂದ ಬಿಜೆಪಿಗೆ ಮತಹಾಕಿದ್ದಾರೆ.

ಶುಕ್ರವಾರ ಬೆಳಗ್ಗೆ ಎಚ್‌.ಡಿ.ರೇವಣ್ಣ, ಪುಟ್ಟರಾಜು ಮಾತ್ರ ಬೇಗ ಬಂದು ಮತದಾನ ಕೇಂದ್ರದಲ್ಲಿದ್ದರು. ಇನ್ನುಳಿದವರು ಹೋಟೆಲ್‌ನಲ್ಲಿಯೇ ತಿಂಡಿ ಸೇವಿಸಿ, ವಿಧಾನಸೌಧಕ್ಕೆ ಬಸ್‌ನಲ್ಲಿ ಆಗಮಿಸಿ ಮತ ಚಲಾಯಿಸಿದರು. ಕುಮಾರಸ್ವಾಮಿ ಅವರು ಸಹ ಬಸ್‌ನಲ್ಲಿ ಶಾಸಕರೊಂದಿಗೆ ಆಗಮಿಸಿದರು.

ರಾಹುಕಾಲ ಬಳಿಕ ಜೆಡಿಎಸ್‌ ಶಾಸಕರ ಮತದಾನ:

ಶುಕ್ರವಾರ ಬೆಳಗ್ಗೆ 9 ಗಂಟೆಗೆ ಮತದಾನ ಆರಂಭಗೊಂಡಿದ್ದು, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಬೆಳಗ್ಗೆ ಮತದಾನ ಮಾಡಿದರು. ಜೆಡಿಎಸ್‌ ಸದಸ್ಯರು ಬಸ್‌ನಲ್ಲಿ ವಿಧಾನಸೌಧಕ್ಕೆ ಬಂದಾಗ ರಾಹುಕಾಲ ಸಮೀಪಿಸಿತ್ತು. ಹೀಗಾಗಿ ರೇವಣ್ಣ ಸಲಹೆ ಮೇರೆಗೆ ವಿಧಾನಸೌಧಕ್ಕೆ ಬಂದ ಶಾಸಕರು ಪಕ್ಷದ ಕಚೇರಿಯಲ್ಲಿ ರಾಹುಕಾಲ ಕಳೆಯುವವರೆಗೆ ಕಾಲ ಕಳೆದರು. ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ರಾಹುಕಾಲ ಇದ್ದು, ಅದು ಮುಗಿದ ಬಳಿಕ ಎಲ್ಲರೂ ಒಟ್ಟಾಗಿ ಬಂದು ಮತ ಚಲಾಯಿಸಿದರು.

ಎಸ್‌.ಆರ್‌.ಶ್ರೀನಿವಾಸ್‌, ಕೆ.ಎಂ.ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಮತ್ತು ಜಿ.ಟಿ.ದೇವೇಗೌಡ ಅವರು ನೇರವಾಗಿ ವಿಧಾನಸೌಧಕ್ಕೆ ಪ್ರತ್ಯೇಕವಾಗಿ ಬಂದರು. ಶ್ರೀನಿವಾಸ ಗೌಡ ಅವರು ಪ್ರತ್ಯೇಕವಾಗಿ ಬಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಚೇರಿಗೆ ತೆರಳಿ ಅಲ್ಲಿಂದ ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಿದರು. ನಂತರ ಮತ್ತೆ ಸಿದ್ದರಾಮಯ್ಯ ಕಚೇರಿಗೆ ತೆರಳಿ ಸ್ವಲ್ಪಕಾಲ ಚರ್ಚೆ ನಡೆಸಿ ನಂತರ ಹಿಂತಿರುಗಿದರು. ಗುಬ್ಬಿಯ ಶ್ರೀನಿವಾಸ ಅವರು ವಿಧಾನಸೌಧಕ್ಕೆ ಬಂದು ನೇರವಾಗಿ ಮತದಾನ ಕೇಂದ್ರಕ್ಕೆ ತೆರಳಿ ಬಿಜೆಪಿಗೆ ಮತ ಹಾಕಿ ಹಿಂತಿರುಗಿದರು.

Latest Videos
Follow Us:
Download App:
  • android
  • ios