ಬೆಂಗಳೂರು (ಸೆ.16): ಸುಮಾರು 14 ದಿನಗಳ ವಿದೇಶ ಪ್ರವಾಸ ಪೂರ್ಣಗೊಳಿಸಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಭಾನುವಾರ ಬೆಳಗಿನ ಜಾವ ಮೂರರ ಸುಮಾರಿಗೆ ಬೆಂಗಳೂರಿಗೆ ಆಗಮಿಸಲಿದ್ದು, ಇದರ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುವ ನಿರೀಕ್ಷೆ ಮೂಡಿದೆ.

ಸಿದ್ದರಾಮಯ್ಯ ಕಾಲಿಡುತ್ತಿರುವಂತೆಯೇ ಸಮ್ಮಿಶ್ರ ಸರ್ಕಾರವನ್ನು ಕಾಡುತ್ತಿರುವ ಅಸ್ಥಿರತೆಯನ್ನು ನಿವಾರಿಸುವ ಹೊಣೆ ಅವರ ಹೆಗಲೇರುವ ಸಾಧ್ಯತೆಯಿದೆ. ಏಕೆಂದರೆ, ಅಸಮಾಧಾನದ ಕಿಡಿಯೊತ್ತಿಸಿರುವ ಜಾರಕಿಹೊಳಿ ಸಹೋದರರು ಸೇರಿ ಆಪರೇಷನ್ ಕಮಲಕ್ಕಾಗಿ ಬಿಜೆಪಿ ನಾಯಕತ್ವದ ಸಂಪರ್ಕಕ್ಕೆ ಸಿಲುಕಿರುವ ಬಹುತೇಕರು ಸಿದ್ದರಾಮಯ್ಯನ ಕ್ಯಾಂಪ್‌ಗೆ ಸೇರಿದವರು. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಗೊಂದಲಗಳ ಹಿಂದೆ ಸಿದ್ದರಾಮಯ್ಯ ಪರೋಕ್ಷ ಚಿತಾವಣೆ ಇದೆ ಎಂದು ಬಿಂಬಿಸಲಾಗುತ್ತಿದೆ. ಅಲ್ಲದೆ, ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ. ಶಿವಕುಮಾರ್ ಮೂಗು ತೂರಿಸುವಿಕೆ ಬಗ್ಗೆ ಕೆಂಡಕಾರಿದ್ದ ರಮೇಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಹಿಂತಿರುಗಿದ ನಂತರ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳು ವುದಾಗಿ ಘೋಷಣೆ ಮಾಡಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನಗರಕ್ಕೆ ಆಗಮಿಸಿದ ನಂತರ ಭರ್ಜರಿ ರಾಜಕೀಯ ಚಟುವಟಿಕೆ ಆರಂಭವಾಗುವ ಸೂಚನೆಯಿದೆ.

ಸಿದ್ದರಾಮಯ್ಯ ಅವರ ಆಪ್ತರ ಪ್ರಕಾರ, ಅವರ ಬೆಂಬಲಿಗರೇ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದ್ದಾರೆ ಎಂಬ ಬಿಂಬಿಸುವಿಕೆಗೆ ಆಸ್ಪದ ದೊರೆಯದಂತೆ ಸಿದ್ದರಾಮಯ್ಯ ನಡೆದುಕೊಳ್ಳಲಿದ್ದಾರೆ. 

ಈ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗರ ಸಭೆಗಳನ್ನು ನಡೆಸಿ ಅವರನ್ನು ಸಮಾಧಾನಿಸುವ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಅವರ ಅಹವಾಲು ಆಲಿಸುವಂತೆ ಮಾಡುವ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲಿದ್ದಾರೆ.

ಸ್ಪಷ್ಟ ಸಂದೇಶ ರವಾನೆ: 
ಇನ್ನು ಕಾಂಗ್ರೆಸ್ ಸಚಿವರು ಹಾಗೂ ಶಾಸಕರ ಕ್ಷೇತ್ರಗಳ ವರ್ಗಾವಣೆ ವಿಚಾರದಲ್ಲಿ ವ್ಯಾಪಕ ಹಸ್ತಕ್ಷೇಪ ನಡೆಸುತ್ತಿರುವ ಜೆಡಿಎಸ್‌ನ ನಾಯಕತ್ವಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡುವಂತಹ ಪ್ರಯತ್ನವನ್ನು ಅವರು ಮಾಡಲಿದ್ದಾರೆ ಎನ್ನಲಾಗಿದೆ.

ಜತೆಗೆ, ಕಾಂಗ್ರೆಸ್‌ನ ಕೆಲ ಪ್ರಭಾವಿ ಸಚಿವರು ಜೆಡಿಎಸ್ ನಾಯಕತ್ವದೊಂದಿಗೆ ಸೇರಿ ತಮ್ಮ ಬೆಂಬಲಿಗರ ರಾಜಕೀಯ ಪ್ರಾಬಲ್ಯ ಮುರಿಯಲು ನಡೆಸುತ್ತಿರುವ ಪ್ರಯತ್ನಗಳಿಗೂ ಕಡಿವಾಣ ಹಾಕುವಂತಹ ಪ್ರಯತ್ನವನ್ನು ಅವರು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮೂಲಗಳ ಪ್ರಕಾರ ಭಾನುವಾರ ನಗರಕ್ಕೆ ಆಗಮಿಸಲಿರುವ ಅವರು ಬಹುತೇಕ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಒಂದು ವೇಳೆ ಕಾಂಗ್ರೆಸ್ ರಾಜ್ಯ ನಾಯಕರು ಬಯಸಿದರೆ ವಿಧಾನಪರಿಷತ್ ನಾಮ ನಿರ್ದೇಶನ ಹಾಗೂ ಅ. 3ರ ಚುನಾವಣೆ ಕುರಿತ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ. ವಿಧಾನಪರಿಷತ್ತಿನ ಸ್ಥಾನಗಳ ಬಗ್ಗೆ ಜೆಡಿಎಸ್ ಜತೆ ಪಾಲು ಹಂಚಿಕೊಳ್ಳುವ ವಿಚಾರವನ್ನುಪ್ರಮುಖವಾಗಿ ಬಗೆಹರಿಸಿಕೊಳ್ಳಬೇಕಿದೆ.

ರಾಹುಲ್ ಭೇಟಿಗೆ ಸಮಯ ಕೋರಿಕೆ: 
ಇದೇ ವೇಳೆ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭೇಟಿಗೂ ಸಮಯ ಕೋರಿದ್ದು, ಬಹುತೇಕ ಸೋಮವಾರದ ನಂತರ ಅವರಿಗೆ ಅವಕಾಶ ದೊರೆಯ ಬಹುದು. ಅಷ್ಟರೊಳಗೆ ಅವರು, ಜಾರಕಿಹೊಳಿ ಸಹೋದರರು ಅದರಲ್ಲೂ ವಿಶೇಷವಾಗಿ ರಮೇಶ್ ಜಾರಕಿಹೊಳಿ ಅವರ ಅಹವಾಲು ಕೇಳಬೇಕಿದ್ದು, ಅವರನ್ನು ಸಮಾಧಾನ ಪಡಿಸಲು ಸೂತ್ರವನ್ನು ಸಿದ್ಧಪಡಿಸಬೇಕಾಗಬಹುದು. ಜತೆಗೆ, ಬಿಜೆಪಿ ನಡೆಸಿರುವ ಆಪರೇಷನ್ ಕಮಲಕ್ಕೆ ಬಲಿಯಾಗದಂತೆ ತಡೆಯಲು ತಮ್ಮ ಬೆಂಬಲಿಗ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ.

ಇದು ಸಾಧ್ಯವಾಗಬೇಕಾದರೆ ಸರ್ಕಾರದ ಕಾರ್ಯವೈಖರಿ ಬಗ್ಗೆ ತಮ್ಮ ಬೆಂಬಲಿಗ ಶಾಸಕರು ಹೊಂದಿರುವ ಅಸಮಾಧಾನವನ್ನು ಪರಿಹರಿಸಲು ಹೈಕಮಾಂಡ್ ನೆರವನ್ನು ಅವರು ಪಡೆಯಬೇಕು. ಏಕೆಂದರೆ, ಹೈಕಮಾಂಡ್ ನೆರವು ದೊರೆತರೆ ಮಾತ್ರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರನ್ನು ನಿಭಾಯಿಸಿ ತಮ್ಮ ಬೆಂಬಲಿಗರ ಬೇಡಿಕೆಗಳು ಈಡೇರುವಂತೆ ಮಾಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಈ ವಾರದಲ್ಲಿ ನಡೆಸಲಿರುವ ದೆಹಲಿ ಪ್ರವಾಸ ಅತ್ಯಂತ ಪ್ರಮುಖವಾಗಲಿದೆ.

ಹೈಕಮಾಂಡ್ ಭೇಟಿಯ ವೇಳೆ ಸಿದ್ದರಾಮಯ್ಯ ಅವರು ಬಯಸಿದ್ದು ನೆರವೇರಿದರೆ ಹಾಗೂ ತಮ್ಮ ಬೆಂಬಲಿಗರಿಗೆ ಸಮಾಧಾನವಾಗುವಂತಹ ಕ್ರಮ ಕೈಗೊಳ್ಳುವ ಶಕ್ತಿ ದೊರೆತರೆ ಮುಂದಿನ ವಾರದಲ್ಲೇ ಸಮನ್ವಯ ಸಮಿತಿ ಸಭೆ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯನ್ನು ಅವರು ಆಯೋಜಿಸಬಹುದು. ಈ ಸಭೆಯ ವೇಳೆ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿರುವ ಆತಂಕ ಚೆದುರಿರುವ ಹಾಗೂ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಬಗೆಹರಿದಿವೆ ಎಂಬ ಸಂದೇಶವು ರವಾನೆಯಾಗಬಹುದು ಎಂದು ಹೇಳಲಾಗುತ್ತಿದೆ. ಇದಾಗದ ಪಕ್ಷದಲ್ಲಿ ರಾಜ್ಯದಲ್ಲಿ ಹಾಲಿ ಇರುವ ರಾಜಕೀಯ ಗೊಂದಲ ಮತ್ತಷ್ಟು ಉಲ್ಬಣಗೊಳ್ಳಬಹುದು. ಆದರೆ, ಲೋಕಸಭಾ ಚುನಾವಣೆ ಸಾಮೀಪ್ಯದ ಹಿನ್ನೆಲೆಯಲ್ಲಿ ಹೈಕಮಾಂಡ್ ಇಂತಹ ಬೆಳವಣಿಗೆಗೆ ಆಸ್ಪದ ನೀಡುವುದಿಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

10 ಸಿದ್ದು ಸಾಧ್ಯತೆಗಳು
1. ಬೆಂಗಳೂರಿಗೆ ಮರಳುತ್ತಿದ್ದಂತೆ ವಿಶ್ರಾಂತಿ ಸಾಧ್ಯತೆ. ಪಕ್ಷ ಬಯಸಿದರೆ ಎಂಎಲ್‌ಸಿ ನಾಮನಿರ್ದೇಶನ, ಅ.3ರ ಚುನಾವಣೆ ಕುರಿತ ಸಭೆಯಲ್ಲಿ ಭಾಗಿ
2. ಅತೃಪ್ತರಲ್ಲಿ ತಮ್ಮ ಆಪ್ತರೇ ಹೆಚ್ಚಿದ್ದು ಅವರ ಜತೆ ಸಭೆ ನಡೆಸಿ ಸಮಾಧಾನಪಡಿಸುವ, ಸರ್ಕಾರದಲ್ಲಿ ಅವರ ಅಹವಾಲಿಗೆ ಮನ್ನಣೆ ಕೊಡಿಸುವ ಸಾಧ್ಯತೆ
3. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಗೆ ಅನುಮತಿ ಕೋರಿದ್ದು, ಅವಕಾಶ ಸಿಕ್ಕರೆ ಸೋಮವಾರದ ನಂತರ ರಾಷ್ಟ್ರ ರಾಜಧಾನಿ ದೆಹಲಿಗೆ
ತೆರಳಿ ಮಾತುಕತೆ ಸಂಭವ.
4. ಕಾಂಗ್ರೆಸ್ ಹೈಕಮಾಂಡ್ ಭೇಟಿ ವೇಳೆ ವಿವಾದಗಳು ಇತ್ಯರ್ಥಗೊಂಡರೆ, ಮುಂದಿನವಾರ ಸಮನ್ವಯ ಸಮಿತಿ ಸಭೆ, ಕಾಂಗ್ರೆಸ್ ಶಾಸಕಾಂಗ ಸಭೆ ಆಯೋಜನೆ
5 ಒಟ್ಟಾರೆಯಾಗಿ ತಮ್ಮ ಅನುಪಸ್ಥಿತಿಯಲ್ಲಿ ಮೂಡಿರುವ ರಾಜಕೀಯ ಗೊಂದಲಗಳನ್ನು ನಿವಾರಿಸಲು ಸಿದ್ದು ಸರ್ವರೀತಿಯಲ್ಲಿ ಶ್ರಮಿಸುವ ಲೆಕ್ಕಾಚಾರ