Asianet Suvarna News Asianet Suvarna News

ಜೆಡಿಎಸ್ ಕತೆ ಮುಗೀತು ಎನ್ನುವುದು ಕಾಂಗ್ರೆಸ್ಸಿಗರ ಭ್ರಮೆ: ಪುಟ್ಟರಾಜು

ಬಿಜೆಪಿಯೊಂದಿಗೆ ನಾವು ಮೈತ್ರಿ ಮಾಡಿಕೊಂಡಿದ್ದೇವಷ್ಟೇ. ಯಾವುದೇ ಕಾರಣಕ್ಕೂ ನಮ್ಮ ಜಾತ್ಯತೀತ ತತ್ವ-ಸಿದ್ಧಾಂತಗಳನ್ನು ಬಿಟ್ಟುಕೊಡುವುದಿಲ್ಲ. ಅವುಗಳನ್ನು ಮುಂದುವರೆಸುತ್ತೇವೆ. ಜೆಡಿಎಸ್ ಕತೆ ಮುಗಿಯಿತು ಎನ್ನುವುದು ಕಾಂಗ್ರೆಸ್ಸಿಗರ ಭ್ರಮೆ ಎಂದು ಲೇವಡಿ ಮಾಡಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು 

Former Minister CS Puttaraju Slams Congress grg
Author
First Published Feb 2, 2024, 4:00 AM IST

ಮಂಡ್ಯ(ಫೆ.02):  ಹನುಮಧ್ವಜ ಪ್ರಕರಣ ಸಂಬಂಧಿಸಿದಂತೆ ನಡೆಸಿದ ಪಾದಯಾತ್ರೆ ಜೆಡಿಎಸ್‌ನ ಅಂತಿಮ ಯಾತ್ರೆಯಲ್ಲ, ಅದು ಜೆಡಿಎಸ್‌ನ ಉದ್ಭವ ಯಾತ್ರೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಟಾಂಗ್ ನೀಡಿದರು. ಪಾದಯಾತ್ರೆ ಸಮಯದಲ್ಲಿ ಎರಡೂ ಪಕ್ಷದವರ ಬಾವುಟ ಇರಬಾರದು ಎಂದು ಮೊದಲೇ ತೀರ್ಮಾನ ಮಾಡಿದ್ದೆವು. ಅದಕ್ಕಾಗಿ ಎಲ್ಲರೂ ಕೇಸರಿ ಶಾಲನ್ನೇ ಧರಿಸಿ ಬಂದಿದ್ದೆವು. ಬಿಜೆಪಿಯವರೂ ಬಾವುಟ ಹಿಡಿದು ಬಂದಿರಲಿಲ್ಲ. ಹಾಗಾಗಿ ಇಲ್ಲಿ ಗೊಂದಲದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿಯೊಂದಿಗೆ ನಾವು ಮೈತ್ರಿ ಮಾಡಿಕೊಂಡಿದ್ದೇವಷ್ಟೇ. ಯಾವುದೇ ಕಾರಣಕ್ಕೂ ನಮ್ಮ ಜಾತ್ಯತೀತ ತತ್ವ-ಸಿದ್ಧಾಂತಗಳನ್ನು ಬಿಟ್ಟುಕೊಡುವುದಿಲ್ಲ. ಅವುಗಳನ್ನು ಮುಂದುವರೆಸುತ್ತೇವೆ. ಜೆಡಿಎಸ್ ಕತೆ ಮುಗಿಯಿತು ಎನ್ನುವುದು ಕಾಂಗ್ರೆಸ್ಸಿಗರ ಭ್ರಮೆ ಎಂದು ಲೇವಡಿ ಮಾಡಿದರು.

ಕೆರಗೋಡು ಹನುಮ ಧ್ವಜ ಪ್ರಕರಣ: ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದ ಚಲುವರಾಯಸ್ವಾಮಿ

ದೇವೇಗೌಡರಿಂದ ಅಭಿವೃದ್ಧಿ,  ಅಧಿಕಾರದ ಬಲ:

ಜಿಲ್ಲೆಗೆ ಜೆಡಿಎಸ್ ಕೊಡುಗೆ ಏನೆಂದು ಕೇಳುವ ಚಲುವರಾಯಸ್ವಾಮಿ ಅವರಿಗೆ ಅಧಿಕಾರ, ಅಭಿವೃದ್ಧಿಯ ಬಲ ಕೊಟ್ಟವರು ಯಾರು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಒಂದು ಟ್ರಾನ್ಸ್‌ಫಾರ್ಮರ್ ಹಾಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಅಳಲು ತೋಡಿಕೊಳ್ಳುತ್ತಿದ್ದ ಚಲುವರಾಯಸ್ವಾಮಿಗೆ ಟ್ರಾನ್ಸ್‌ಫಾರ್ಮರ್ ಹಾಕಲು ಆದೇಶ ಮಾಡುವ ಶಕ್ತಿಯನ್ನು ಕುಮಾರಸ್ವಾಮಿ ಕೊಟ್ಟರು. ಜಿಲ್ಲೆಯಲ್ಲಿ ಎತ್ತ ತಿರುಗಿದರೂ ಕಾಣುವುದು ಜೆಡಿಎಸ್ ಕೊಡುಗೆಗಳೇ ವಿನಃ ಕಾಂಗ್ರೆಸ್ ಕೊಡುಗೆಗಳಲ್ಲ ಎಂದು ಜರಿದರು.

ನೀವು ಶಾಸಕರಾಗಿ, ಸಚಿವರಾಗಿದ್ದದ್ದು ಜೆಡಿಎಸ್ ಸರ್ಕಾರದಲ್ಲೇ ಎನ್ನುವುದನ್ನು ಮೆರೆತಿದ್ದೀರಾ. ನೀವು ಮಾಡಿರುವ ಅಭಿವೃದ್ಧಿಗಳೂ ಜೆಡಿಎಸ್ ಕೊಡುಗೆಗಳೇ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ನಿಮಗೆ ರಾಜಕೀಯವಾಗಿ ಶಕ್ತಿ ತುಂಬಿದ್ದರು. ೨೦೦೮ರ ಚುನಾವಣೆಯಲ್ಲಿ ಸೋತಾಗ ದೊಡ್ಡಬಳ್ಳಾಪುರ ಕ್ಷೇತ್ರದಿಂದ ಟಿಕೆಟ್ ನೀಡಲು ಕುಮಾರಸ್ವಾಮಿ ದೇವೇಗೌಡರಿಗೆ ಹೇಳಿದ್ದರು. ಆದರೆ, ದೇವೇಗೌಡರು ಅದಕ್ಕೆ ಒಪ್ಪದೆ ಮಂಡ್ಯ ಲೋಕಸಭಾ ಚುನಾವಣೆ ಟಿಕೆಟ್ ಕೊಟ್ಟು ಸಂಸತ್‌ಗೆ ಕಳುಹಿಸಿದರು. ರಾಜಕೀಯ ಬೆಳವಣಿಗೆಗೆ ಕಾರಣರಾದವರ ಬಗ್ಗೆ ಇಂದು ಸಚಿವರು ಲಘುವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದರು.

ಸರ್ಕಾರಿ ಕಟ್ಟಡಗಳ ಮೇಲೆ ಕೇಸರಿ ಧ್ವಜ ಹಾರಿಸುವುದು ಅಕ್ಷಮ್ಯ, ಸಹಿಸುವುದಿಲ್ಲ: ಗೃಹ ಸಚಿವ ಪರಮೇಶ್ವರ್

ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಸಿದ್ಧ:

ಜಿಲ್ಲೆಗೆ ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಏನೆಲ್ಲಾ ಕೊಡುಗೆಗಳನ್ನು ನೀಡಿದ್ದಾರೆ ಎಂಬ ಬಗ್ಗೆ ದಾಖಲೆಗಳೊಂದಿಗೆ ಚರ್ಚೆಗೆ ಬರುವುದಕ್ಕೆ ನಾವು ಸಿದ್ಧರಿದ್ದೇವೆ. ನೀವು ಸಿದ್ಧರಿದ್ದೀರಾ. ಬನ್ನಿ ಸಾರ್ವಜನಿಕವಾಗಿ ಚರ್ಚೆ ಮಾಡೋಣ. ಆಗ ಜಿಲ್ಲೆಗೆ ಜೆಡಿಎಸ್ ಕೊಡುಗೆ ಏನು, ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು ಎಂಬ ಸತ್ಯದ ಅರಿವಾಗುತ್ತದೆ ಎಂದು ಸವಾಲು ಹಾಕಿದರು.

೨೦೧೮ರಲ್ಲಿ ಕುಮಾರಸ್ವಾಮಿ ಎಂಟು ಸಾವಿರ ಕೋಟಿ ರು. ಅಭಿವೃದ್ಧಿ ಪ್ಯಾಕೇಜ್ ನೀಡಿದರು. ಎಲ್ಲರೂ ಮಂಡ್ಯ ಬಜೆಟ್ ಎಂದು ಹಾಸ್ಯ ಮಾಡಿದರು. ಏಳೂ ಕ್ಷೇತ್ರಗಳಿಗೆ ಏನೇನು ಅಭಿವೃದ್ಧಿ ಕೆಲಸಗಳಾಗಬೇಕೆಂದು ಚರ್ಚಿಸಿ ಹಣ ಬಿಡುಗಡೆ ಮಾಡಿದ್ದರು. ಇದನ್ನು ಸಹಿಸದೆ ಕುತಂತ್ರ ನಡೆಸಿ ಸರ್ಕಾರ ಬೀಳಿಸಿದರು. ಬಿಜೆಪಿಯವರಿಗೆ ಹಣ ಬಿಡುಗಡೆ ಮಾಡದಂತೆ ತಡೆಹಿಡಿದವರು ನೀವು. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಅಡ್ಡಗಾಲಾಗದಿದ್ದರೆ ಇಂದು ಹಾಸನ, ರಾಮನಗರದ ಚಿತ್ರಣ ಮಂಡ್ಯದಲ್ಲಿ ಕಾಣಬಹುದಿತ್ತು ಎಂದು ಟೀಕಿಸಿದರು. ಗೋಷ್ಠಿಯಲ್ಲಿ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಕೆ.ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಜಯರಾಂ ಇದ್ದರು.

Follow Us:
Download App:
  • android
  • ios