ಬೆಂಗಳೂರು(ಜ.15): ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಇಬ್ಬರು ಪಕ್ಷೇತರ ಶಾಸಕರು ಬೆಂಬಲ ವಾಪಸ್ ಪಡೆದ ಬೆನ್ನಲ್ಲೇ , ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮನೆಯಲ್ಲಿ ಠಿಕಾಣಿ ಹೂಡಿದ್ದಾರೆ.

ಇಂದು ಸಂಜೆ ಸುಮಾರಿಗೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ನಂತರ ಅಲ್ಲಿಂದ ನೇರವಾಗಿ ಕಾಂಗ್ರೆಸ್ ಶಾಸಕ ಮುನಿರತ್ನ ಮನೆಗೆ ತೆರಳಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅಭಿನಯದ ಕುರುಕ್ಷೇತ್ರ ಚಿತ್ರದ ಟೀಸರ್ ವೀಕ್ಷಣೆ ಮಾಡಿದರು.

ಬಳಿಕ ಅಲ್ಲಿಂದ ಪದ್ಮನಾಭನಗರದಲ್ಲಿರುವ ತಂದೆ ಹೆಚ್.ಡಿ. ದೇವೇಗೌಡ ಮನೆಗೆ ತೆರಳಿದ ಸಿಎಂ, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ.

ಇದುವರೆಗೂ ದೇವೇಗೌಡ ಮನೆಯಲ್ಲೇ ಇರುವ ಸಿಎಂ ಅವರಿಗೆ ದೇವೇಗೌಡರು ಏನು ಸಲಹೆ ನೀಡಿದ್ದಾರೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.

ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವಾರು ಏಳಿಬೀಳುಗಳನ್ನು ಕಂಡಿರುವ ದೇವೇಗೌಡ, ತಮ್ಮ ಮಗನ ಸರ್ಕಾರ ಉಳಿಸಿಕೊಳ್ಳಲು ಏನು ರಾಜಕೀಯ ದಾಳ ಉರುಳಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.