ದೇಶದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಕಮ್ಯುನಿಸ್ಟರು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್‌ ಮಾತ್ರ ಬಿಜೆಪಿಗೆ ಪರ್ಯಾಯ ಶಕ್ತಿಯಾಗಿದೆ: ಸಿದ್ದು 

ಬೆಂಗಳೂರು(ಜು.21):  ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಹೀಗೆ ಮುಂದುವರೆದರೆ ಶ್ರೀಲಂಕಾದಲ್ಲಿ ಉಂಟಾಗಿರುವ ಪರಿಸ್ಥಿತಿಯೇ ಭಾರತಕ್ಕೂ ಬರುತ್ತದೆ. ಆರ್ಥಿಕ ಸಮಸ್ಯೆ ಉಂಟಾಗಿ ತುರ್ತು ಪರಿಸ್ಥಿತಿ ಘೋಷಿಸಬೇಕಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಸಿದರು.

ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಗುರುವಾರ ಏರ್ಪಡಿಸಿದ್ದ ಬೃಹತ್‌ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಹಿಟ್ಲರ್‌ ವಿಚಾರಧಾರೆ ಹೊಂದಿದ್ದಾರೆ. ಅದಾನಿ, ಅಂಬಾನಿ ಸೇರಿದಂತೆ ಸಿರಿವಂತರಿಗೆ ವಿಧಿಸುತ್ತಿರುವ ತೆರಿಗೆಯನ್ನು ಕಡಿತ ಮಾಡಿ, ಬಡವರು ದಿನ ನಿತ್ಯ ಬಳಸುವ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸುತ್ತಿದ್ದಾರೆ. ಮೋದಿ ಅಧಿಕಾರದಲ್ಲಿ ಮುಂದುವರೆದರೆ ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಭಾರತದಲ್ಲೂ ಉಂಟಾಗುತ್ತದೆ. ತುರ್ತು ಪರಿಸ್ಥಿತಿ ಘೋಷಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಬದುಕಿದ್ದಾಗ ಉತ್ಸವ ಆಚರಣೆ ಎಷ್ಟು ಸರಿ?: ಸಿದ್ದರಾಮೋತ್ಸವದ ಬಗ್ಗೆ ಸಚಿವ ಪಾಟೀಲ ಟಾಂಗ್‌

ಪರ್ಯಾಯ ಶಕ್ತಿ ಮುಗಿಸಲು ಹುನ್ನಾರ:

ದೇಶದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಕಮ್ಯುನಿಸ್ಟರು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್‌ ಮಾತ್ರ ಬಿಜೆಪಿಗೆ ಪರ್ಯಾಯ ಶಕ್ತಿಯಾಗಿದೆ. ಆದ್ದರಿಂದ ಕಾಂಗ್ರೆಸ್‌ ಮುಗಿಸಲು, ನಿರ್ನಾಮ ಮಾಡಲು ಹುನ್ನಾರ ನಡೆಯುತ್ತಿದೆ. ಆದ್ದರಿಂದಲೇ ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡುವುದಾಗಿ ನರೇಂದ್ರ ಮೋದಿ, ಅಮಿತ್‌ ಶಾ ಹೇಳಿಕೆ ನೀಡಿದ್ದಾರೆ. ಆದರೆ ಇದು ಸಾಧ್ಯವಾಗುವುದಿಲ್ಲ ಎಂದು ತಿರುಗೇಟು ನಿಡಿದರು.
ಸೋನಿಯಾ ಗಾಂಧಿ ಮತ್ತು ಲಕ್ಷಾಂತರ ಕಾರ್ಯಕರ್ತರ ಆತ್ಮ ಸ್ಥೈರ್ಯ ಕುಗ್ಗಿಸಲು ಕೇಂದ್ರ ಸರ್ಕಾರ ಇ.ಡಿ.ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿಲ್ಲ. ಎಫ್‌ಐಆರ್‌ ದಾಖಲಾಗಿಲ್ಲ. ಕ್ರಿಮಿನಲ್‌ ಅಪರಾಧವಾಗಿಲ್ಲ. ಹೀಗಿರುವಾಗ ಸಮನ್ಸ್‌ ನೀಡುವಂತಿಲ್ಲ. ಆದರೂ ಸಮನ್ಸ್‌ ನೀಡಲಾಗಿದೆ. ವಕೀಲ ವೃಂದ ಇದನ್ನು ಜನರಿಗೆ ತಿಳಿಸಿಕೊಡಬೇಕು. ಕೇಂದ್ರದ ಬಂಡವಾಳ ಬಯಲು ಮಾಡಬೇಕು ಎಂದು ಕರೆ ನೀಡಿದರು.