ಡಬಲ್ ಗೇಮ್ ಗೊತ್ತಿಲ್ಲ, ಕಾಲ ಬರಲಿ ಮಾತಾಡುವೆ: ಸೋಮಣ್ಣ
ನನಗೆ ನನ್ನದೇ ಆದ ಅನುಭವವಿದೆ. ನಾನು ಆಸೆಬುರುಕನಲ್ಲ. ನಾನು ನೇರವಾಗಿ ಮಾತನಾಡುವ ಸ್ವಭಾವದವನು. ಕೆಲವೇ ದಿನಗಳಲ್ಲಿ ಸವಿಸ್ತಾರವಾಗಿ ಮಾತನಾಡುತ್ತೇನೆ. ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ ಬಿಜೆಪಿ ನಾಯಕ ವಿ.ಸೋಮಣ್ಣ

ಬೆಂಗಳೂರು(ನ.17): ಕಾಲ ಕೂಡಿ ಬಂದಾಗ ನಾನು ಮಾತನಾಡುತ್ತೇನೆ. ನನಗೆ ಡಬಲ್ ಗೇಮ್ ಅಥವಾ ಡಬಲ್ ಸ್ಟ್ಯಾಂಡರ್ಡ್ ಗೊತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ವಿ.ಸೋಮಣ್ಣ ತೀಕ್ಷ್ಣವಾಗಿ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಪದಗ್ರಹಣಕ್ಕೆ ಗೈರಾಗಿದ್ದ ಬೆನ್ನಲ್ಲೇ ಅವರ ಈ ಹೇಳಿಕೆ ಹೊರಬಿದ್ದಿದೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನನ್ನದೇ ಆದ ಅನುಭವವಿದೆ. ನಾನು ಆಸೆಬುರುಕನಲ್ಲ. ನಾನು ನೇರವಾಗಿ ಮಾತನಾಡುವ ಸ್ವಭಾವದವನು. ಕೆಲವೇ ದಿನಗಳಲ್ಲಿ ಸವಿಸ್ತಾರವಾಗಿ ಮಾತನಾಡುತ್ತೇನೆ. ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಲೋಕಸಭಾ ಸೇರಿದಂತೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಜಯೇಂದ್ರ ಆಯ್ಕೆಯಿಂದ ಮುನಿಸಿಕೊಂಡ ವಿ ಸೋಮಣ್ಣ, ತುಮಕೂರಿನಲ್ಲಿ ಶಕ್ತಿ ಪ್ರದರ್ಶನ!
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ಸಿದ್ದಗಂಗಾ ಕ್ಷೇತ್ರ ಯಾವುದೋ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಅಲ್ಲ. ನನಗೆ ಅದರ ಅಗತ್ಯವೂ ಇಲ್ಲ. ಇದ್ದರೂ ಮಠವನ್ನು ಬಳಸಿಕೊಳ್ಳುವುದಿಲ್ಲ. ಸಿದ್ದಗಂಗಾ ಮಠಕ್ಕೂ ಮತ್ತು ನನಗೂ ನಾಲ್ಕೈದು ದಶಕಗಳ ಸಂಬಂಧ. ಹಿಂದಿನ ಪೂಜ್ಯ ಶ್ರೀಗಳ ಅಣತಿಯಂತೆ ನಮ್ಮ ಕುಟುಂಬದ ವತಿಯಿಂದ ಸಿದ್ದಗಂಗಾ ಮಠದಲ್ಲಿ ಒಂದು ಸಣ್ಣ ಕಟ್ಟಡ ನಿರ್ಮಿಸಲಾಗಿದೆ. ಅದನ್ನು ಲೋಕಾರ್ಪಣೆ ಮಾಡಿ ಮಠಕ್ಕೆ ಹಸ್ತಾಂತರಿಸಲಾಗುವುದು. ಮೂರು ವರ್ಷಗಳ ಹಿಂದೆ ನಿರ್ಮಾಣ ಆರಂಭವಾಗಿತ್ತು. ಈಗ ಮುಗಿದಿದೆ. ಡಿ.6ರಂದು ಕಾರ್ಯಕ್ರಮ ಮಾಡಬೇಕು ಎಂಬುದನ್ನು ಎರಡು ತಿಂಗಳ ಹಿಂದೆಯೇ ತೀರ್ಮಾನಿಸಲಾಗಿತ್ತು. ಆ ಪ್ರಕಾರ ಸರಳ ಕಾರ್ಯಕ್ರಮ ನಡೆಸಲಾಗುವುದು ಅಷ್ಟೇ ಎಂದು ವಿವರಿಸಿದರು.
ಸ್ವಾಭಾವಿಕವಾಗಿ ಅಧಿಕಾರದಲ್ಲಿರುವವರನ್ನು ಕಾರ್ಯಕ್ರಮಕ್ಕೆ ಕರೆಸಲಾಗುತ್ತದೆ. ಆ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಜಿಲ್ಲೆಯ ಮತ್ತೊಬ್ಬ ಸಚಿವರಾದ ರಾಜಣ್ಣ, ಸ್ಥಳೀಯ ಶಾಸಕರಾದ ಸುರೇಶ್‌ಗೌಡ, ಜ್ಯೋತಿ ಗಣೇಶ್, ಸಂಸದ ಜಿ.ಎಸ್.ಬಸವರಾಜು, ಇಬ್ಬರು ವಿಧಾನಪರಿಷತ್ ಸದಸ್ಯರನ್ನು ಆಹ್ವಾನಿಸಿದ್ದೇನೆ ಎಂದರು.