ಜನಾರ್ದನ ರೆಡ್ಡಿ ಸೇರ್ಪಡೆ ವಿಜಯೇಂದ್ರಗೆ ಬಿಟ್ಟದ್ದು: ರಾಮುಲು
ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಬಿಟ್ಟದ್ದು. ಈ ವಿಚಾರದಲ್ಲಿ ಒಬ್ಬ ರಾಮುಲು ಏನೂ ಮಾಡಲು ಸಾಧ್ಯವಿಲ್ಲ. ಎಲ್ಲರೂ ಸೇರಿದರೆ ಪಕ್ಷ ಬೆಳೆಯುತ್ತದೆ. ಆದರೆ, ಈ ವಿಚಾರ ಕುರಿತು ನನ್ನ ಬಳಿ ಈವರೆಗೆ ಯಾರೂ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದ ಮಾಜಿ ಸಚಿವ ಬಿ.ಶ್ರೀರಾಮುಲು
ಬಳ್ಳಾರಿ(ನ.26): ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಬಂದರೆ ಸ್ವಾಗತಿಸುವೆ. ಜನಾರ್ದನ ರೆಡ್ಡಿ ಸೇರಿ ಯಾರೇ ಬಂದರೂ ಪಕ್ಷದ ಬಲ ಹೆಚ್ಚುತ್ತದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಬಿಟ್ಟದ್ದು. ಈ ವಿಚಾರದಲ್ಲಿ ಒಬ್ಬ ರಾಮುಲು ಏನೂ ಮಾಡಲು ಸಾಧ್ಯವಿಲ್ಲ. ಎಲ್ಲರೂ ಸೇರಿದರೆ ಪಕ್ಷ ಬೆಳೆಯುತ್ತದೆ. ಆದರೆ, ಈ ವಿಚಾರ ಕುರಿತು ನನ್ನ ಬಳಿ ಈವರೆಗೆ ಯಾರೂ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಶ್ರೀರಾಮುಲುವನ್ನು ರಾಜ್ಯಮಟ್ಟದಲ್ಲಿ ಬೆಳೆಸಿದ್ದೇ ನಾನು: ಜನಾರ್ದನ ರೆಡ್ಡಿ
ನಾವೆಲ್ಲ ಬೇರೆ ಬೇರೆಯಾಗಿದ್ದರೆ ಸೋಲುತ್ತೇವೆ. ಅವರೂ ಸೋತಿದ್ದಾರೆ. ಎಲ್ಲರೂ ಸೇರಿದರೆ ಮತ್ತೆ ಗೆಲುವು ಸಾಧ್ಯ. ಯಾವಾಗಲೂ ಒಗ್ಗೂಡಿದರಷ್ಟೇ ಶಕ್ತಿ ವೃದ್ಧಿಯಾಗುತ್ತದೆ. ಪಕ್ಷದ ಬೆಳವಣಿಗೆಗೆ ಎಲ್ಲರೂ ಜತೆಗಿರುವುದೇ ಹೆಚ್ಚು ಅನುಕೂಲ ಎಂದರಲ್ಲದೆ, ರೆಡ್ಡಿ ಬರುವಿಕೆಯಿಂದ ಪಕ್ಷಕ್ಕೆ ಹೆಚ್ಚು ಬಲ ಬರುತ್ತದೆ ಎಂದು ಶ್ರೀರಾಮುಲು ಸಮರ್ಥಿಸಿಕೊಂಡರು.