Asianet Suvarna News Asianet Suvarna News

ಕರ್ನಾಟಕ ವಿಧಾನಸಭೆ ಚುನಾವಣೇಲಿ ಹೀನಾಯ ಸೋಲು: ಜೆಡಿಎಸ್‌ ಅಭ್ಯರ್ಥಿಗಳಿಗೆ ದೇವೇಗೌಡ ಪತ್ರ

ಚುನಾವಣೆಯಲ್ಲಿ ಪಕ್ಷಕ್ಕೆ ದೊರೆತ ಫಲಿತಾಂಶವನ್ನು ವಿಮರ್ಶಿಸಲು ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳ ಸಭೆಯನ್ನು ಮುಂದಿನ ವಾರದಲ್ಲಿ ಆಯೋಜಿಸುವಂತೆ ರಾಜ್ಯಾಧ್ಯಕ್ಷರಿಗೆ ಮತ್ತು ಶಾಸಕಾಂಗ ಪಕ್ಷದ ನಾಯಕರಿಗೆ ತಿಳಿಸಿದ್ದೇನೆ. ಈ ಸಭೆಯಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಮುಕ್ತವಾದ ಚರ್ಚೆ ನಡೆಸೋಣ ಮತ್ತು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳೋಣ. ಹೀಗಾಗಿ ಧೃತಿಗೆಡದೆ ನಾವೆಲ್ಲರೂ ಒಟ್ಟಾಗಿ ಸೇರಿ ಪಕ್ಷವನ್ನು ಸಂಘಟಿಸಿ ಮುನ್ನಡೆಸೋಣ: ಎಚ್‌.ಡಿ.ದೇವೇಗೌಡ 

Former PM HD Devegowda Letter to JDS Candidates After Defeated in Karnataka Election 2023 grg
Author
First Published May 18, 2023, 7:48 AM IST

ಬೆಂಗಳೂರು(ಮೇ.18):  ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ನಾಯಕರು ಮತ್ತು ಸೋತ ಅಭ್ಯರ್ಥಿಗಳನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹುರಿದುಂಬಿಸಿದ್ದು, ಏಳುಬೀಳು ಸಹಜ. ಮುಂದಿನ ದಿನಗಳಲ್ಲಿ ಧೃತಿಗೆಡದೆ ಒಟ್ಟಾಗಿ ಸೇರಿ ಮುಂಬರುವ ಚುನಾವಣೆಗಳನ್ನು ಸಂಘರ್ಷವೆಂದು ಕೈಗೆತ್ತಿಕೊಂಡು ಹೋರಾಟ ನಡೆಸೋಣ ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ. ಈ ಸಂಬಂಧ ಚುನಾವಣೆಯಲ್ಲಿ ಸೋಲನುಭವಿಸಿದ ಅಭ್ಯರ್ಥಿಗಳು ಸೇರಿದಂತೆ ಪಕ್ಷದ ಮುಖಂಡರಿಗೆ ಗೌಡರು ಪತ್ರ ಬರೆದಿದ್ದಾರೆ.

ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಪಕ್ಷ ಮತ್ತು ಅದರ ಅಭ್ಯರ್ಥಿಗಳಿಗೆ ಏಳು-ಬೀಳುಗಳು ಸಾಮಾನ್ಯ. ಪಕ್ಷಕ್ಕೆ ಸಿಕ್ಕ ಫಲಿತಾಂಶದಿಂದ ಧೃತಿಗೆಟ್ಟು ಎದೆಗುಂದಬಾರದು. ಇಂತಹ ಹಲವಾರು ಏಳು-ಬೀಳುಗಳನ್ನು ಆರು ದಶಕಗಳ ರಾಜಕೀಯ ಜೀವನದಲ್ಲಿ ಕಂಡಿದ್ದೇವೆ ಮತ್ತು ಅನುಭವಿಸಿದ್ದೇನೆ. 1989ರ ಚುನಾವಣೆಯಲ್ಲಿ ಪಕ್ಷವು ಕೇವಲ ಎರಡು ಸ್ಥಾನ ಗೆದ್ದಿದ್ದು ಉಂಟು. ನಂತರ 1994ರಲ್ಲಿ ರಾಜ್ಯದ ಜನತೆಯ ಆಶೀರ್ವಾದದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದು, ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವ ಸನ್ನಿವೇಶ ಲಭಿಸಿತು ಎಂದು ಪತ್ರದಲ್ಲಿ ಹೇಳಿದ್ದಾರೆ.

ನಾನೇ ಪಕ್ಷ ಸಂಘಟಿಸುವುದಾಗಿ ಪಂಚೆಕಟ್ಟಿನಿಂತ ದೇವೇಗೌಡ! ಸಮಾಧಾನ ಮಾಡಿದ ಕುಮಾರಸ್ವಾಮಿ

ಚುನಾವಣೆಯಲ್ಲಿ ಪಕ್ಷಕ್ಕೆ ದೊರೆತ ಫಲಿತಾಂಶವನ್ನು ವಿಮರ್ಶಿಸಲು ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳ ಸಭೆಯನ್ನು ಮುಂದಿನ ವಾರದಲ್ಲಿ ಆಯೋಜಿಸುವಂತೆ ರಾಜ್ಯಾಧ್ಯಕ್ಷರಿಗೆ ಮತ್ತು ಶಾಸಕಾಂಗ ಪಕ್ಷದ ನಾಯಕರಿಗೆ ತಿಳಿಸಿದ್ದೇನೆ. ಈ ಸಭೆಯಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಮುಕ್ತವಾದ ಚರ್ಚೆ ನಡೆಸೋಣ ಮತ್ತು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳೋಣ. ಹೀಗಾಗಿ ಧೃತಿಗೆಡದೆ ನಾವೆಲ್ಲರೂ ಒಟ್ಟಾಗಿ ಸೇರಿ ಪಕ್ಷವನ್ನು ಸಂಘಟಿಸಿ ಮುನ್ನಡೆಸೋಣ. ಮುಂಬರುವ ಪಂಚಾಯತ್‌ ರಾಜ್‌ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಂಘರ್ಷವೆಂದು ಕೈಗೆತ್ತಿಕೊಂಡು ಹೋರಾಟ ನಡೆಸೋಣ ಎಂದು ಕರೆ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪಕ್ಷವನ್ನು ಗೆಲ್ಲಿಸಲು ಸಾಕಷ್ಟುಶ್ರಮಹಾಕಿದ್ದರು. ಜನತಾ ಪರ್ವ, ಜಲಧಾರೆ, ಪಂಚರತ್ನ ರಥಯಾತ್ರೆ ಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು. ನೂರಾರು ಚುನಾವಣಾ ಪ್ರಚಾರ ಸಭೆಗಳಲ್ಲಿ ಸಾವಿರಾರು ಜನರು ಸೇರಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಅವರ ಕನಸಿನ ಯೋಜನೆಗಳಿಗೆ ಮತ್ತು ಪರಿಶ್ರಮಕ್ಕೆ ಜನತೆಯ ಬೆಂಬಲ ದೊರೆಯದಿರುವುದು ವಿಷಾದನೀಯ ಎಂದಿದ್ದಾರೆ.

Follow Us:
Download App:
  • android
  • ios