ಮೈಸೂರು, (ಅ.25): ಜಿಲ್ಲೆಯ ಹುಣಸೂರು ಬೈ ಎಲೆಕ್ಷನ್‌ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಎನ್ನಲಾದ ಎಚ್.ಪಿ.ಮಂಜುನಾಥ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮಾಜಿ ಉಪಮುಖ್ಯಮಂತ್ರಿ, ದಿವಂಗತ ಎಂ.ಪಿ ಪ್ರಕಾಶ್ ಪುತ್ರಿ ಸುಮಾ ವಿಜಯ್ ಅವರು ಮಾಜಿ ಶಾಸಕ, ಸಿದ್ದರಾಮಯ್ಯ ಅವರ ಆಪ್ತ ಎಚ್.ಪಿ. ಮಂಜುನಾಥ್ ವಿರುದ್ಧ ಕೊಲೆ ಬೆದರಿಕೆ ದೂರು ದಾಖಲಿಸಿದ್ದಾರೆ.

ರಂಗೇರಿದ ಬೈ ಎಲೆಕ್ಷನ್: ಹುಣಸೂರು ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಫೈನಲ್

ತನಗೆ ಬೆದರಿಕೆ ಹಾಕಿರುವ ಕುರಿತು ಎಂ.ಪಿ ಪ್ರಕಾಶ್ ಪುತ್ರಿ ಸುಮಾ ವಿಜಯ್ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಎಚ್.ಪಿ.ಮಂಜುನಾಥ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಏನಿದು ಆರೋಪ..?
ನನ್ನ ತಮ್ಮ, ಮಾಜಿ ಶಾಸಕ ಎಂ.ಪಿ ರವೀಂದ್ರ ಹಾಗೂ ಎಚ್.ಪಿ ಮಂಜುನಾಥ್ ಸ್ನೇಹಿತರಾಗಿದ್ದರು. ನನ್ನ ತಮ್ಮ ಮೈಸೂರಿನ ವಿವಿ ಮೊಹಲ್ಲಾದಲ್ಲಿ ಪೆಂಟ್ ಹೌಸ್ ಖರೀದಿಸಿದ್ದನು. 

ಸ್ನೇಹಿತರಾಗಿದ್ದ ಕಾರಣಕ್ಕೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಮಂಜುನಾಥ್‍ಗೆ ಬಿಟ್ಟುಕೊಟ್ಟಿದ್ದನು. ರವೀಂದ್ರ ಮರಣದ ನಂತರ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದು, ಈಗ ಮನೆ ಖಾಲಿ ಮಾಡುತ್ತಿಲ್ಲ. ಮನೆ ಕೀ ಕೇಳಿದರೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸುಮಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಮತ್ತೊಂದೆಡೆ ಸುಮಾ ವಿಜಯ ವಿರುದ್ಧ ಮಂಜುನಾಥ್ ಸಹ ಪ್ರತಿದೂರು ನೀಡಿದ್ದಾರೆ. ಅತಿಕ್ರಮ ಪ್ರವೇಶ ಸಂಬಂಧ ದೂರು- ಪ್ರತಿದೂರು ದಾಖಲಾಗಿದ್ದು, ಮುಂದೆ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರು ಈಗಾಗಲೇ ಹುಣಸೂರು ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಂದು ಅಂತಿಮಗೊಳಿಸಲಾಗಿದೆ. ಆದ್ರೆ ಅಧಿಕೃತ  ಘೋಷಣೆಯೊಂದೇ ಬಾಕಿ ಇದೆ.

ಉಪಚುನಾವಣೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದ ಮಂಜುನಾಥ್‌ ಅವರಿಗೆ ಇದೊಂದು ಕಂಟಕ ಎದುರಾಗಿದೆ. ಎಚ್.ವಿಶ್ವನಾಥ್ ಅವರು ರಾಜೀನಾಮೆ ನೀಡಿದ್ದರಿಂದ ಹುಣಸೂರು ವಿಧಾನಸಭೆಗೆ ಉಪಚುನಾವಣೆ ಇದೇ ಡಿಸೆಂಬರ್ 5ರಂದು ಮತದಾನ ನಡೆಯಲಿದ್ದು, ಡಿಸೆ<ಬರ್ 9ರಂದು ಫಲಿತಾಂಶ ಹೊರಬೀಳಲಿದೆ.