ಸ್ಟಾರ್ ಪ್ರಚಾರಕರೂ ಆಗಿರುವ ಜಮೀರ್ ಅಹಮದ್ ಖಾನ್ ಅವರನ್ನೇ ಪ್ರಚಾರ ಹಾಗೂ ರೋಡ್ ಶೋಗೆ ಕಳುಹಿಸುವಂತೆ 50 ಕ್ಷೇತ್ರಗಳಿಂದ ಅಭ್ಯರ್ಥಿಗಳು ಬೇಡಿಕೆ ಇಟ್ಟಿದ್ದು, ಜಮೀರ್ ತೆಲಂಗಾಣದಲ್ಲೂ ಫೇವರೇಟ್ ಆಗಿದ್ದಾರೆ.
ಹೈದರಾಬಾದ್(ನ.19): ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿರುವ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ವಾರ್ ರೂಮ್‌ನಲ್ಲಿ ಫುಲ್ ಡಿಮ್ಯಾಂಡ್. ಸ್ಟಾರ್ ಪ್ರಚಾರಕರೂ ಆಗಿರುವ ಜಮೀರ್ ಅಹಮದ್ ಖಾನ್ ಅವರನ್ನೇ ಪ್ರಚಾರ ಹಾಗೂ ರೋಡ್ ಶೋಗೆ ಕಳುಹಿಸುವಂತೆ 50 ಕ್ಷೇತ್ರಗಳಿಂದ ಅಭ್ಯರ್ಥಿಗಳು ಬೇಡಿಕೆ ಇಟ್ಟಿದ್ದು, ಜಮೀರ್ ತೆಲಂಗಾಣದಲ್ಲೂ ಫೇವರೇಟ್ ಆಗಿದ್ದಾರೆ.
ಅಲ್ಪಸಂಖ್ಯಾತ ಸಮುದಾಯ ಪ್ರಾಬಲ್ಯ ಇರುವ ಕಡೆ ಜಮೀರ್ ಅಹಮದ್ ಖಾನ್ ಅವರು ಹೆಚ್ಚು ಜನಪ್ರಿಯತೆ ಪಡೆದಿದ್ದು, ಅವರನ್ನೇ ಪ್ರಚಾರ ಹಾಗೂ ರೋಡ್ ಶೋಗೆ ಕಳುಹಿಸುವಂತೆ ವಾರ್ ರೂಮ್ ನಲ್ಲಿ ಬೇಡಿಕೆ ಇಟ್ಟು ಎ ಐ ಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ.ವೇಣುಗೋಪಾಲ್ ಅವರ ಮೇಲೂ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ, ವೇಣುಗೋಪಾಲ್ ಅವರು ಹೆಚ್ಚುವರಿಯಾಗಿ 45 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ನಿರ್ದೇಶನ ನೀಡಿದ್ದಾರೆ.
ತೆಲಂಗಾಣ: ಕಾಂಗ್ರೆಸ್ ಭರ್ಜರಿ ‘ಗ್ಯಾರಂಟಿ’ ಪ್ರಣಾಳಿಕೆ; 6 ಗ್ಯಾರಂಟಿಗಳ ಜತೆಗೆ ಹಲವು ಭರವಸೆ!
ಜಮೀರ್ ಅಹಮದ್ ಅವರಿಗೆ ಆದಿಲಾಬಾದ್ ಹಾಗೂ ನಿಜಾಮಾಬಾದ್ ಲೋಕಸಭೆ ಕ್ಷೇತ್ರಗಳ ಆಸೀಫಾಬಾದ್, ಅದಿಲಾಬಾದ್, ಭೋದಾನ್, ಅರ್ಮುರ್, ಬಾಲ್ಕೊಂಡ ಕ್ಷೇತ್ರಗಳ ಕ್ಲಸ್ಟರ್ ಹೊಣೆಗಾರಿಕೆ ನೀಡಲಾಗಿದೆ. ಕಳೆದ ಹದಿನೈದು ದಿನಗಳಿಂದ ತೆಲಂಗಾಣದಲ್ಲೇ ಠಿಕಾಣಿ ಹೂಡಿ ಎಂಐಎಂ, ಬಿಆರ್‌ಎಸ್, ಬಿಜೆಪಿ ಸೇರಿದಂತೆ ಬೇರೆ ಪಕ್ಷಗಳ ಪ್ರಭಾವಿ ಮುಖಂಡರನ್ನು ಸೆಳೆದು ಎಲ್ಲರನ್ನೂ ಒಗ್ಗೂಡಿಸಿಕೊಂಡು ಪ್ರಚಾರದಲ್ಲಿ ತೊಡಗಿದ್ದು, ಇವರು ಪ್ರಚಾರ ಆರಂಭಿಸಿದ ನಂತರ ಒಂದು ರೀತಿಯಲ್ಲಿ ಸಂಚಲನ ಮೂಡಿದೆ.
ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಮುಸ್ಲಿಂ ಸ್ಪೀಕರ್ ಬಗ್ಗೆ ಮಾತನಾಡಿ ವಿವಾದದಲ್ಲಿ ಸಿಲುಕಿದ ಜಮೀರ್ ಖಾನ್
ಡಿಮ್ಯಾಂಡ್ ಎಲ್ಲೆಲ್ಲಿ?
ಪೆದ್ದಪಲ್ಲೇ, ಮಲ್ಕಾಜ್ ಗಿರಿ, ಸಿಕಂದರಾಬಾದ್, ಮೆಹಬೂಬ್ ನಗರ, ನಾಗರ ಕರ್ನೋಲ್, ವಾರಂಗಲ್, ಹೈದರಾಬಾದ್ ನಗರ ಭಾಗದ ರಾಮಗುಂಡಂ, ಮಂಥಣಿ, ನಾಮ್ಪಲ್ಲಿ, ಗಡ್ವಾಲ್, ಖ್ಯಾತ ಕ್ರಿಕೆಟಿಗ ಅಭ್ಯರ್ಥಿ ಆಗಿರುವ ಜ್ಯುಬ್ಲಿ ಹಿಲ್ಸ್, ಮಧು ಗೌಡ ಯಕ್ಷಿ ಸ್ಪರ್ಧೆ ಮಾಡಿರುವ ಲಾಲ್ ಬಹದ್ದೂರ್ ನಗರ್ ಸೇರಿ 50 ಕ್ಷೇತ್ರಗಳಿಂದ ಜಮೀರ್ ಅಹಮದ್ ಖಾನ್ ಅವರು ಪ್ರಚಾರಕ್ಕೆ ಬರಬೇಕು ಎಂದು ಡಿಮ್ಯಾಂಡ್ ಬಂದಿದೆ. ರಾಮಗುಂಡಂನಲ್ಲಿ ರಾಹುಲ್ ಗಾಂಧಿ ಜತೆ, ವಾನಪರ್ತಿ ಕ್ಷೇತ್ರದಲ್ಲಿ ಪ್ರಿಯಾಂಕ ಗಾಂಧಿ ಜತೆ ಕ್ಷೇತ್ರದಲ್ಲಿ ಸ್ಟಾರ್ ಪ್ರಚಾರಕರಾಗಿ ಜಮೀರ್ ಅಹಮದ್ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೆಸಿವಿ ಜತೆ ಕಾರ್ಯತಂತ್ರ
ತೆಲಂಗಾಣ ಕ್ಲಸ್ಟರ್ ಉಸ್ತುವಾರಿ ಘೋಷಣೆ ಆದ ನಂತರ ಜಮೀರ್ ಅಹಮದ್ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ದೆಹಲಿಗೆ ಕರೆಸಿಕೊಂಡು ಎರಡು ಗಂಟೆ ಕಾಲ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದ್ದರು. ಬಳಿಕ ಜಮೀರ್ ಅಹಮದ್ ಅವರು ನಿತ್ಯ ಹೈದರಾಬಾದ್‌ನಲ್ಲಿರುವ ಪ್ರದೇಶ ಕಾಂಗ್ರೆಸ್ ಕಚೇರಿ ವಾರ್ ರೂಮ್‌ಗೆ ಭೇಟಿ ನೀಡಿ ನಾಯಕರ ಜತೆ ಚರ್ಚೆಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ನಾಲ್ಕು ಗ್ಯಾರಂಟಿ ಜಾರಿ, ಅದರಿಂದ ಕೋಟ್ಯಂತರ ಕುಟುಂಬಗಳಿಗೆ ಅನುಕೂಲ ಆಗಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಹತ್ತು ವರ್ಷಗಳ ಕೆಸಿಆರ್ ಆಡಳಿತದ ವೈಫಲ್ಯಗಳ ಪಟ್ಟಿಯನ್ನು ಅವರು ಜನತೆಯ ಮುಂದಿಡುತ್ತಿದ್ದಾರೆ.
