Asianet Suvarna News Asianet Suvarna News

ಗಣೇಶ, ಸಾವರ್ಕರ್‌ ಹೆಸರಲ್ಲಿ ಬಿಜೆಪಿ ರಾಜಕೀಯ: ಚಲುವರಾಯಸ್ವಾಮಿ

ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗದ ಬಿಜೆಪಿ ಸರ್ಕಾರ ಗಣೇಶ. ಸಾವರ್ಕರ್‌ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. 

former minister n cheluvarayaswamy slams to bjp government at mandya gvd
Author
First Published Aug 28, 2022, 5:09 PM IST

ಮಂಡ್ಯ (ಆ.28): ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗದ ಬಿಜೆಪಿ ಸರ್ಕಾರ ಗಣೇಶ. ಸಾವರ್ಕರ್‌ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ತಾಲೂಕಿನ ಬಸರಾಳು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗಣೇಶನಿಗೂ ಬಿಜೆಪಿಗೂ ಏನು ಸಂಬಂಧ?. ಗಣೇಶ ಸಾರ್ವತ್ರಿಕವಾಗಿ ಎಲ್ಲರಿಗೂ ದೇವರೇ. ಪ್ರಥಮ ಪೂಜೆ ಅಧಿನಾಯಕನಾಗಿರುವ ಗಣಪತಿಗೆ ಎಂದು ಧಾರ್ಮಿಕವಾಗಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಗಣೇಶನ ಜೊತೆಗೆ ಇನ್ನೂ ನೂರು ಜನರ ಫೋಟೋ ಇಟ್ಟುಕೊಳ್ಳಲಿ. ನಮಗೇನೂ ಸಮಸ್ಯೆ ಇಲ್ಲ. 

ಜನರ ಸಮಸ್ಯೆಗಳನ್ನು ಬಗೆಹರಿಸಲಾಗದಿದ್ದಾಗ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಪ್ರಸ್ತುತ ಮಳೆಯಿಂದ ರಸ್ತೆ, ಸೇತುವೆ, ಮನೆಗಳು ಕುಸಿದಿವೆ. ಬೆಳೆಗಳು ಹಾನಿಗೊಳಗಾಗಿವೆ. ಜಿಲ್ಲಾಧಿಕಾರಿ ಮಳೆಯಿಂದ ಜಿಲ್ಲೆಯಲ್ಲಿ 800 ಕೋಟಿ ರು.ನಷ್ಟವಾಗಿದೆ ಎಂದು ವರದಿ ಕಳುಹಿಸಿದ್ದಾರೆ. ಎಷ್ಟುಹಣವನ್ನು ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದೆ ಎಂದು ಪ್ರಶ್ನಿಸಿದರಲ್ಲದೇ, ಜನರ ಕಷ್ಟಗಳಿಗೆ ಸ್ಪಂದಿಸುವ, ಶೀಘ್ರ ಪರಿಹಾರ ಬಿಡುಗಡೆ ಮಾಡುವತ್ತ ಆಸಕ್ತಿ ತೋರಿಸದೆ ಗಣೇಶ, ಸಾವರ್ಕರ್‌ ವಿಚಾರಗಳನ್ನು ಪ್ರಸ್ತಾಪಿಸುತ್ತಾ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂಷಿಸಿದರು.

ಪಾಂಡವಪುರದಲ್ಲಿ ಬೃಹತ್ ಆರೋಗ್ಯ ಮೇಳ ಆಯೋಜಿಸಿ ಶಕ್ತಿ ಪ್ರದರ್ಶನ ತೋರಿದ ಬಿಜೆಪಿ

ಗಣೇಶನ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುವುದಕ್ಕೆ ಆಗುವುದಿಲ್ಲ. ಜನರೇನು ಅಷ್ಟುದಡ್ಡರಲ್ಲ, ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಉತ್ತರ ಕೊಡುತ್ತಾರೆ ಎಂದರು. ಕೊಡಗಿನಲ್ಲಿ ಬಿಜೆಪಿ ಶಕ್ತಿ ಮಾತ್ರ ಇರೋದು, ಕಾಂಗ್ರೆಸ್‌ ಶಕ್ತಿ ಏನೂ ಇಲ್ಲ ಎಂಬ ಭ್ರಮೆಯಲ್ಲಿರುವವರು ಕೊಡಗು ಚಲೋಗೆ ಅವಕಾಶ ಮಾಡಿಕೊಡಬೇಕಿತ್ತು. ಆಗ ನಮ್ಮ ಶಕ್ತಿ ಏನೆಂದು ತೋರಿಸುತ್ತಿದ್ದೆವು. ಕಾಂಗ್ರೆಸ್‌ ಶಕ್ತಿ ಪ್ರದರ್ಶನಕ್ಕೆ ಹೆದರಿ ನಿಷೇಧಾಜ್ಞೆ ಜಾರಿಗೊಳಿಸಿದರು ಎಂದರು. ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಅದರ ಬಗ್ಗೆ ತನಿಖೆ ನಡೆಸುವ ಕಾಳಜಿಯನ್ನು ವ್ಯಕ್ತಪಡಿಸುವ ಗೋಜಿಗೂ ಸರ್ಕಾರ ಹೋಗಿಲ್ಲ. ಇಂತಹವರಿಗೆ ಏನು ಹೇಳಲಾಗುತ್ತೆ ಎಂದು ಪ್ರಶ್ನಿಸಿದರು.

ಕೊಡಗಿನಲ್ಲಿ ಜೆಡಿಎಸ್‌ ಸಸ್ಯಶಾಮಲ ಯಾತ್ರೆ ಮಾಡುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ, ಕುಮಾರಸ್ವಾಮಿ ದೊಡ್ಡವರು. ಅವರ ಬಗ್ಗೆ ನಾವೇನು ಮಾತನಾಡುವುದಿಲ್ಲ. ಅಶ್ವತ್ಥನಾರಾಯಣ ಅವರು ಹೇಳಿದಂತೆ ಅಧಿಕಾರ ಸಿಕ್ಕಾಗ ಏನೂ ಮಾಡುವುದಿಲ್ಲ. ನನಗೆ ಅಧಿಕಾರ ಮಾಡಲು ಬಿಡಲಿಲ್ಲ ಅಂತಾರೆ. ವಾಜಪೇಯಿ 18 ಪಕ್ಷದೊಂದಿಗೆ, ಡಾ.ಮನಮೋಹನ್‌ಸಿಂಗ್‌ 22 ಪಕ್ಷಗಳನ್ನು ಜೊತೆಗೂಡಿಸಿಕೊಂಡು ಅಧಿಕಾರ ನಡೆಸಲಿಲ್ಲವೇ. ಉತ್ತಮ ಆಡಳಿತ ನಡೆಸುವ ಸಾಮರ್ಥ್ಯ, ಇಚ್ಛಾಶಕ್ತಿ ಇರಬೇಕು. ಕಾರಣಗಳನ್ನು ಹೇಳಿದರೆ ಯಾರೂ ನಂಬುವ ಸ್ಥಿತಿಯಲ್ಲಿಲ್ಲ ಎಂದು ಜರಿದರು.

ಆರೋಗ್ಯದ ಬಗ್ಗೆ ಮುಂಜಾಗ್ರತೆ ಅಗತ್ಯ: ಕುಟುಂಬದವರನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಸಲಹೆ ನೀಡಿದರು. ತಾಲೂಕಿನ ಬಸರಾಳು ಸರ್ಕಾರಿ ಶಾಲಾ ಆವರಣದಲ್ಲಿ ಬೆಂಗಳೂರಿನ ಕ್ಯೂರಾ ಹಾಸ್ಪಿಟಲ್‌ ಸಹಯೋಗದಲ್ಲಿ ಕಾಂಗ್ರೆಸ್‌ ಮುಖಂಡ ರವಿಕುಮಾರ್‌ ಗಣಿಗ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಹಿಂದೆಲ್ಲಾ 50-60 ವರ್ಷದ ನಂತರ ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿದ್ದವು. ಈಗ ಆಹಾರ ಕ್ರಮ ಬದಲಾಗಿದೆ. ಪ್ರಸ್ತುತ ದಿನಗಳಲ್ಲಿ ಮೇಲ್ನೋಟಕ್ಕೆ ಆರೋಗ್ಯವಂತರಾಗಿರುವಂತೆ ಕಂಡುಬರುತ್ತಿದ್ದು, ದಿಢೀರನೆ ಸಾವನ್ನಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ. 

ಅಕ್ರಮಗಳ ಸರದಾರ ಕೆಂಪಣ್ಣ: ಮಂಡ್ಯ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ನೃಪತುಂಗ ವಾಗ್ದಾಳಿ

ಯುವಕರು, ಮಧ್ಯ ವಯಸ್ಕರು ಹಠಾತ್‌ ಹೃದಯಾಘಾತಕ್ಕೊಳಗಾಗಿ ಸಾವಿಗೆ ಶರಣಾಗುತ್ತಿದ್ದಾರೆ. ಹಾಗಾಗಿ ಮುಂಜಾಗ್ರತೆಯಾಗಿ ಆರೋಗ್ಯವನ್ನು ತಪಾಸಣೆ ಮಾಡಿಕೊಂಡು ಎಚ್ಚರದಿಂದ ಇರಬೇಕು ಎಂದರು. ಆರೋಗ್ಯವನ್ನು ಸದಾಕಾಲ ಉತ್ತಮವಾಗಿ ಕಾಪಾಡಿಕೊಳ್ಳಬೇಕು. ಉತ್ತಮ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ತರಕಾರಿ, ಹಣ್ಣು ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದರಿಂದ ದೀರ್ಘಕಾಲ ಆರೋಗ್ಯದಿಂದ ಇರಬಹುದು. 6 ತಿಂಗಳು, ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಎದುರಾದರೂ ನಿರ್ಲಕ್ಷ್ಯ ಮಾಡದೆ ತಪಾಸಣೆಗೆ ಮಾಡಿಸಿಕೊಂಡು ಸಮಸ್ಯೆಗಳಿದ್ದರೆ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.

Follow Us:
Download App:
  • android
  • ios