ವ್ಹೀಲ್‌ಚೇರ್‌ನಲ್ಲಿ ಹೋಗಿ ಪಕ್ಷ ಸಂಘಟಿಸುವೆ: ದೇವೇಗೌಡ
ಪಕ್ಷದ ಉಳಿವಿಗಾಗಿ ಎಲ್ಲಾ ಕ್ಷೇತ್ರಗಳಿಗೂ ವ್ಹೀಲ್‌ಚೇರ್ ಮೇಲೆ ಹೋಗುತ್ತೇನೆ. ವ್ಹೀಲ್‌ಚೇರ್ ಮೇಲೆ ಹೋಗುವ ಶಕ್ತಿ ಇದೆ. ನನಗೆ ಯಾರಮೇಲೂ ದ್ವೇಷ ಇಲ್ಲ. ಪಕ್ಷ ಅಳಿಯಬಾರದು ಎಂಬ ನೋವಿದ್ದು, ಉಳಿಸಬೇಕಿದೆ. ಎಚ್.ಡಿ.ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲ. ಪಕ್ಷ ಉಳಿಸಿಕೊಳ್ಳಬೇಕಾಗಿದೆ. ಹೀಗಾಗಿ ಮೈತ್ರಿ ಅನಿವಾರ್ಯ ಎಂದು ಹೇಳಿ ಭಾವುಕರಾದ ಎಚ್.ಡಿ.ದೇವೇಗೌಡ

ಬೆಂಗಳೂರು(ಸೆ.11): ಪ್ರಾದೇಶಿಕ ಪಕ್ಷವಾದ ನಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಕಳೆದ 40 ವರ್ಷದಿಂದ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಮುಂದಿನ ದಿನದಲ್ಲಿಯೂ ಎಲ್ಲ ಕ್ಷೇತ್ರಗಳಿಗೆ ವೀಲ್‌ಚೇರ್ ಮೇಲೆ ಹೋಗಿ ಪಕ್ಷವನ್ನು ಸಂಘಟಿಸುತ್ತೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಉಳಿವಿಗಾಗಿ ಎಲ್ಲಾ ಕ್ಷೇತ್ರಗಳಿಗೂ ವ್ಹೀಲ್‌ಚೇರ್ ಮೇಲೆ ಹೋಗುತ್ತೇನೆ. ವ್ಹೀಲ್‌ಚೇರ್ ಮೇಲೆ ಹೋಗುವ ಶಕ್ತಿ ಇದೆ. ನನಗೆ ಯಾರಮೇಲೂ ದ್ವೇಷ ಇಲ್ಲ. ಪಕ್ಷ ಅಳಿಯಬಾರದು ಎಂಬ ನೋವಿದ್ದು, ಉಳಿಸಬೇಕಿದೆ. ಎಚ್.ಡಿ.ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲ. ಪಕ್ಷ ಉಳಿಸಿಕೊಳ್ಳಬೇಕಾಗಿದೆ. ಹೀಗಾಗಿ ಮೈತ್ರಿ ಅನಿವಾರ್ಯ ಎಂದು ಹೇಳಿ ಭಾವುಕರಾದರು.
ದೇಶದ ಎಮರ್ಜೆನ್ಸಿ ವೇಳೆ ಹುಟ್ಟಿಕೊಂಡ ಜನತಾಪಾರ್ಟಿಯ ತುಣುಕು ಬಿಜೆಪಿ: ಮಾಜಿ ಸಿಎಂ ಕುಮಾರಸ್ವಾಮಿ
ಈ ಹಿಂದೆ ಕಾಂಗ್ರೆಸ್ ಆ ಭಾಗ್ಯ, ಈ ಭಾಗ್ಯ, ಇಂದಿರಾ ಕ್ಯಾಂಟಿನ್ ಎಂದು ಮಾಡಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಆ ಯೋಜನೆಗಳಿಗೆ ಹಣ ನೀಡಿದರು. ಅಲ್ಲದೇ, ರೈತರ ಸಾಲಮನ್ನಾ ಮಾಡಿದರು. 28 ಸಾವಿರ ಕೋಟಿ ರು. ಸಾಲಮನ್ನಾ ಮಾಡಿದರು. ಇಂದು ಯಾವ ರಾಜಕೀಯ ಪಕ್ಷಗಳಿಗೆ ಸಿದ್ಧಾಂತ, ತತ್ವ ಇದೆ? ಈ ಹಿಂದೆ ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಬೆಂಬಲ ಕೊಡುತ್ತೇನೆ ಎಂದಾಗ ನನಗೆ ಪ್ರಧಾನಿ ಸ್ಥಾನ ಬೇಡ ಮನೆಗೆ ಹೋಗುತ್ತೇನೆ ಎಂದವನು ನಾನು. ಅಂತಹ ನನ್ನ ನೈತಿಕತೆ ಬಗ್ಗೆ ಮಾತನಾಡುತ್ತಿದ್ದೀರಾ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
2018ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಆದರೆ, ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಹಲವರು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದ್ದರು. ಅದಕ್ಕಾಗಿ ಚುನಾವಣೆಗೆ ಸ್ಪರ್ಧಿಸಿದೆ. ಆದರೆ ಫಲಿತಾಂಶ ಏನಾಯಿತು? ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಷಡ್ಯಂತ್ರ ರೂಪಿಸಿದರು. ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಜೆಡಿಎಸ್‌ನಲ್ಲಿದ್ದಾಗ ಎಲ್ಲವನ್ನೂ ಅನುಭವಿಸಿ ಈಗ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.