ಚಿಂಚನಸೂರು ಬಳಿಕ ಮತ್ತೋರ್ವ ನಾಯಕ ಬಿಜೆಪಿಗೆ ಗುಡ್‌ಬೈ: ಕಾಂಗ್ರೆಸ್ ಸೇರ್ಪಡೆ?
ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಭಯ ನಾಯಕರ ಸೇರ್ಪಡೆ ಕಾಂಗ್ರೆಸ್ ಪಕ್ಷಕ್ಕೆ ಬಲ ಮೂಡಿಸಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳಿವೆ.
ಯಾದಗಿರಿ(ಮಾ.23): ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ನಂತರ, ಇದೀಗ ಮತ್ತೋರ್ವ ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗೋದು ಬಹುತೇಕ ಸಾಧ್ಯತೆಗಳಿವೆ ಅಂತ ಹೇಳಲಾಗುತ್ತಿದೆ.
ಯಾದಗಿರಿ ಮತಕ್ಷೇತ್ರದಿಂದ ಡಾ. ರೆಡ್ಡಿ ಅವರ ಪುತ್ರಿ ಡಾ. ಅನುರಾಘಾ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ಲಕ್ಷಣಗಳಿವೆ. ಕಾಂಗ್ರೆಸ್ ಮೂಲದ ಡಾ.ಎ.ಬಿ.ಮಾಲಕರೆಡ್ಡಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ವಿರುದ್ಧ ಸೋಲುಂಡಿದ್ದರು.
ಯಾದಗಿರಿ: ಬಿಜೆಪಿಯ ಮಾಲಕರೆಡ್ಡಿ ಪುತ್ರಿಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತಾ?
ತಮ್ಮ ಈ ಸೋಲಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಕಾರಣ ಎಂದು ಆಗ ದೂಷಿಸಿ, ಕಿಡಿ ಕಾರಿದ್ದ ಡಾ.ರೆಡ್ಡಿ, ಲೋಕಸಭೆ ಚುನಾವಣೆಯ ವೇಳೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಚಾರಗೈದು ಅವರ ಸೋಲಿಗೂ ಕಾರಣರಾಗಿದ್ದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಸಹ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಆಗ ಸೇರಿದ್ದಾರೆ. ಮೊನ್ನೆ ಮೊನ್ನೆವರೆಗೆ ಖರ್ಗೆ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದ, ಪ್ರಿಯಾಂಕ ಖರ್ಗೆ ಸೋಲಿಸುವುದಾಗಿ ತೊಡೆ ತಟ್ಟಿದ್ದ ಬಾಬುರಾವ್ ಇದೀಗ ಅದೇ ಖರ್ಗೆ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸೇರಿದ್ದಾರೆ.
ಡಾ.ಮಾಲಕರೆಡ್ಡಿ ಅವರೂ ಸಹ ಮತ್ತೆ ಕಾಂಗ್ರೆಸ್ಸಿಗೆ ಬಹುತೇಕ ಬರುವ ಸಾಧ್ಯತೆ ಇದೆ. ಕಾಂಗ್ರೆಸ್ ಸೇರ್ಪಡೆಯ ಮಾತುಗಳ ಬಗ್ಗೆ ತಮ್ಮನ್ನು ಸಂಪರ್ಕಿಸಿದ ಕನ್ನಡಪ್ರಭ ದೊಡನೆ ಮಾತನಾಡಿದ ಡಾ.ರೆಡ್ಡಿ, "ತಮಗೆ ಅಂತಹ ಕರೆ ಇನ್ನೂ ಬಂದಿಲ್ಲ ಬಂದರೆ ಹೋಗುತ್ತೇನೆ" ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇವರ ಸೇರ್ಪಡೆ ಕಾಂಗ್ರೆಸ್ ಪಕ್ಷಕ್ಕೆ ಬಲ ಮೂಡಿಸಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳಿವೆ.