ಸಾಯುವ ಮುನ್ನ ಮೇಕೆದಾಟಿಗೆ ಒಪ್ಪಿಸ್ತೀನಿ, ಮೋದಿಯಿಂದ ಮಾತ್ರ ಈ ಯೋಜನೆ ಅನುಷ್ಠಾನ ಸಾಧ್ಯ: ದೇವೇಗೌಡ
ಮೇಕೆದಾಟು ಯೋಜನೆ ಆಗುತ್ತೆ ಎಂದರೆ ಅದು ಪ್ರಧಾನಿ ಮೋದಿ ಅವರಿಂದ ಮಾತ್ರ ಸಾಧ್ಯ. ಇದರಲ್ಲಿ ಎರಡು ಮಾತಿಲ್ಲ. ನಾನು ಅವರಿಗೆ ಮನವಿ ಮಾಡುತ್ತೇನೆ. ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇನೆ. ಈಗಾಗಲೇ ಹಲವಾರು ಸಲ ಅವರು ನನ್ನ ಮನವಿ ಆಲಿಸಿದ್ದಾರೆ. ಆದರೆ, ತಮಿಳುನಾಡಿನವರು ನಮ್ಮ ಕುತ್ತಿಗೆ ಹಿಡಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಚನ್ನಪಟ್ಟಣ(ನ.08): ‘ನಾನು ನನ್ನ ಕೊನೆ ಉಸಿರು ಎಳೆಯುವ ಮುನ್ನ ಮೇಕೆದಾಟು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಒಪ್ಪಿಗೆ ಕೊಡಿಸುತ್ತೇನೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಘೋಷಣೆ ಮಾಡಿದರು.
ಚನ್ನಪಟ್ಟಣ ಕ್ಷೇತ್ರದ ಹೊಡಿಕೆಹೊಸಹಳ್ಳಿ ಗ್ರಾಮದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಅವರು ಮತಯಾಚಿಸಿದರು. ಮೇಕೆದಾಟು ಯೋಜನೆ ಆಗುತ್ತೆ ಎಂದರೆ ಅದು ಪ್ರಧಾನಿ ಮೋದಿ ಅವರಿಂದ ಮಾತ್ರ ಸಾಧ್ಯ. ಇದರಲ್ಲಿ ಎರಡು ಮಾತಿಲ್ಲ. ನಾನು ಅವರಿಗೆ ಮನವಿ ಮಾಡುತ್ತೇನೆ. ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇನೆ. ಈಗಾಗಲೇ ಹಲವಾರು ಸಲ ಅವರು ನನ್ನ ಮನವಿ ಆಲಿಸಿದ್ದಾರೆ. ಆದರೆ, ತಮಿಳುನಾಡಿನವರು ನಮ್ಮ ಕುತ್ತಿಗೆ ಹಿಡಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ನಾನು ಇಗ್ಗಲೂರು ಆಣೆಕಟ್ಟು ಕಟ್ಟಿದ್ದು ದೊಡ್ಡ ವಿಷಯ ಅಲ್ಲ. ನಾನು ಪ್ರಧಾನಿ ಆಗಿದ್ದು ದೈವದ ಆಟ ಎಂದರು.
55 ವರ್ಷದಿಂದ ಚನ್ನಪಟ್ಟಣದಲ್ಲಿ ನಾನು ಪಕ್ಷ ಸಂಘಟನೆ ಮಾಡಿದ್ದೇನೆ. ನಿಮ್ಮನ್ನು ನೋಡುತ್ತಿದ್ದರೆ 92 ವರ್ಷದ ನನಗೆ 18ರ ಶಕ್ತಿ ಬರುತ್ತದೆ. ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ. ನಿಖಿಲ್‌ನನ್ನು ನಾನೇ ರಾಜ್ಯ ನಾಯಕನನ್ನಾಗಿ ಮಾಡುತ್ತೇನೆ. ಆ ಕಾಲ ಬರಲಿದೆ. ಅವನನ್ನು ದೊಡ್ಡ ನಾಯಕನನ್ನಾಗಿ ರೂಪಿಸುತ್ತೇನೆ ಎಂದರು.
ನನ್ನ ಪರ್ಮನೆಂಟ್ ಟಾಕೀಸ್ ರಾಮನಗರ: ಕುಮಾರಸ್ವಾಮಿ
ಆರು ತಿಂಗಳಿಂದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ ಎಂದರು. ಸುಳ್ಳು ಹೇಳಿ, ಈಗ ಮತ್ತೊಬ್ಬರನ್ನು ಕರೆದುಕೊಂಡು ತಂದು ನಿಲ್ಲಿಸಿದ್ದಾರೆ. ಕನಕಪುರಕ್ಕೆ ಹೋಗಿ, ಅಪೂರ್ವ ಸಹೋದರರು ಬೇರೆಯವರ ಜಮೀನನ್ನು ಹೇಗೆ ಲೂಟಿ ಮಾಡಿದ್ದಾರೆ ಅಂತ ನೋಡಿಕೊಂಡು ಬನ್ನಿ ಎಂದು ಆರೋಪಿಸಿದರು.
‘ವೇರ್ ಇಸ್ ಡಿಕೆ, ವೇರ್ ಇಸ್ ಎಚ್‌ಡಿಕೆ, ವೇರ್ ಇಸ್ ಕುಮಾರಣ್ಣ, ವೇರ್ ಇಸ್ ಡಿಕೆ. ಹಿಮಾಲಯ ಪರ್ವತಕ್ಕೂ ಇಲ್ಲಿನ ಸಣ್ಣ ಗುಡ್ಡಕ್ಕೂ ಎಲ್ಲಿಯ ಹೋಲಿಕೆ. ಒಂದು ಶಾಲೆ ಮಾಡಲು ಜಾಗ ಕೇಳಿದರೆ ದುಡ್ಡು ದುಡ್ಡು ಅಂತಾರೆ’ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.
ನಿಂತು ಭಾಷಣ ಶುರು ಮಾಡಿದ ದೇವೇಗೌಡರು!
ನಿಖಿಲ್ ಪರ ಪ್ರಚಾರಕ್ಕೆ ಬಂದಿದ್ದ ದೇವೇಗೌಡರು, ನಿಂತುಕೊಂಡು ಭಾಷಣ ಶುರು ಮಾಡಿದರು. ಕುಳಿತು ಮಾತಾಡಿದರೆ ನಿಮಗೆ ಅಗೌರವ ತೋರಿದಂತಾಗುತ್ತದೆ. ಹೀಗಾಗಿ, ನಿಂತುಕೊಂಡು ಮಾತನಾಡುತ್ತೇನೆ. ನಿಂತಿರೋದ್ರಿಂದ ನನ್ನ ಕಾಲಿಗೆ ನೋವಾಗಬಹುದು. ಆದರೆ, ನಾನು ರೈತರ ಮಗ ಎಂದರು .
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ. ಬಡವರು ಬದುಕಲು ಆಗುತ್ತಿಲ್ಲ. ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಈ ಸರ್ಕಾರವನ್ನು ತೆಗೆಯುವ ತನಕ ರಾಜ್ಯಕ್ಕೆ ನೆಮ್ಮದಿ ಇಲ್ಲ. ಈ ಸರ್ಕಾರದ ಬಗ್ಗೆ ನಾನು ಯಾವಾಗಲೂ ಮಾತಾಡಿರಲಿಲ್ಲ. ಇವರ ಲೂಟಿ ನೋಡಲಾರದೆ ನಿನ್ನೆಯಿಂದ ಮಾತನಾಡುತ್ತಿದ್ದೇನೆ ಎಂದರು.
ನಾನು ಇಂದೂ ಮುಖ್ಯಮಂತ್ರಿ, ನಾಳೆಯೂ ಮುಖ್ಯಮಂತ್ರಿ ಅಂತ ಹೇಳುತ್ತಾರೆ. ಇಷ್ಟಾದರೂ ಹೀಗೆಲ್ಲಾ ಮಾತನಾಡುತ್ತೀರಾ, ಅಯ್ಯೋ ರಾಮಾ ಎಂದು ಸಿದ್ದರಾಮಯ್ಯನವರು ಲೋಕಾಯುಕ್ತ ವಿಚಾರಣೆ ಎದುರಿಸಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ವ್ಯಂಗ್ಯವಾಡಿದರು.
ಸಿ.ಪಿ.ಯೋಗೇಶ್ವರ್ ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮೆನ್: ದೇವೇಗೌಡ ವಾಗ್ದಾಳಿ
ಅಂಬೇಡ್ಕರ್ ಹೆಸರು ಹೇಳುತ್ತಿರುವ ಇಬ್ಬರು ಮಹಾನ್ ನಾಯಕರು ರಾಜ್ಯವನ್ನು ಆಳುತ್ತಿದ್ದಾರೆ. ಅವರ 5 ಗ್ಯಾರಂಟಿಗಳ ಪೈಕಿ 4ನೇ ಗ್ಯಾರಂಟಿ ಅಲ್ಲಾಡುತ್ತಿದೆ. ಇದನ್ನು ನಾನು ಹೇಳುತ್ತಿಲ್ಲ. ಅವರದೇ ಸಂಪುಟದ ಸಚಿವರು ಹೇಳುತ್ತಿದ್ದಾರೆ. ಖಜಾನೆಯಲ್ಲಿ ಏಕೆ ಕಾಸು ಇಲ್ಲವಾ. ಈ ಸರ್ಕಾರದಲ್ಲಿ ಎಲ್ಲರು ತಿಂದು ತೆಗುತ್ತಿದ್ದಾರೆ ಎಂದು ಟೀಕಿಸಿದರು.
ಸಾಮಾನ್ಯ ಸಮುದಾಯದ ವ್ಯಕ್ತಿಯನ್ನು ನಾನು ಮಂತ್ರಿಯನ್ನಾಗಿ ಮಾಡಿದೆ. ಗಂಗಾಮತಸ್ಥ ಸಮುದಾಯದ ಚಿನ್ನಸ್ವಾಮಿಯನ್ನು ವಿಧಾನಸೌಧಕ್ಕೆ ಕಳುಹಿಸುವ ಕೆಲಸ ಮಾಡುತ್ತೇನೆ. ಶಾಸಕರಾಗೋ, ಪರಿಷತ್ ಸದಸ್ಯರಾಗಿಯೊ ಮಾಡುತ್ತೇವೆ ಎಂದು ತಿಳಿಸಿದರು.