Asianet Suvarna News Asianet Suvarna News

ದೂರು ಕೊಟ್ಟಿದ್ದಾಯ್ತು, ತನಿಖೆ ಮುಗಿಯೋವರೆಗೆ ಸುಮ್ಮನಿರು: ಸ್ನೇಹಮಯಿ ಕೃಷ್ಣಗೆ ಡಿಕೆ ಸುರೇಶ ಸಲಹೆ

ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಸ್ನೇಹಿಮಯಿ ಕೃಷ್ಣ ಈಗಾಗಲೇ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ತನಿಖೆ ಮುಗಿಯುವವರೆಗೆ ಸುಮ್ಮನಿರಲಿ ಎಂದು ಮಾಜಿ ಸಂಸದ ಡಿಕೆ ಸುರೇಶ್ ತಿಳಿಸಿದರು.

Former mp dk suresh reacts about muda case rav
Author
First Published Oct 4, 2024, 4:43 PM IST | Last Updated Oct 4, 2024, 4:43 PM IST

ಬೆಂಗಳೂರು (ಅ.4): ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಸ್ನೇಹಿಮಯಿ ಕೃಷ್ಣ ಈಗಾಗಲೇ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ತನಿಖೆ ಮುಗಿಯುವವರೆಗೆ ಸುಮ್ಮನಿರಲಿ ಎಂದು ಮಾಜಿ ಸಂಸದ ಡಿಕೆ ಸುರೇಶ್ ತಿಳಿಸಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ಹಗರಣ ನಡೆದಿದೆಯೋ ಇಲ್ವೋ ತನಿಖೆ ಬಳಿಕ ಗೊತ್ತಾಗುತ್ತದೆ ಎಂದರು.

ಮೈಸೂರು ದಸರಾ ಉದ್ಘಾಟನೆ ವೇಳೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದ್ದಾರೆ. ಎಲ್ಲ ಪಕ್ಷದವರೂ ಮುಡಾ ಉಪಯೋಗ ಪಡೆದಿದ್ದಾರೆಂದು ಅವರೇ ಹೇಳಿದ್ದಾರೆ. ಇದರಿಂದ ಜೆಡಿಎಸ್‌ನಲ್ಲೂ ಬಿರುಕಿದೆ ಅಂತಾ ಗೊತ್ತಾಗಿದೆ. ಅವರು ಜೆಡಿಎಸ್ ಪಕ್ಷದ ಎಲ್ಲ ನಿಯಮಗಳನ್ನು ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಅದಕ್ಕೆ ಆ ರೀತಿ ಹೇಳಿದ್ದಾರೆ  ಎಂದರು.

ಇನ್ನು ರಾಜ್ಯದಲ್ಲಿ ಜಾತಿಗಣತಿ ಜಾರಿ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯನವರು ಎಚ್ಚರಿಕೆಯ ನಡೆ ಅನುಸರಿಸಬೇಕು. ಕೇಂದ್ರ ಸರ್ಕಾರ ಕೂಡ ಜಾತಿಗಣತಿ ಮಾಡಿಸುತ್ತಿದೆ. ಅವರ ವರದಿ ಬರುವವರೆಗೆ ಸರ್ಕಾರ ಕಾಯಬೇಕು. ಕೇಂದ್ರದಿಂದ ವರದಿ ಬಂದ್ರೆ ಯಾವುದೇ ಗೊಂದಲ ಆಗುವುದಿಲ್ಲ. ಜನಗಣತಿ ಮಾಡಿಸಲು ಇನ್ನೂ ಒಂದು ವರ್ಷ ಆಗಬಹುದು. ಅಲ್ಲಿಯವರೆಗೆ ಸಿಎಂ ತಾಳ್ಮೆಯಿಂದ ಕಾಯಬೇಕು ಎಂದು ಸಲಹೆ ನೀಡಿದರು.

ಸಿಎಂ ಪರ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಬ್ಯಾಟಿಂಗ್: ಕಳ್ಳರು ಕಳ್ಳರು ಒಂದಾಗಿದ್ದಾರೆ: ಸ್ನೇಹಮಯಿ ಕೃಷ್ಣ ವ್ಯಂಗ್ಯ

ಇನ್ನು ಚನ್ನಪಟ್ಟಣದಲ್ಲಿ ಪದೇಪದೆ ಕಾರ್ಯಕ್ರಮ ನಡೆಸುತ್ತಿರುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಭಿವೃದ್ಧಿಯ ಬಗ್ಗೆ ಜನ ಅರ್ಜಿ ಸಲ್ಲಿಸಿದ್ದರು. 20 ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿದ್ದವು. ಎಲ್ಲೆಲ್ಲಿ ಬೇಡಿಕೆ ಇದ್ದವು ಪರಿಹರಿಸುವ ಕೆಲಸ ಆಗ್ತಿದೆ. ಡಿಕೆ ಶಿವಕುಮಾರ ರಾಜಕೀಯದ ಒಂದು ಭಾಗ. ಹಿಂದೆ ಡಿಕೆ ಶಿವಕುಮಾರ ಅವರಿಗೆ ಚನ್ನಪಟ್ಟಣ ಕೊಡುಗೆ ನೀಡಿದೆ. ಇದೀಗ ಅವರ ಋಣ ತೀರಿಸಬೇಕಿದೆ. ನಮ್ಮ‌ಗುರಿ ಜಿಲ್ಲೆಯನ್ನ ಪ್ರಥಮ ಸ್ಥಾನದಲ್ಲಿ ನಿಲ್ಲಿಸಬೇಕು ಎಂಬುದಾಗಿ. ಆ ಗುರಿ ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿದ್ದೇವೆ. ಹಿಂದೆ ಚನ್ನಪಟ್ಟಣದ ಶಾಸಕರು ಅಭಿವೃದ್ಧಿಗೆ ಆದ್ಯತೆ ಕೊಡ್ತಿರಲಿಲ್ಲ. ಹಾಗಾಗಿ ಡಿಕೆ ಶಿವಕುಮಾರ ಅವರು ಆದ್ಯತೆ ಕೊಡ್ತಿದ್ದಾರೆ. ಆಕ್ಟರ್, ಪ್ರೊಡ್ಯೂಸರ್ ಎಲ್ಲವೂ ಇದ್ದಾರೆ. ಆಗಾಗ ಅವರು ಆಕ್ಟ್ ಮಾಡ್ತಿರಬಹುದು ಎಂದರು.

ದಸರಾ ಚಾಲನೆ ವೇಳೆ ಚಾಮುಂಡೇಶ್ವರಿಗೆ ಅಪಮಾನ; ರಾಜಕೀಯ ಭಾಷಣ ಮಾಡಿದ ಸಾಹಿತಿ ಹಂಪನಾ ವಿರುದ್ಧ ಆರ್ ಅಶೋಕ್ ಗರಂ

ಇನ್ನು ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಿಕೆ ಸುರೇಶ್ ಅಭ್ಯರ್ಥಿಯಾಗ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಂಸದರು, ಅವರ ಅಭಿಮಾನಕ್ಕೆ ಸಾಷ್ಟಾಂಗ ನಮಸ್ಕಾರ. ನಾನು ಈಗಾಗಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇನೆ, ಹಾಗಾಂತ ನಾನು ಸುಮ್ಮನೆ ಕುಳಿತಿಲ್ಲ. ರಾಮನಗರ, ಕುಣಿಗಲ್ ನಲ್ಲೂ ಕೆಲಸ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಸರ್ಕಾರ ಇರೋದ್ರಿಂದ ಸೋತ ಮೇಲೂ ಕೆಲಸ ಮಾಡುತ್ತಿದ್ದೇನೆ ಎಂದರು.

Latest Videos
Follow Us:
Download App:
  • android
  • ios