ಕೋಲ್ಕತ್ತಾ(ಮಾ.06): ಪಶ್ಚಿಮ ಬಂಗಾಳ ಚುನಾವಣೆಗೂ ಮೊದಲೇ ರಾಜಕೀಯ ಏರಿಳಿತಗಳು ಸಂಭವಿಸುತ್ತಲೇ ಇವೆ. ಸದ್ಯ ಇಲ್ಲಿನ ಸಿಎಂ ಮಮತಾ ಬ್ಯಾನರ್ಜಿಯ ಆಪ್ತರಾಗಿದ್ದ, ಮಾಜಿ ರೈಲ್ವೇ ಸಚಿವರಾಗಿದ್ದ ದಿನೇಶ್ ತ್ರಿವೇದಿ ಶನಿವಾರದಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ದಿನೆಶ್ ತ್ರಿವೇದಿ ಫೆಬ್ರವರಿ 12ಕ್ಕೆ ಸಂಸತ್ತಿನ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಟಿಎಂಸಿಯ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಉಪಸ್ಥಿತಿಯಲ್ಲಿ ಅವರು ಬಿಜೆಪಿ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ತ್ರಿವೇದಿಯವರು ಈವರೆಗೆ ಕೆಟ್ಟ ಪಕ್ಷದಲ್ಲಿದ್ದರು ಎಂದಿದ್ದಾರೆ.

ಟಿಎಂಸಿ ಹೆಸರೆತ್ತದೆ ಮಾತನಾಡಿದ ತ್ರಿವೇದಿ ಅಲ್ಲಿ ಕೇವಲ ಒಂದು ಕುಟುಂಬದ ಸೇವೆ ಮಾಡಲಾಗುತ್ತದೆ. ನನ್ನ ಪಾಲಿಗೆ ದೇಶವೇ ಮೊದಲು, ಇದು ಯಾವತ್ತೂ ಹೀಗೆ ಇರುತ್ತದೆ. ಬಿಜೆಪಿ ಪಕ್ಷ ಜನರ ಕುಟುಂಬವಿದ್ದಂತೆ. ಇಲ್ಲಿ ಪಕ್ಷದ ಸೇವೆಯಲ್ಲ, ಜನರ ಸೇವೆ ಮಾಡಲಾಗುತ್ತದೆ. ಈ ಪಕ್ಷಕ್ಕೆ ದೇಶ ಮೊದಲ ಸ್ಥಾನದಲ್ಲಿರದಿದ್ದರೆ, ಇಷ್ಟು ಯಶಸ್ಸು ಸಾಧಿಸುತ್ತಿರಲಿಲ್ಲ ಎಂದಿದ್ದಾರೆ.

ಟಿಎಂಸಿ ವಿರುದ್ಧ ಕಿಡಿ

ಬಂಗಾಳದ ಜನತೆ ಟಿಎಂಸಿಯನ್ನು ನಿರಾಕರಿಸಿದ್ದಾರೆ. ಇಲ್ಲಿನ ಜನ ಅಭಿವೃದ್ಧಿ ಬಯಸುತ್ತಾರೆಯೇ ವಿನಃ ಭ್ರಷ್ಟಾಚಾರವಲ್ಲ. ರಾಜಕೀಯವೆಂದರೆ ಆಟವಲ್ಲ. ಆದರೆ ಇಂದು ಇದನ್ನು ಆಡಿ ಆಡಿ ಅವರು(ಮಮತಾ) ಆದರ್ಶವನ್ನೇ ಮರೆತಿದ್ದಾರೆ ಎಂದು ತ್ರಿವೇದಿ ಕಿಡಿ ಕಾರಿದ್ದಾರೆ.

ಬಿಜೆಪಿ ಜನರ ಪಾಳಿಗೆ ಕುಟುಂಬವಿದ್ದಂತೆ

ನಾಣು ಬಿಜೆಪಿ ಸೇರಲು ಹಾತೊರೆಯುತ್ತಿದ್ದೆ. ಇದೊಂದು ರೀತಿ ಜನರ ಪಾಳಿಗೆ ಕುಟುಂಬವಿದ್ದಂತೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಜೆ. ಪಿ . ನಡ್ಡಾರವರು ತ್ರಿವೇದಿಯವರನ್ನು ಹೊಗಳುತ್ತಾ 'ಇವರು ತಮ್ಮ ಸಿದ್ಧಾಂತಗಳಿಗೇ ರಾಜಕೀಯ ಜೀವನ ಸಾಗಿಸಿದ್ದಾರೆ. ತಮ್ಮ ಸಿದ್ಧಾಂತಗಳಿಗೆ ಹಲವಾರು ತ್ಯಾಗ ಮಾಡಿದ್ದಾಋಎ. ಒಳ್ಳೆಯ ಮನುಷ್ಯರೊಬ್ಬರು ಕೆಟ್ಟ ಪಕ್ಷದಲ್ಲಿದ್ದರು' ಎಂದಿದ್ದಾರೆ.