ನನ್ನ ಮೇಲೀಗ ತೂಗುಗತ್ತಿ ಇದೆ, ನಾ ಯಾವುದಕ್ಕೂ ಹೆದರೋನಲ್ಲ: ರೇಣುಕಾಚಾರ್ಯ
ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾನೂ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ. ಟಿಕೆಟ್ ಬಗ್ಗೆ ಕಾದು ನೋಡುತ್ತೇನೆ. ಟಿಕೆಟ್ ಸಿಗದೇ ಇದ್ದರೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ರೇಣುಕಾಚಾರ್ಯ

ದಾವಣಗೆರೆ(ಸೆ.11): ನನ್ನ ಹೋರಾಟ ಯಾರ ವಿರುದ್ಧವೂ ಕತ್ತಿ ಮಸಿಯೋಕೆ ಅಲ್ಲ. ನಮ್ಮ ಪಕ್ಷ ಸಂಘಟಿಸೋದಕ್ಕೆ ಕೆಲಸ ಮಾಡುತ್ತೇನೆ. ನನ್ನನ್ನು ‘ರೆಬೆಲ್ ರೇಣುಕಾಚಾರ್ಯ’ ಅಂತಾದರೂ ಕರೆದು ಕೊಳ್ಳಲಿ. ನಾನು ಹೆದರುವುದಿಲ್ಲ. ನನ್ನ ಮೇಲೀಗ ತೂಗುಗತ್ತಿ ತೂಗುತ್ತಿದೆ. ನಾನು ಯಾವುದಕ್ಕೂ ಹೆದರಲ್ಲ. ಪಕ್ಷದ ಕೆಲವರು ಕೊಟ್ಟನೋಟಿಸ್‌ಗೂ ಉತ್ತರ ಕೋಡೋದಿಲ್ಲ ಎಂದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಖಾರವಾಗಿ ಹೇಳಿದರು.
ನಗರದಲ್ಲಿ ಜಗಳೂರು ಮಾಜಿ ಶಾಸಕ ಟಿ.ಗುರುಸಿದ್ದನಗೌಡ ನಿವಾಸಕ್ಕೆ ಭೇಟಿ ನೀಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸಾಕಷ್ಟು ಹಾನಿಯಾದ ಮೇಲೆ ಮತ್ತೆ ಈಗ ಯಡಿಯೂರಪ್ಪನವರನ್ನು ಮುಂದೆ ತಂದಿದ್ದಾರೆ ಎಂದು ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ಬೇಸರ ಹೊರ ಹಾಕಿದ ಅವರು, ಲೋಕಸಭಾ ಚುನಾವಣೆಯಲ್ಲಿ ಈಗ ಮತಗಳು ಬೇಕಲ್ಲ? ಅದೇ ಕಾರಣಕ್ಕೆ ಯಡಿಯೂರಪ್ಪನವರ ನಾಯಕತ್ವ ಎಂದು ಹೇಳ್ತಿದ್ದಾರೆ. ಬಿಜೆಪಿಯಲ್ಲಿ ಇಂತಹ ನಾಯಕನನ್ನು ಕಡೆಗಣಿಸಿ ಗ್ರಾಪಂ ಚುನಾವಣೆಯಲ್ಲೂ ಗೆಲ್ಲೋಕೆ ಆಗದೇ ಇರೋರು ಪಕ್ಷದ ಜವಾಬ್ದಾರಿ ವಹಿಸಿಕೊಂಡ ಪರಿಣಾಮವೇ ಇಂದಿನ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕಾರಣ ಎಂದು ಸ್ವಪಕ್ಷ ನಾಯಕರ ವಿರುದ್ಧವೇ ಹರಿಹಾಯ್ದರು.
ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ: ಮಾಜಿ ಸಚಿವ ರೇಣುಕಾಚಾರ್ಯ
ಕಟೀಲ್ ಮಾತು ನಿಜವಾಯ್ತು!:
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆನ್ನಲಾದ ಆಡಿಯೋ ವೈರಲ್ ಆಯ್ತು. ಅದರಲ್ಲಿ ವ್ಯವಸ್ಥಿತವಾಗಿ ಬಿಜೆಪಿಯ ಮೂವರು ಮುಂಚೂಣಿ ನಾಯಕರು ಅಂದರೆ, ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್‌ರನ್ನು ಮೂಲೆಗುಂಪು ಮಾಡುವ ಮಾತುಗಳನ್ನಾಡಿದ್ದರು. ಅದು ಕಾಲಾನಂತರ ನಿಜವೂ ಆಯಿತಲ್ಲಾ? ಇನ್ನು, ಯಾವುದೇ ನೋಟಿಸ್ ನೀಡದೆ ಪಕ್ಷದಿಂದ ಗುರುಸಿದ್ದನಗೌಡರನ್ನು ಉಚ್ಚಾಟನೆ ಮಾಡಿದ್ದು ಸಹ ಸರಿಯಲ್ಲ ಎಂದು ಆಕ್ಷೇಪಿಸಿದರು.
ನಾನೂ ಎಂಪಿ ಆಕಾಂಕ್ಷಿ:
ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾನೂ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ. ಟಿಕೆಟ್ ಬಗ್ಗೆ ಕಾದು ನೋಡುತ್ತೇನೆ. ಟಿಕೆಟ್ ಸಿಗದೇ ಇದ್ದರೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.