17 ಶಾಸಕರ ದಿಟ್ಟ ನಿರ್ಧಾರದಿಂದ ಮತ್ತೊಂದು ಸರ್ಕಾರ ಸ್ಥಾಪಿಸಿದೆವು, ಮುಂಡಗೋಡಿನಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ 

ಕಾರವಾರ(ಸೆ.11): ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಒಂದು ಸರ್ಕಾರದ ಉದಯಕ್ಕೂ ಇನ್ನೊಂದು ಸರ್ಕಾರದ ಪತನಕ್ಕೂ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಗೊಂಡ 17 ಶಾಸಕರ ದಿಟ್ಟ ನಿರ್ಧಾರವೇ ಕಾರಣವಾಯಿತು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಮುಂಡಗೋಡ ಪಟ್ಟಣದ ಟೌನ್‌ಹಾಲ್‌ನಲ್ಲಿ ಮುಂಡಗೋಡ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೊಟ್ಟ ಮಾತಿನಂತೆ ಸದಾ ನಮ್ಮ ಬೆನ್ನಿಗೆ ನಿಂತು ರಾಜ್ಯದಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯಕರ್ತರನ್ನೇ ಮಾಲಕರೆಂದುಕೊಳ್ಳುವ ಸಿದ್ಧಾಂತ ಬದ್ಧ ಬಿಜೆಪಿಯನ್ನು ಅಧಿಕಾರಕ್ಕೆ ತರಲಾಯಿತು. ಅದರಂತೆ ಸಚಿವನಾಗಿ ಕ್ಷೇತ್ರದ ಅಭಿವೃದ್ಧಿಗೆ ಕಿಂಚಿತ್ತೂ ಭಂಗ ಬಾರದಂತೆ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಅದಕ್ಕೆ ಪ್ರತಿಯಾಗಿ ರಾಜ್ಯಕ್ಕೆ ಮಾದರಿಯಾಗುವಂತೆ ಜಾತಿ, ಮತ, ಪಂಥ ಬೇಧ ಮರೆತು ಮುಂಡಗೋಡ ತಾಲೂಕಿನ ಜನತೆ ನನ್ನ ಕೈ ಹಿಡಿದು ನಡೆಸಿದ್ದಾರೆ. ಅವರೆಲ್ಲರ ಪ್ರೀತಿಗೆ ನಾನು ಚಿರಋುಣಿ ಎಂದು ಹೇಳಿದರು.

ಇದಕ್ಕೆಲ್ಲ ನಾವು ಹೆದರುವ ಗಿರಾಕಿಗಳಲ್ಲ: ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ನೇರ ಎಚ್ಚರಿಕೆ

ರಾಜ್ಯದಲ್ಲಿ ಚುನಾವಣಾ ವರ್ಷ ಇದಾಗಿದ್ದು ಹಳೆ ನೀರು ಹರಿದು ಹೋಗುತ್ತಿದೆ. ಹೊಸ ನೀರು ಹರಿದು ಬರುತ್ತಿದೆ. ಹೋಗುವ ನೀರಿಗೆ ತಡೆಗಟ್ಟುವ ಶಕ್ತಿ ನಮಗಿಲ್ಲ, ಆದರೆ ಬರುವ ಹೊಸ ನೀರನ್ನು ಕಟ್ಟಿಗಟ್ಟಿಗೊಳಿಸುವ ಶಕ್ತಿ ನಮಗಿದೆ ಎಂದು ವಿ.ಎಸ್‌. ಪಾಟೀಲ ಪಕ್ಷ ತೊರೆಯುವ ವಿಚಾರವನ್ನು ಪ್ರಸ್ತಾಪಿಸಿದರು.

ಕ್ಷೇತ್ರದಾದ್ಯಂತ ತ್ಯಾಗ ಮಾಡಿದ್ದೇನೆ, ತ್ಯಾಗ ಮಾಡಿದ್ದೇನೆ ಎನ್ನುವ ವಿ.ಎಸ್‌. ಪಾಟೀಲ ಅವರಿಗೆ ಬಿಜೆಪಿ ಸರ್ಕಾರ ಬರದಿದ್ದರೆ ಗೂಟದ ಕಾರಿನ ಭಾಗ್ಯವೇ ದೊರೆಯುತ್ತಿರಲಿಲ್ಲ. ಕ್ಯಾಬಿನೆಟ್‌ ದರ್ಜೆಯ ಸ್ಥಾನಮಾನವೂ ಸಿಗುತ್ತಿರಲಿಲ್ಲ. ಒಂದು ಗ್ರಾಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಾಗದ ಈ ಕಾಲಘಟ್ಟದಲ್ಲಿ ಅಧಿಕಾರದಲ್ಲಿರುವ ಪಕ್ಷದ ಶಾಸಕನಾಗಿ ನಿಗಮ ಮಂಡಳಿಯ ಅಧ್ಯಕ್ಷನಾಗಿದ್ದರೂ ಅಧಿಕಾರ ತ್ಯಾಗ ಮಾಡಿ ಕ್ಷೇತ್ರದ ಏಳಿಗೆಗಾಗಿ ಪುನಃ ನಿಮ್ಮ ಮುಂದೆ ಉಪಚುನಾವಣೆಯ ಮೂಲಕ ಆಶೀರ್ವಾದ ಬೇಡಿ ಬಂದವನು ನಾನು ಎಂದು ಹೇಳಿದರು.

ಅಭಿವೃದ್ಧಿಗೆ ಕಾರ್ಯಕ್ಕೆ ವೇಗ:

ಪಕ್ಷದ ಮುಖಂಡ ಎಲ್‌.ಟಿ. ಪಾಟೀಲ, ಸಚಿವ ಶಿವರಾಮ ಹೆಬ್ಬಾರ ಕೇವಲ ಸರ್ಕಾರ ಮಟ್ಟದಲ್ಲಿ ಅಲ್ಲದೇ ತಮ್ಮ ಸ್ವಂತ ಶಕ್ತಿಯಿಂದಲೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ವೇಗ ತಂದಿದ್ದಾರೆ ಎಂದರು. ಬಿಜೆಪಿ ನಿಕಟಪೂರ್ವ ಮಂಡಲಾಧ್ಯಕ್ಷ ಗುಡ್ಡಪ್ಪ ಕಾತೂರ, ಹೆಬ್ಬಾರ ಮುಂಡಗೋಡ ತಾಲೂಕಿನ ಅನೇಕ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿ ಆಧುನಿಕ ಭಗೀರಥರಾಗಿದ್ದಾರೆ. ಗ್ರಾಮಗಳ ಸಣ್ಣಪುಟ್ಟರಸ್ತೆಗಳನ್ನೂ ಕಾಂಕ್ರಿಟೀಕರಣಗೊಳಿಸಿದ ಕೀರ್ತಿ ಹೆಬ್ಬಾರಗೆ ಸಲ್ಲುತ್ತದೆ. ಕೇಂದ್ರದಲ್ಲಿ ಮೋದಿ, ದೇಶಕ್ಕೆ ಹೊಸ ಮನ್ವಂತರ ಬರೆಯುತ್ತಿದ್ದರೆ ಕ್ಷೇತ್ರದಲ್ಲಿ ಹೆಬ್ಬಾರರು ಅಭಿವೃದ್ಧಿಯ ಹೊಸ ಪರ್ವವನ್ನೇ ತೋರುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ಗುರುಪ್ರಸಾದ ಹೆಗಡೆ, ಉಷಾ ಹೆಗಡೆ, ಜಿಪಂ ಮಾಜಿ ಸದಸ್ಯ ರವಿ ಗೌಡ ಪಾಟೀಲ, ಪಪಂ ಅಧ್ಯಕ್ಷೆ ಜಯಸುಧಾ ಬೋವಿ, ಉಪಾಧ್ಯಕ್ಷ ಶ್ರೀಕಾಂತ ಸಾನು ಮತ್ತಿತರರು ಇದ್ದರು.

ನಾನೇ ಮುಖ್ಯಮಂತ್ರಿ ಆಗ್ತೀನಿ ಅಂತ ಬಿಜೆಪಿಯವರಿಗೆ ಈಗಲೇ ಭಯ: ಸಿದ್ದು ಮಾತಿನ ಅರ್ಥವೇನು?

ಮುಂಡಗೋಡ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿಠ್ಠಲ ಬಾಳಂಬೀಡ ಸ್ವಾಗತಿಸಿದರು. ಅಶೋಕ ಛಲವಾದಿ ಪ್ರಾಸ್ತಾವಿಕ ನುಡಿದರು. ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಡಿಗೇರ ವಂದಿಸಿದರು. ಮುಂಡಗೋಡ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪಾಟೀಲ ನಿರೂಪಿಸಿದರು.

ಸಮಾವೇಶಕ್ಕೆ 2000ಕ್ಕೂ ಅಧಿಕ ಮಂದಿ ಸೇರಿದ್ದರು. ಚುನಾವಣಾ ವರ್ಷವಾದ್ದರಿಂದ ಕ್ಷೇತ್ರದಲ್ಲಿ ಮುಂಡಗೋಡ ಕಾರ್ಯಕರ್ತರ ಸಮಾವೇಶವೇ ಚುನಾವಣಾ ರಣಕಹಳೆ ಮೊಳಗಿಸಿದಂತಿತ್ತು. ಕಾರ್ಯಕರ್ತರಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಚಿವರೆಂಬ ಹಮ್ಮು ಬಿಮ್ಮು ಇಲ್ಲದೇ ಹೆಬ್ಬಾರ ಕಾರ್ಯಕರ್ತರಿಗೆ ಊಟ ಬಡಿಸುವ ಕಾರ್ಯದಲ್ಲಿ ತೊಡಗಿದ್ದರು.