Asianet Suvarna News Asianet Suvarna News

ಗಾಣಿಗ ಜಾತಿಯ ಪ್ರಧಾನಿ ಮೋದಿಗೆ ಗಾಣಿಗರ ಸಮಸ್ಯೆ ಗೊತ್ತಿಲ್ಲವೇ?: ಸಿದ್ದರಾಮಯ್ಯ

ಗಾಣಿಗ ಸಮುದಾಯಕ್ಕೆ ಸೇರಿದವರಾದ ಪ್ರಧಾನಿ ನರೇಂದ್ರ ಮೋದಿಯವರೇ ದೇಶದ ಪ್ರಧಾನಿಯಾಗಿದ್ದಾರೆ. ಆದರೂ ವಿಶ್ವಕರ್ಮ ಯೋಜನೆಯಲ್ಲಿ ಎಣ್ಣೆ ಉತ್ಪಾದನಾ ಘಟಕಗಳನ್ನು ಕೈಬಿಟ್ಟಿದ್ದಾರೆ. ನಿಮ್ಮ ಪ್ರಧಾನಿಗೆ ನಿಮ್ಮ ಸಮಸ್ಯೆ ಗೊತ್ತಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. 

Ganiga Caste PM Narendra Modi does not know the problem of Ganiga Community Says Siddaramaiah gvd
Author
First Published Dec 3, 2023, 2:38 PM IST

ಬೆಂಗಳೂರು (ಡಿ.03): ಗಾಣಿಗ ಸಮುದಾಯಕ್ಕೆ ಸೇರಿದವರಾದ ಪ್ರಧಾನಿ ನರೇಂದ್ರ ಮೋದಿಯವರೇ ದೇಶದ ಪ್ರಧಾನಿಯಾಗಿದ್ದಾರೆ. ಆದರೂ ವಿಶ್ವಕರ್ಮ ಯೋಜನೆಯಲ್ಲಿ ಎಣ್ಣೆ ಉತ್ಪಾದನಾ ಘಟಕಗಳನ್ನು ಕೈಬಿಟ್ಟಿದ್ದಾರೆ. ನಿಮ್ಮ ಪ್ರಧಾನಿಗೆ ನಿಮ್ಮ ಸಮಸ್ಯೆ ಗೊತ್ತಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ವಿಶ್ವಕರ್ಮ ಯೋಜನೆಯಲ್ಲಿ ಗಾಣಗಳನ್ನು ಕೈಬಿಟ್ಟಿರುವುದು ದುರ್ದೈವದ ಸಂಗತಿಯಾಗಿದೆ. ಗಾಣಗಳನ್ನೂ ಯೋಜನೆಯ ವ್ಯಾಪ್ತಿಗೆ ತರಬೇಕು ಎಂದು ಶೀಘ್ರದಲ್ಲೇ ಪ್ರಧಾನಿಗೆ ಪತ್ರ ಬರೆಯುತ್ತೇನೆ ಎಂದು ಅವರು ಭರವಸೆ ನೀಡಿದರು.

ಗಾಣಿಗರ ಅಭಿವೃದ್ಧಿಗೆ ನಿಗಮ: ಸಾಮಾಜಿಕ ನ್ಯಾಯ ನೀಡುವುದಕ್ಕೆ ಸರ್ಕಾರ ಬದ್ಧವಾಗಿದೆ. ಯಾರು ಏನೇ ಹೇಳಿದರೂ ರಾಜಿಯಾಗದೇ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಅಖಿಲ ಕರ್ನಾಟಕ ಗಾಣಿಗರ ಸಂಘದಿಂದ ಅಲಹಳ್ಳಿ ಅಂಜನಾಪುರದಲ್ಲಿ ಆಯೋಜಿಸಲಾಗಿದ್ದ ಸುವರ್ಣ ಮಹೋತ್ಸವ ಸಮಾರಂಭ, ಗಾಣಿಗ ಜನಾಂಗದ ಸಮಾವೇಶದಲ್ಲಿ ಅವರು ಮಾತನಾಡಿದರು.

ಭಾವನಾತ್ಮಕ ವಿಷಯ ಮುಂದಿಟ್ಟು ಕಾಂಗ್ರೆಸ್‌ ಅಧಿಕಾರ ಹಿಡಿಯಲ್ಲ: ಸಲೀಂ ಅಹ್ಮದ್

ಗಾಣಿಗ ನಿಗಮ ಸ್ಥಾಪನೆ: ಗಾಣಿಗ ಸಮಾಜದವರು ಎಣ್ಣೆ ಉತ್ಪಾದನೆಯ ವೃತ್ತಿ ಮಾಡುತ್ತಿದ್ದವರು. ಇತ್ತೀಚಿನ ವರ್ಷಗಳಲ್ಲಿ ಕೈಗಾರೀಕರಣವಾದ ನಂತರ, ಎಣ್ಣೆ ತಯಾರಿಸುವ ವೃತ್ತಿಯನ್ನು ಬಿಡಬೇಕಾದ ಪರಿಸ್ಥಿತಿ ಇದೆ. ಅನೇಕರು ಇದರಿಂದ ನಿರುದ್ಯೋಗಿಗಳಾಗಿದ್ದಾರೆ. ಈ ಸಮಾಜದಲ್ಲಿ ಜಮೀನು ಹೊಂದಿದವರು ಬಹಳ ಕಡಿಮೆ, ಅದರಲ್ಲೂ ಸಣ್ಣ ರೈತರು ಮಾತ್ರ ಇದ್ದಾರೆ. ಸಮುದಾಯದ ಅಭಿವೃದ್ಧಿಗಾಗಿ ಗಾಣಿಗ ನಿಗಮ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಈ ಹಿಂದೆ ಕಾಂತರಾಜು ಅವರನ್ನು ನಾನೇ ನೇಮಿಸಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿ ವರದಿಯನ್ನು ಸಿದ್ಧಪಡಿಸಲು ಸೂಚಿಸಿದ್ದೆ. ವೈಜ್ಞಾನಿಕವಾಗಿ ವರದಿ ಸಿದ್ಧ ಮಾಡಿದ್ದು, ಇನ್ನೂ ಸರ್ಕಾರ ಸ್ವೀಕರಿಸಿಲ್ಲ. ವರದಿಯನ್ನು ಸ್ವೀಕರಿಸಲೆಂದೇ ಆಯೋಗದ ಅವಧಿಯನ್ನು ಎರಡು ತಿಂಗಳು ವಿಸ್ತರಿಸಲಾಗಿದೆ. ವರದಿ ಬಂದ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಸರ್ಕಾರ ಪತನ: ರೇಣುಕಾಚಾರ್ಯ ಭವಿಷ್ಯ

ಸಮುದಾಯದ ಅಭಿವೃದ್ಧಿಗಾಗಿ 50 ಲಕ್ಷ ರು. ಅನುದಾನ ನೀಡಲಾಗುವುದು. ಅಗತ್ಯವಿರುವ ಜಮೀನು ಮಂಜೂರು ಮಾಡಲಾಗುವುದು ಎಂದರು. ಪೂರ್ಣಾನಂದಪುರಿ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಗಾಣಿಗರ ಸಂಘದ ಅಧ್ಯಕ್ಷ ಎಂ.ಆರ್.ರಾಜಶೇಖರ್, ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ, ಮೈಸೂರಿನ ಮಾಜಿ ಮೇಯರ್ ಅನಂತ್, ಮುಖಂಡರಾದ ಡಾ.ವಾಸಂತಿ, ರಮೇಶ್, ಎಂ.ಎಸ್.ಶ್ರೀನಿವಾಸಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios