ಬಿಜೆಪಿ ಸಂವಿಧಾನದ ಮೇಲೆ ಹೇಗೆ ದಬ್ಬಾಳಿಕೆ ಮಾಡುತ್ತಿದೆ ಎಂಬುದರ ಬಣ್ಣವನ್ನು ಸಾರ್ವಜನಿಕವಾಗಿ ಬಯಲು ಮಾಡಬೇಕಿದೆ. ಹೀಗಾಗಿ ಸಂವಿಧಾನ ಜಾರಿಯಾದ ಜ.26ರಂದು ಸಮಾವೇಶ ಏರ್ಪಡಿಸುವ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚೆ ಮಾಡುತ್ತೇವೆ: ಪ್ರಿಯಾಂಕ ಖರ್ಗೆ  

ಬೆಂಗಳೂರು(ಜ.22): ಬಿಜೆಪಿಯು ದೇಶದ ಸಂವಿಧಾನವನ್ನು ವ್ಯವಸ್ಥಿತವಾಗಿ ನಾಶ ಮಾಡಲು ಮುಂದಾಗಿದೆ. ಬಿಜೆಪಿ ಸಂವಿಧಾನದ ಮೇಲೆ ಹೇಗೆ ದಬ್ಬಾಳಿಕೆ ಮಾಡುತ್ತಿದೆ ಎಂಬುದರ ಬಣ್ಣವನ್ನು ಸಾರ್ವಜನಿಕವಾಗಿ ಬಯಲು ಮಾಡಬೇಕಿದೆ. ಹೀಗಾಗಿ ಸಂವಿಧಾನ ಜಾರಿಯಾದ ಜ.26ರಂದು ಸಮಾವೇಶ ಏರ್ಪಡಿಸುವ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚೆ ಮಾಡುತ್ತೇವೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್‌ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯು ಆರ್‌ಎಸ್‌ಎಸ್‌ ತತ್ವ ಸಿದ್ಧಾಂತಗಳನ್ನು ಸರ್ಕಾರದ ನೀತಿಯಾಗಿ ಮಾಡುತ್ತಿದೆ. ಈ ಬಗ್ಗೆ ನಾನು ಸದನದಲ್ಲಿ ಪ್ರಶ್ನೆ ಎತ್ತಿದಾಗ ಸಿ.ಟಿ.ರವಿ ಅವರು ಆರ್‌ಎಸ್‌ಎಸ್‌ ಎಂದೂ ಸಂವಿಧಾನ ವಿರೋಧಿಸಿಲ್ಲ ಎಂದಿದ್ದರು. ದುರದೃಷ್ಟವಶಾತ್‌ ಅದಕ್ಕೆ ಸ್ಪೀಕರ್‌ ಅವಕಾಶ ನೀಡಿ, ದಾಖಲೆ ನೀಡದಿದ್ದರೆ ನನ್ನ ಹೇಳಿಕೆಯನ್ನು ಕಡತದಿಂದ ತೆಗೆದುಹಾಕುವುದಾಗಿ ಹೇಳಿದರು. ರಾಜ್ಯದಲ್ಲಿ ಬಿಜೆಪಿ ಹೆಸರಲ್ಲಿ ಕೇಶವಕೃಪ ಆಡಳಿತ ಮಾಡುತ್ತಿದೆ. ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ರಾಜ್ಯಪಾಲರನ್ನು ನಾಗಪುರದ ನೌಕರರಂತೆ ನಡೆಸಿಕೊಳ್ಳುತ್ತಿದ್ದಾರೆ. ಬಿಜೆಪಿ ಹೇಗೆ ಸಂವಿಧಾನದ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂಬ ವಿಚಾರವಾಗಿ ನಾವು ಸಾರ್ವಜನಿಕ ಚರ್ಚೆ ಮಾಡಬೇಕು ಎಂದು ಹೇಳಿದರು.

ಬಿಜೆಪಿ ಅಂದ್ರೆ ಬ್ರೋಕರ್‌ ಜನತಾ ಪಕ್ಷ: ಪ್ರಿಯಾಂಕ್‌ ಖರ್ಗೆ

ಕೇಂದ್ರದಿಂದ ನ್ಯಾಯಾಂಗ ದಮನ:

ಪ್ರೊ.ಬಿ.ಕೆ.ಚಂದ್ರಶೇಖರ್‌ ಮಾತನಾಡಿ, ಕೇಂದ್ರ ಸರ್ಕಾರದ ಪ್ರಕಾರ ನ್ಯಾಯಾಧೀಶರ ನೇಮಕಾತಿಯಲ್ಲಿ ಪಾರದರ್ಶಕತೆ ಇಲ್ಲವಂತೆ. ಕತ್ತಲಲ್ಲಿ ನೋಟು ರದ್ದತಿ ತೀರ್ಮಾನ ಮಾಡಿದ ಬಿಜೆಪಿಯವರು ಈಗ ಈ ರೀತಿ ಹೇಳುತ್ತಿದ್ದಾರೆ. ಈ ಕಾರಣಕ್ಕೆ ಸುಪ್ರೀಂಕೋರ್ಚ್‌ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡಿರುವ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನ್ಯಾಯಾಧೀಶರ ನೇಮಕಾತಿಯಲ್ಲಿ ಸರ್ಕಾರದ ಪ್ರತಿನಿಧಿ ಇರಬೇಕು ಎಂದು ಹೇಳುತ್ತಿದ್ದಾರೆ. ಆ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನೆ ತನ್ನ ಇಲಾಖೆ ಮಾಡಿಕೊಳ್ಳಲು ಬಿಜೆಪಿ ಸರ್ಕಾರ ಮುಂದಾಗಿದೆ. ಇದನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸಬೇಕಿದೆ. ನ್ಯಾಯಾಂಗ ವ್ಯವಸ್ಥೆ ಮೇಲಿನ ದಬ್ಬಾಳಿಕೆ ವಿರುದ್ಧ ಸಮಾವೇಶ ಮಾಡಬೇಕಿದೆ ಎಂದು ಕರೆ ನೀಡಿದರು.

‘ಕಟೀಲ್‌ಗೆ ಯೋಗ್ಯತೆಯಿಲ್ಲ’

ಕಾಂಗ್ರೆಸ್‌ ಪಕ್ಷದಲ್ಲಿ ಸಭೆ ನಡೆದರೆ ಚಪ್ಪಲಿ ಕೈಯಲ್ಲಿರುತ್ತದೆ ಎಂಬ ನಳಿನ್‌ಕುಮಾರ್‌ ಕಟೀಲ್‌ಗೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ, ಯತ್ನಾಳ್‌ ಅವರು ಸರ್ಕಾರದ ಸಚಿವರನ್ನು ಪಿಂಪ್‌ ಎಂದು ಕರೆದಿದ್ದಾರೆ. ಅವರ ವಿರುದ್ಧ ಬಾಯಿ ಬಿಚ್ಚಲಾಗದ ಕಟೀಲ್‌ಗೆ ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆಯ ಇದೆಯೇ? ಎಂದು ಕಿಡಿ ಕಾರಿದ್ದಾರೆ.

ಕಟೀಲ್‌ ಎಂದಾದರೂ ನಾವು ಕಳೆದ ಮೂರೂವರೆ ವರ್ಷಗಳಿಂದ ಇಂತಹ ಜನಪರ ಕಾರ್ಯಕ್ರಮ ಕೊಟ್ಟಿದ್ದೇವೆ, ಮುಂದೆ ಈ ರೀತಿಯ ಕಾರ್ಯಕ್ರಮ ಕೊಡುತ್ತೇವೆ ಎಂದು ಮಾತನಾಡಿದ್ದಾರಾ? ಅಭಿವೃದ್ಧಿ ವಿಚಾರ ಬಿಟ್ಟು ಲವ್‌ಜಿಹಾದ್‌ ಬಗ್ಗೆ ಮಾತನಾಡಿ ಎನ್ನುವವರು ಕಾಂಗ್ರೆಸ್‌ ಬಗ್ಗೆ ಮಾತನಾಡಿದರೆ ನಾವು ಕೇಳಬೇಕೆ ಎಂದು ಪ್ರಶ್ನಿಸಿದರು.