ಮಾಂಸ ತಿನ್ನುವುದು, ಬಿಡುವುದು, ದೇವಸ್ಥಾನಕ್ಕೆ ಹೋಗುವುದು, ಬಿಡುವುದು ಇಶ್ಯೂಗಳೇ ಅಲ್ಲ: ಸಿದ್ದು
ಭೂತದ ಬಾಯಲ್ಲಿ ಭಗವದ್ಗೀತೆ ಎಂಬುದು ಜನತೆಗೆ ಅರ್ಥವಾಗಿದೆ: ಸಿದ್ದರಾಮಯ್ಯ
ಹುನಗುಂದ(ಫೆ.23): ಮಾಂಸ ತಿನ್ನುವುದು, ತಿನ್ನದೇ ಇರುವುದು ಇಶ್ಯೂಗಳೇ ಅಲ್ಲ. ಬದಲಾಗಿ ಜನರ ಸಮಸ್ಯೆಗಳು ಹಾಗೂ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಂಸಹಾರ ತಿಂದು ಸಿಟಿ ರವಿ ದೇವಸ್ಥಾನಕ್ಕೆ ಹೋಗಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಪ್ರಕಾರ ದೇವಸ್ಥಾನಕ್ಕೆ ಹೋಗುವುದು, ಹೋಗದೇ ಇರುವುದು, ಮಾಂಸ ತಿನ್ನುವುದು, ತಿನ್ನದೇ ಇರುವುದು ಇಶ್ಯೂಗಳೇ ಅಲ್ಲ ಎಂದರು.
ನಾನು ಅಧಿವೇಶನದಲ್ಲಿ ಸಹ ಕೇವಲ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುವುದಾಗಿ ನಿನ್ನೆ ಹೇಳಿದ್ದೆ. ಚರ್ಚಿಸುವುದಕ್ಕೆ ಬಿಜೆಪಿಗರು ಸಿದ್ಧರಿಲ್ಲ. 4 ವರ್ಷದಲ್ಲಿ ಯಾವ ಸಾಧನೆ ಮಾಡಿದ್ದೀರಿ ಅಥವಾ ಯಾವ ಸಮಸ್ಯೆಗಳನ್ನು ಬಗೆಹರಿಸಿದ್ದೀರಿ ಎಂಬುವುದನ್ನು ಅವರು ಹೆಳುವುದಿಲ್ಲ. ಬದಲಾಗಿ ನಾಮ ಹಾಕಿಕೊಳ್ಳುವುದು, ದೇವಸ್ಥಾನಕ್ಕೆ ಹೋಗುವುದು, ಟಿಪ್ಪುಬಗ್ಗೆ ಮಾತನಾಡುವುದು, ಅಬ್ಬಕ್ಕನ ಬಗ್ಗೆ ಮಾತನಾಡುವುದು, ಗಾಂಧೀಜಿ, ಗೋಡ್ಸೆ ಬಗ್ಗೆ ಮಾತನಾಡುವುದು ಮಾಡುತ್ತಾರೆ. ಆದರೆ, ಜನ ಬುದ್ಧಿವಂತರಿದ್ದಾರೆ ಎಂಬುವುದನ್ನು ಮಾತ್ರ ನಾನು ಹೇಳಬಲ್ಲೆ ಎಂದರು.
ಚಿಕ್ಕಮಗಳೂರು: ಸಚಿವ ಅಶ್ವಥ್ ನಾರಾಯಣರನ್ನ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಆಗ್ರಹ
ದೇವಸ್ಥಾನಕ್ಕೆ ಮಾಂಸ ತಿಂದ ವಿಷಯ ಇಟ್ಟುಕೊಂಡು ನನ್ನ ಬಗ್ಗೆ ಅಪಪ್ರಚಾರ ಮಾಡಿದರು. ಈಗ ಭೂತದ ಬಾಯಲ್ಲಿ ಭಗವದ್ಗೀತೆ ಎಂಬುದು ಜನತೆಗೆ ಅರ್ಥವಾಗಿದೆ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಹೇಳಿದರು.
ಪ್ರವಾಹ ಬಂದಾಗ, ಕೊರೋನಾ ಬಂದಾಗ, ಆಕ್ಷಿಜನ್ ಇಲ್ಲದೆ ಜನ ಸಾಯುವ ಸಂದರ್ಭದಲ್ಲಿ ರಾಜ್ಯಕ್ಕೆ ಬಾರದ ಪ್ರಧಾನಿಗಳು ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಉದ್ದೇಶಕ್ಕಾಗಿ ಮಾತ್ರ ರಾಜ್ಯಕ್ಕೆ ಬರುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಬಗ್ಗೆ ಯೋಚನೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ನಾಯಕರಿಗೆ ಮತಕೇಳುವ ಮುಖವಿಲ್ಲ. ಅವರೆಲ್ಲರೂ ಭ್ರಷ್ಟರಾಗಿರುವುದರಿಂದ ಜನರ ಮುಂದೆ ಹೋಗಲು ಭಯಪಟ್ಟು ಮೋದಿಯನ್ನು ಕರೆಯಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಪಕ್ಷದ ಟಿಕೆಟ್ ಕುರಿತು ಈಗಾಗಲೇ ಎರಡು ಸಭೆಗಳು ಆಗಿದ್ದು, ಸದ್ಯದಲ್ಲಿ ಟಿಕೆಟ್ ಫೈನಲ್ ಆಗಲಿದೆ ಎಂದರು.
ನಟ ಅನಂತನಾಗ ಪಾಪ ಬಿಜೆಪಿ ಸೇರಿಕೊಳ್ಳಲಿ:
ಚಿತ್ರನಟ ಅನಂತನಾಗ ಅವರು ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂಬ ಮಾತಿಗೆ ಉತ್ತರಿಸಿದ ಸಿದ್ದರಾಮಯ್ಯ, ಅನಂತನಾಗ ಅವರು ಒಳ್ಳೆಯ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಚುನಾವಣೆ ಸಂದರ್ಭದಲ್ಲಿ ಈ ರೀತಿ ಪಕ್ಷಾಂತರ ಸಾಮಾನ್ಯ ಪ್ರಕ್ರಿಯೆ. ಹಿಂದೆ ಅನಂತನಾಗ ನಮ್ಮ ಜೊತೆ ಇದ್ದರು. ಪಟೇಲರ ಕಾಲದಲ್ಲಿ ಸಚಿವರೂ ಆಗಿದ್ದರು. ಈಗ ಬಿಜೆಪಿ ಸೇರುತ್ತಾರೆ ಎಂದರೆ ಪಾಪ ಸೇರಿಕೊಳ್ಳಲಿ ಬಿಡಿ ಎಂದರು.