ಸಿದ್ದರಾಮೋತ್ಸವದಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಇದು ಕಾಂಗ್ರೆಸ್‌ ಪಕ್ಷಕ್ಕೆ ತಿರುಗುಬಾಣ ಆಗಲಿದೆ ಹೊರತು. ಬಿಜೆಪಿಗೆ ಯಾವುದೇ ನಷ್ಟವಿಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು. 

ಶಿವಮೊಗ್ಗ (ಆ.03): ಸಿದ್ದರಾಮೋತ್ಸವದಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಇದು ಕಾಂಗ್ರೆಸ್‌ ಪಕ್ಷಕ್ಕೆ ತಿರುಗುಬಾಣ ಆಗಲಿದೆ ಹೊರತು. ಬಿಜೆಪಿಗೆ ಯಾವುದೇ ನಷ್ಟವಿಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು. ನಗ​ರ​ದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 75 ವರ್ಷ ತುಂಬುತ್ತಿರುವ ಸಿದ್ದರಾಮಯ್ಯ ಅವರಿಗೆ ದೇವರು ಇನ್ನೂ ಆಯಸ್ಸು ನೀಡಿ, ರಾಜ್ಯ ಹಾಗೂ ರಾಷ್ಟ್ರದ ಸೇವೆ ಮಾಡಲಿ ಎಂದು ಆರೈಸುತ್ತೇನೆ. ಆದರೆ, ಧರ್ಮದ್ರೋಹದ ಕೆಲಸ ಮಾಡುವ ರಾಷ್ಟ್ರದ್ರೋಹಿಗಳಿಗೆ ಅವರು ಬೆಂಬಲ ನೀಡುವುದನ್ನು ನಾನು ವಿರೋಧಿಸುತ್ತೇನೆ ಎಂದು ಕಟುವಾಗಿ ಹೇಳಿದರು.

ಸಿದ್ದರಾಮೋತ್ಸವ ಬಗ್ಗೆ ಅವರ ಪಕ್ಷದಲ್ಲೇ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಡಿ.ಕೆ.ಶಿವಕುಮಾರ್‌, ಎಸ್‌.ಆರ್‌. ಪಾಟೀಲ್, ಎಂ.ಬಿ.ಪಾಟೀಲ್‌ ಸಿಎಂ ಆಗಲು ಹೊರಟಿದ್ದಾರೆ. ಇನ್ನೂ ಹೆಣ್ಣೆ ಗೊತ್ತಾಗಿಲ್ಲ, ಮದುವೆಯಾಗಿಲ್ಲ. ಆದರೂ ನಾನೇ ಅಪ್ಪ ಎನ್ನುವಂತೆ ಚುನಾವಣೆ ನಡೆಯದೇ ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಎಂದು ಓಡಾಡುತ್ತಿರುವ ಕಾಂಗ್ರೆಸ್‌ ನಾಯಕರು ಮೊದಲು ಚುನಾವಣೆಯಲ್ಲಿ ಗೆಲ್ಲಲಿ. ಆ ನಂತರ ಹುಟ್ಟುವ ಮಗು ಹೆಣ್ಣೋ, ಗಂಡೋ ಅಥವಾ ಸತ್ತ ಮಗುವೋ ಎಂದು ಗೊತ್ತಾಗಲಿದೆ ಎಂದು ಟಾಂಗ್‌ ನೀಡಿದರು.

ಸ್ವಯಂ ಸೇವಕರ ಪಾದದ ಧೂಳಿಗೂ ಸಿದ್ದರಾಮಯ್ಯ ಸಮರಲ್ಲ: ಈಶ್ವರಪ್ಪ ಕಿಡಿ

ನಾವೇ ಮೇಲೂ, ನಾವೇ ಮೇಲೂ ಎಂದು ಅವರವರೇ ಕಿತ್ತಾಡುತ್ತಿದ್ದಾರೆ. ಇದನ್ನು ಬಿಟ್ಟು ಮೊದಲು ಅವರು ಒಂದಾಗಿ ಚುನಾವಣೆಯಲ್ಲಿ ಗೆದ್ದು ಬರಲಿ. ಕಾಂಗ್ರೆಸ್‌ ನಾಯಕರು ಇನ್ನೂ ಅಧಿಕಾರದ ಪಡೆಯುವ ಭ್ರಮೆಯಲ್ಲಿದ್ದಾರೆ. ಈ ಮೊದಲು ಕಾಂಗ್ರೆಸ್‌ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆದರೂ, ಜನರು ಯಾಕೆ ಕಾಂಗ್ರೆಸ್‌ನ್ನು ತಿರಸ್ಕಾರ ಮಾಡಿದರು? ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರ​ದಲ್ಲಿ ಸೋತರು? ಈ ಎಲ್ಲ ಅಂಶಗಳ ಬಗ್ಗೆ ಗಮನಹರಿಸಬೇಕು. ಅದು ಬಿಟ್ಟು ಸಮಾಜವಾದಿ ಎಂದು ಹೇಳಿಕೊಂಡು ಅದ್ಧೂರಿ ಜಯಂತಿ ಮಾಡುವುದು ಎಷ್ಟು ಸರಿ? ಇದು ಆ ಪಕ್ಷಕ್ಕೆ ತಿರುಗುಬಾಣ ಆಗಲಿದೆ ಎಂದು ಖಾರವಾಗಿ ಹೇಳಿದರು.

23 ಕಗ್ಗೊಲೆಯಾಗಿದ್ದು ಕಾಂಗ್ರೆಸ್‌ ಅವಧಿಯಲ್ಲಿ. 17 ಮುಖಂಡರು ಕಾಂಗ್ರೆಸ್‌ಗೆ ರಾಜಿನಾಮೆ ನೀಡಿ ಬಿಜೆಪಿ ಸಿಂಬಲ್‌ ಮೇಲೆ ಗೆದ್ದು ಬಂದಿದ್ದಾರೆ. ಅವರು ಬಾರದಿದ್ದರೆ ಪಕ್ಷ ಅಧಿಕಾರಕ್ಕೆ ಬರುತ್ತಿರಲಿಲ್ಲ. ಗೋ ಹತ್ಯೆ ಸೇರಿದಂತೆ ಹಲವು ಕಾಯ್ದೆ ಜಾರಿಗೆ ಬರುತ್ತಿರಲಿಲ್ಲ. ಬೇರೆ ಪಕ್ಷದವರು ಬಿಜೆಪಿಗೆ ಬಂದಿದ್ದರಿಂದಲೇ ಪೂರ್ಣ ಬಹುಮತ ಬಂತು. ನಮಗೂ ಕಾರ್ಯಕರ್ತರನ್ನು ಕಳೆದುಕೊಂಡಿದ್ದಕ್ಕೆ ನೋವಿದೆ. ಪರಿಸ್ಥಿತಿಯನ್ನು ಎಲ್ಲರೂ ಸೇರಿಕೊಂಡು ಎದುರಿಸಬೇಕಿದೆ. ಚಕ್ರವರ್ತಿ ಸೂಲಿಬೆಲೆ ಬಗ್ಗೆ ನನಗೆ ಗೌರವ ಇದೆ. ಅವರೊಬ್ಬ ರಾಷ್ಟ್ರಭಕ್ತ. ಅವರಿಗೆ ಸಿಟ್ಟು ಬಂದಿದೆ. ಹೀಗಾಗಿ ಆ ರೀತಿ ಮಾತನಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಚಿವ ಸ್ಥಾನ ಬಗ್ಗೆ ವರಿಷ್ಠರು ತೀರ್ಮಾನಿಸ್ತಾರೆ: ಈಶ್ವರಪ್ಪ

ಪಕ್ಷ ಸಂಕಷ್ಟದಲ್ಲಿರುವ ಸಂದರ್ಭ ನಳೀನ್‌ಕುಮಾರ್‌ ಕಟೀಲ್‌ ಜೊತೆ ಇರಬೇಕು. ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರದ ಬಗ್ಗೆ ಕೆಲವರಿಗೆ ಅಸಮಾಧಾನ ಇದೆ. ಯೋಗಿ ಮಾದರಿ ನಿರ್ಧಾರ ರಾಜ್ಯದಲ್ಲಿ ಎಷ್ಟರಮಟ್ಟಿಗೆ ಜಾರಿಗೆ ಬರುತ್ತದೋ ಗೊತ್ತಿಲ್ಲ. ಪಕ್ಷದ ಕಾರ್ಯಕರ್ತರ ಹತ್ಯೆ ಬಗ್ಗೆ ಅನೇಕರಲ್ಲಿ ಅಸಮಾಧಾನ ಇದೆ. ಹಾಗಾಂತ ರಾಜಿನಾಮೆ ನೀಡುವುದು ಎಷ್ಟರ ಮಟ್ಟಿಗೆ ಸರಿ? ರಾಜೀನಾಮೆ ಬದಲು ಹಿರಿಯರ ನೇತೃತ್ವದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕು
- ಕೆ.ಎಸ್‌.ಈಶ್ವರಪ್ಪ, ಮಾಜಿ ಸಚಿ​ವ