ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಉಚಿತ ನೀರು, ವಿದ್ಯುತ್: ಎಚ್‌ಡಿಕೆ ಘೋಷಣೆ

* ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಜನರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿರುವ ಜೆಡಿಎಸ್
* ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಉಚಿತ ನೀರು, ವಿದ್ಯುತ್
* ಉಚಿತವಾಗಿ ಕೊಡಲು ಯೋಜನೆ ರೂಪಿಸುವುದಾಗಿ ಕುಮಾರಸ್ವಾಮಿ ಭರವಸೆ 

free education Water Power For Poor Peoples if jds form govt Says hd kumaraswamy rbj

ವರದಿ- ಸುರೇಶ್ ಎ ಎಲ್. ಏಷ್ಯಾ ನೆಟ್ ಸುವರ್ಣ ನ್ಯೂಸ್.

ಬೆಂಗಳೂರು, (ಜುಲೈ.10):
ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಉಚಿತವಾಗಿ ನೀರು ವಿದ್ಯುತ್ ಪಡೆಯಿರಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಜನತೆಗೆ ಕರೆ ನೀಡಿದ್ದಾರೆ. ದೆಹಲಿಯ ಆಮ್ ಆದ್ಮಿ ಸರ್ಕಾರದ ರೀತಿಯಲ್ಲಿ ಬಡಜನರಿಗೆ  ನೀರು ,ವಿದ್ಯುತ್ ಉಚಿತವಾಗಿ ಕೊಡಲು ಯೋಜನೆ ರೂಪಿಸುವುದಾಗಿ ಕುಮಾರಸ್ವಾಮಿ ಭರವಸೆ ಕೊಟ್ಟಿದ್ದಾರೆ.

 ಕಳೆದ ಒಂದು ವಾರದಿಂದ ಬೆಂಗಳೂರಿನ ನಾನಾ ಭಾಗದಲ್ಲಿ ಜನತಾಮಿತ್ರ ಕಾರ್ಯಕ್ರಮ ನಡೆಯುತ್ತಿದೆ. ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗ್ತಿದೆ. ಜನತಾ ಮಿತ್ರ ಎಂಬ ಹೆಸರಿನ ಹದಿನೈದು ವಾಹನಗಳು ನಗರದಲ್ಲಿ ಸಂಚರಿಸುತ್ತಿವೆ. ಮುಂದೆ ಅಧಿಕಾರಕ್ಕೆ ಬರುವ ಸರ್ಕಾರಗಳಿಂದ ಜನ ತಾವು ಏನನ್ನು ಬಯಸುತ್ತಿದ್ದೇವೆ ಎಂದು ಅಭಿಪ್ರಾಯಗಳನ್ನು ಬರೆದು ಈ ವಾಹನದಲ್ಲಿ ಇರುವ ಒಂದು ಡಬ್ಬಿಯಲ್ಲಿ ಹಾಕಬಹುದು. ಅವುಗಳ ಆಧಾರದ ಮೇಲೆ ಯೋಜನೆಗಳನ್ನು ರೂಪಿಸುವ ಬಗ್ಗೆ ಚಿಂತಿಸಲಾಗ್ತಿದೆ.

ಡಿಸೆಂಬರ್‌ನಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆ: ಕುಮಾರಸ್ವಾಮಿ

 ಇಂದು (ಭಾನುವಾರ) ದಾಸರ ಹಳ್ಳಿ ಕ್ಷೇತ್ರ ದ ಅಬ್ಬಿಗೆರೆಯಲ್ಲಿ ನಡೆದ ಜನತಾ ಮಿತ್ರ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ತಮಗಿರುವ ಹಲವು ಕಲ್ಪನೆಗಳನ್ನು ಕುಮಾರಸ್ವಾಮಿ ತೆರೆದಿಟ್ಟರು.ತಾವು ಸಿಎಂ ಆಗಿದ್ದಾಗ ಅಭಿವೃದ್ಧಿ ದೃಷ್ಟಿಯಿಂದ ಬಿಡುಗಡೆ ಮಾಡಿದ ಹಣವನ್ನು ಬಿಜೆಪಿ ಸರ್ಕಾರ ಬಂದ ನಂತರ ತಡೆ ಹಿಡಿದಿತ್ತು.ಜನತೆಗೆ ದ್ರೋಹ ಮಾಡಿರುವ ಬಿಜೆಪಿ ಸರ್ಕಾರ ವನ್ನು ಕಿತ್ತೊಗೆಯಿರಿ ಎಂದ ಕುಮಾರಸ್ವಾಮಿ ಹಲವಾರು ಇಲಾಖೆಗಳಲ್ಲಿ ಭ್ರಷ್ಟಾಚಾರ ಅನ್ನೋದು ಮಿತಿಮೀರಿದೆ. ಪ್ರಮುಖವಾಗಿ ವಿದ್ಯುತ್ ಇಲಾಖೆಯಲ್ಲಿ ಭ್ರಷ್ಟಾಚಾರ ಅತಿಯಾಗಿದೆ.ಇದನ್ನು ತಡೆದರೆ ಆ ಇಲಾಖೆಗೂ ಲಾಭ ಆಗಲಿದೆ. ಜೊತೆಗೆ ಬಡವರಿಗರ ಕೂಡಾ ಉಚಿತವಾಗಿ ವಿದ್ಯುತ್ ನೀಡಬಹುದು. ಆದರೆ ಅದು ಒಂದಷ್ಟು ಪ್ರಮಾಣದಲ್ಲಿ ಮಾತ್ರಾ. 

ಇನ್ನು  ಕಾವೇರಿ ನೀರನ್ನೂ ಕೂಡಾ ಬಡವರಿಗೆ ಉಚಿತವಾಗಿ ನೀಡುವ ಬಗ್ಗೆ ಚಿಂತನೆ ಇದೆ. ಆದರೆ ಇದೆಲ್ಲಾ ಇನ್ನೂ ಪ್ರಾಥಮಿಕ ಹಂತದ ಚಿಂತನೆ ಅಷ್ಟೇ. ಅಧಿಕಾರಕ್ಕೆ ಬಂದಾಗ ಎಷ್ಟು ಪ್ರಮಾಣದ ನೀರು ಮತ್ತು ವಿದ್ಯುತ್ ಉಳಿಯುತ್ತದೆ ಎಂದು ನೋಡಿಕೊಂಡು ಇದರ ಬಗ್ಗೆ ರೂಪುರೇಷೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಪಂಚರತ್ನ ಎಂಬ ಕಾರ್ಯಕ್ರಮದಲ್ಲಿ ಹೇಳಿರುವಂತೆ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡುವ ಬಗ್ಗೆ ಈಗಾಗಲೇ ನಾವು ಯೋಜನೆ ರೂಪಿಸಿದ್ದೇವೆ. ಬಡವರ ಮಕ್ಕಳು ಯುಕೆಜಿ ಯಿಂದ ದ್ವಿತೀಯ ಪಿಯುಸಿ ವರೆಗೆ ಆಂಗ್ಲ ಮಾದ್ಯಮ ದಲ್ಲೇ ಉಚಿತವಾಗಿ ಶಿಕ್ಷಣ ನೀಡಲಿದ್ದೇವೆ. ಆರೋಗ್ಯ ದ ಕ್ಷೇತ್ರದಲ್ಲಿ ಕೂಡಾ ಒಂದಷ್ಟು ಯೋಜನೆಗಳನ್ನು ಇಟ್ಟುಕೊಂಡಿರುವ ಜೆಡಿಎಸ್ ಪಕ್ಷ ಕಿಡ್ನಿ ಕಾಯಿಲೆ ಹಾಗೂ ಬೋನ್ ಟ್ರಾನ್ಸ್‌ಪ್ಲಾಂಟ್ ನಂತಹಾ ಗಂಭೀರ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಬಗ್ಗೆ ಭರವಸೆ ನೀಡುತ್ತಿದೆ.

ಒಟ್ಟಾರೆಯಾಗಿ ಈಗಿನ ಬಿಜೆಪಿ ಸರ್ಕಾರ ಜನರಿಗೆ  ಕೇವಲ ಭರವಸೆ ನೀಡ್ತಿದೆ. ಮೋದಿ ಯಾವತ್ತಿಗೂ ಬಡವರ ಪರ ಇಲ್ಲ,ಕೇವಲ ಶ್ರೀಮಂತರ ಪರ ಇದ್ದಾರೆ. ಚುನಾವಣೆ ಸಂಧರ್ಭದಲ್ಲಿ ಹಣಕೊಟ್ಟು ಮತ ಸೆಳೆಯುವ ಆಮಿಷಗಳಿಗೆ ಒಳಗಾಗಬೇಡಿ ಎಂದ ಕುಮಾರಸ್ವಾಮಿ ಈ ಭಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಪಕ್ಕಾ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ..

Latest Videos
Follow Us:
Download App:
  • android
  • ios