ಕಾಂಗ್ರೆಸ್ ಮುಂದಿನ ಮುಖ್ಯಮಂತ್ರಿ ಶೀತಲ ಸಮರಕ್ಕೆ ಮತ್ತೋರ್ವ ನಾಯಕ ಎಂಟ್ರಿ
* ಕಾಂಗ್ರೆಸ್‌ನಲ್ಲಿ ಮತ್ತೆ ಮುಂದಿನ ಸಿಎಂ ಜಪ ಆರಂಭ
* ಮುಂದಿನ ಮುಖ್ಯಮಂತ್ರಿ ವಿಚಾರದ ಶೀತಲ ಸಮರಕ್ಕೆ ಬಿತ್ತು ತುಪ್ಪ
* ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದ ಪರಮೇಶ್ವರ್
ತುಮಕೂರು, (ನ.13): ಕಾಂಗ್ರೆಸ್‌ನಲ್ಲಿ ಮತ್ತೆ ಮುಂದಿನ ಸಿಎಂ (Congress Next CM) ಜಪ ಆರಂಭವಾಗಿದೆ. ಪರೋಕ್ಷವಾಗಿ ಸಿಎಂ ಗಾದಿ ಮೇಲೆ ಆಸೆ ಇದೆ ಎಂದು ಸಂದೇಶ ರವಾನಿಸುವ ಮೂಲಕ ಡಾ. ಜಿ ಪರಮೇಶ್ವರ್(Dr G Parameshwara), ಮುಖ್ಯಮಂತ್ರಿ (Chief Minister) ವಿಚಾರದ ಶೀತಲ ಸಮರಕ್ಕೆ ತುಪ್ಪ ಸುರಿದಿದ್ದಾರೆ
ರಾಜ್ಯಾದ್ಯಂತ ದಲಿತ ಸಿಎಂ ವಿಚಾರಕ್ಕೆ ಹಲವು ವರ್ಷಗಳಿಂದ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ ಇದಕ್ಕೆ ಪುಷ್ಟಿ ನೀಡುವಂತೆ ಇಂದು ತುಮಕೂರಿನಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್ ಅವರು ಅಚ್ಚರಿಯ ಹೇಳಿಕೆ ನೀಡುವ ಮೂಲಕ ಮತ್ತೆ ದಲಿತ ಸಿಎಂ ರೇಸ್ ನಲ್ಲಿ ತಾವು ಇರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಮುಂದಿನ ಸಿಎಂ ಯಾರು? ಈ ಪ್ರಶ್ನೆಗೆ ಬಿಎಸ್‌ವೈ ಕೊಟ್ಟ ಉತ್ತರ!
ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಚಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪರಮೇಶ್ವರ್, ತಾವು ಕೂಡ ರಾಜ್ಯದ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಇರುವ ಬಗ್ಗೆ ತಿಳಿಸಿದ್ದಾರೆ.
ಕಳೆದ ಕೆಲ ತಿಂಗಳುಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ತಮ್ಮ ನಡುವೆ ನಡೆದ ಮಾತುಕತೆಯ ವಿಚಾರ ವಿನಿಮಯವನ್ನು ಮಾಡಿಕೊಂಡ ಪರಮೇಶ್ವರ್, ರಾಹುಲ್ ಗಾಂಧಿ ಅವರು ತಮ್ಮನ್ನು ಏತಕ್ಕಾಗಿ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಸದ್ದು ಮೊಳಗುತ್ತಿದೆ ಎಂದು ತಮ್ಮನ್ನು ಪ್ರಶ್ನಿಸಿದ್ದರು. ಇದಕ್ಕೆ ತಾವು ಕೂಡ ರಾಜ್ಯದ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿಯುವ ಆಸೆ ಇರುವ ಬಗ್ಗೆ ರಾಹುಲ್ ಗಾಂಧಿಗೆ ತಿಳಿಸಿದ್ದೇನೆ ಎಂದರು.
ಈ ಮೂಲಕ ತಾವು ಕೂಡ ಒಮ್ಮೆ ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರುವ ಇಂಗಿತವನ್ನು ವ್ಯಕ್ತಪಡಿಸುವ ಮೂಲಕ ವಿರೋಧಿ ಬಣಕ್ಕೆ ನೇರ ಟಾಂಗ್ ನೀಡಿದ್ದಾರೆ.
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಇನ್ನು ಈ ಬಗ್ಗೆ ಇಷ್ಟ ಇರುವವರು ಹಾಗೂ ಇಷ್ಟ ಇಲ್ಲದೆ ಇರುವವರು ಕೂಡ ಚರ್ಚೆಯಲ್ಲಿ ಭಾಗವಹಿಸುತ್ತಾರೆ. ಮುಂದಿನ ದಿನದಲ್ಲಿ ಅದೃಷ್ಟ ಯಾರಿಗೆ ಒಲಿಯುತ್ತದೆ ನೋಡೋಣ ಎನ್ನುವ ಮೂಲಕ ದಲಿತ ಸಿಎಂ ವಿರೋಧಿ ಬಣಕ್ಕೆ ನೇರ ಎಚ್ಚರಿಕೆಯನ್ನು ಸಹ ಪರಂ ರವಾನಿಸಿದ್ದಾರೆ.
ಮುಂದಿನ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ. ಅಲ್ಲದೇ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕಿತ್ತಾಡಿಕೊಂಡಿರುವ ಉದಾಹರಣೆಗಳಿವೆ.
ಸಾಕಷ್ಟೂ ಸಂಚಲನ ಸೃಷ್ಟಿಸಿದ್ದ ಕಾಂಗ್ರೆಸ್‌ನ ಮುಂದಿನ ಸಿಎಂ ವಿಚಾರಕ್ಕೆ ಖುದ್ದು ಹೈಕಮಾಂಡ್ ತೆರೆ ಎಳೆದಿತ್ತು. ಈ ವಿಚಾರ ಚರ್ಚೆ ಮಾಡದಂತೆ ರಾಜ್ಯ ನಾಯಕರಿಗೆ ಖಡಕ್ ಸಂದೇಶ ರವಾನಿಸಿತ್ತು. ಆಗ ಕೊಂಚ ಸೈಲೆಂಟ್ ಆಗಿದ್ದ ಮುಂದಿನ ಸಿಎಂ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಮುಂದಿನ ದಲಿತ ಸಿಎಂ ಕೂಗು ಕೇಳಿಬಂದಿದೆ.