ಎಚ್‌ಡಿಕೆ ಅಷ್ಟು ಸುಲಭಕ್ಕೆ ಅರ್ಥವಾಗಲ್ಲ, ಕುಮಾರಸ್ವಾಮಿಯನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ: ದೇವೇಗೌಡ
ನಾನು ಮನೆಯಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿದ್ದೇನೆ. ಎಚ್.ಡಿ.ಕುಮಾರಸ್ವಾಮಿ ಅವರ ಪೆನ್‌ಡ್ರೈವ್ ವಾದ, ವಿವಾದ ನೋಡಿದ್ದೇನೆ. ಅವರು ಅಷ್ಟುಸುಲಭವಾಗಿ ಮಾತನಾಡುವುದಿಲ್ಲ. ಈ ವಿಷಯದ ಬಗ್ಗೆ ಟೀಕೆ ಮಾಡುವವರಿಗೆ ಅದು ತಿಳಿದಿರಲಿ. ಮುಂದಿನ ದಿನದಲ್ಲಿ ಈ ಬಗ್ಗೆ ಮಾತನಾಡುತ್ತೇನೆ ತಿಳಿಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ

ಬೆಂಗಳೂರು(ಆ.29): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯಾರಿಗೂ ಅಷ್ಟುಸುಲಭವಾಗಿ ಅರ್ಥವಾಗುವುದಿಲ್ಲ. ಅವರನ್ನು ಜೀರ್ಣಿಸಿಕೊಳ್ಳುವುದು ಸುಲಭ ಸಾಧ್ಯವೂ ಅಲ್ಲ ಎಂದು ಅವರ ತಂದೆಯೂ ಆಗಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾರ್ಮಿಕವಾಗಿ ಹೇಳಿದ್ದಾರೆ. ಸೋಮವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಕುರಿತು ಬೇಸರ ವ್ಯಕ್ತಪಡಿಸಿದರು.
ನಾನು ಮನೆಯಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿದ್ದೇನೆ. ಎಚ್.ಡಿ.ಕುಮಾರಸ್ವಾಮಿ ಅವರ ಪೆನ್‌ಡ್ರೈವ್ ವಾದ, ವಿವಾದ ನೋಡಿದ್ದೇನೆ. ಅವರು ಅಷ್ಟುಸುಲಭವಾಗಿ ಮಾತನಾಡುವುದಿಲ್ಲ. ಈ ವಿಷಯದ ಬಗ್ಗೆ ಟೀಕೆ ಮಾಡುವವರಿಗೆ ಅದು ತಿಳಿದಿರಲಿ. ಮುಂದಿನ ದಿನದಲ್ಲಿ ಈ ಬಗ್ಗೆ ಮಾತನಾಡುತ್ತೇನೆ ತಿಳಿಸಿದರು.
ನೈಸ್ ಅಕ್ರಮ: ದೇವೇಗೌಡರ ಕುಟುಂಬಕ್ಕೆ ಡಿಕೆಶಿ ಎಚ್ಚರಿಕೆ
ಕುಮಾರಸ್ವಾಮಿ ನನ್ನ ಮಗ ಎಂದು ಮಾತನಾಡುವುದಿಲ್ಲ. ನನಗೆ ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ಎಲ್ಲವೂ ಒಂದೇ. ರಾಮನಗರ ಜಿಲ್ಲೆ ಮಾಡಿದವರು ಯಾರು? ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆಡಳಿತಾವಧಿಯಲ್ಲಿ ನನ್ನನ್ನು ಸೋಲಿಸಬೇಕು ಎಂದು ಪ್ರಯತ್ನಿಸಲಾಯಿತು. ಆವತ್ತೇ ರಾಮನಗರ ಜಿಲ್ಲೆ ಮಾಡಲು ಆಗುತ್ತಿರಲಿಲ್ಲವೇ? ಕುಮಾರಸ್ವಾಮಿಯವರೇ ಬಂದು ರಾಮನಗರವನ್ನು ಜಿಲ್ಲೆ ಮಾಡಬೇಕಿತ್ತಾ ಎಂದು ಖಾರವಾಗಿ ಪ್ರಶ್ನಿಸಿದರು.
ವೈದ್ಯಕೀಯ ಕಾಲೇಜು ಮಂಜೂರು ಆಗಿರುವ ಸ್ಥಳ ಎಲ್ಲಿ? ಮಾಯಗೊಂಡನಹಳ್ಳಿ ಬಳಿ ಒಂಭತ್ತು ಎಕರೆ ಬಗ್ಗೆ ಕೆಲವರು ತಕರಾರು ತೆಗೆದಿದ್ದು, ಅದನ್ನು ಬಿಟ್ಟು ಕೆಲಸ ಪ್ರಾರಂಭಿಸುವಂತೆ ತಗಾದೆ ತೆಗೆದರು. ಆಗ ಗೊಂದಲವಾಯಿತು. ಕನಕಪುರವೂ ನಮಗೆ ಮನೆ ಇದ್ದಂತೆ. ಆದರೆ, ರಾಮನಗರ ಜಿಲ್ಲಾ ಕೇಂದ್ರ ಸ್ಥಾನ. ವೈದ್ಯಕೀಯ ಕಾಲೇಜ್ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅವರದ್ದೇ ಸರ್ಕಾರವಿದೆ. ಕನಕಪುರಕ್ಕೆ ಇನ್ನೊಂದು ಕಾಲೇಜು ಮಾಡಲಿ. ನನ್ನದೇನೂ ತಕಾರರು ಇಲ್ಲ. ಆದರೆ, ರಾಮನಗರ ವೈದ್ಯಕೀಯ ಕಾಲೇಜ್‌ಗೆ ತೊಂದರೆ ಮಾಡಬೇಡಿ ಎಂದು ಕುಮಾರಸ್ವಾಮಿ ನ್ಯಾಯಯುತವಾಗಿ ಕೇಳುತ್ತಿದ್ದಾರೆ. ಅವರ ಮೇಲೆ ಆರೋಪ ಮಾಡಬೇಡಿ, ಅವರು ಯಾವುದೇ ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಗೌಡ ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳುವುದಕ್ಕೆ ಹೋಗುವುದಿಲ್ಲ. ಅವರ ಕ್ಷೇತ್ರದ ಬಗ್ಗೆ ಅವರು ಮಾತನಾಡಿದರೆ, ನಾನು ಯಾಕೆ ಆ ರೀತಿ ಮಾತನಾಡಲಿ. ಭೂ ಮಾಫಿಯಾಗೆ ಸರ್ಕಾರ ಮಾಫಿ ಎಂದು ಪತ್ರಿಕೆಯಲ್ಲಿ ವರದಿ ಬಂದಿದೆ. ಸಿಲಿಕಾನ್ ಸಿಟಿಯಲ್ಲಿ 38,947 ಎಕರೆ ಸರ್ಕಾರಿ ಭೂಮಿ ಅತಿಕ್ರಮಣ ಎಂದು ಬರೆಯಲಾಗಿದೆ. ಈ ವಿಷಯ ಹೇಳಿದರೆ ವ್ಯಕ್ತಿ ದ್ವೇಷನಾ? ತಪ್ಪನ್ನು ತಪ್ಪು ಎಂದು ಹೇಳಿದರೆ ವೈಯಕ್ತಿಕ ಹಗೆತನವಾ? ಇಂತಹದ್ದು ಬಹಳ ಇದ್ದು, ಕುಮಾರಸ್ವಾಮಿಯವರ ಬಳಿ ಬಹಳಷ್ಟುವಿಷಯ ಇದೆ ಎಂದರು.