Asianet Suvarna News Asianet Suvarna News

35000 ಕೋಟಿ ಭ್ರಷ್ಟಾಚಾರ ಅಲ್ಲ ‘ತಾಳೆಯಾಗದ ಲೆಕ್ಕ’: ಸಿದ್ದರಾಮಯ್ಯ

‘ಸಚಿವ ಡಾ.ಕೆ.ಸುಧಾಕರ್‌ ನಮ್ಮ ಸರ್ಕಾರದ ಮೇಲೆ ಮಾಡಿರುವ ಆರೋಪಕ್ಕೂ ಸಿಎಜಿ ವರದಿಗೂ ಸಂಬಂಧವೇ ಇಲ್ಲ. 35 ಸಾವಿರ ಕೋಟಿ ರು. ಭ್ರಷ್ಟಾಚಾರ ಆರೋಪ ಶುದ್ಧ ಸುಳ್ಳು. ಸಿಎಜಿ ವರದಿಯಲ್ಲಿ ಎಲ್ಲೂ ಅವ್ಯವಹಾರ ಆಗಿದೆ ಎಂದು ಹೇಳಿಲ್ಲ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Former CM Siddaramaiah Slams To Minister Dr K Sudhakar Over Corruption Allegation gvd
Author
First Published Jan 26, 2023, 3:20 AM IST

ಬೆಂಗಳೂರು (ಜ.26): ‘ಸಚಿವ ಡಾ.ಕೆ.ಸುಧಾಕರ್‌ ನಮ್ಮ ಸರ್ಕಾರದ ಮೇಲೆ ಮಾಡಿರುವ ಆರೋಪಕ್ಕೂ ಸಿಎಜಿ ವರದಿಗೂ ಸಂಬಂಧವೇ ಇಲ್ಲ. 35 ಸಾವಿರ ಕೋಟಿ ರು. ಭ್ರಷ್ಟಾಚಾರ ಆರೋಪ ಶುದ್ಧ ಸುಳ್ಳು. ಸಿಎಜಿ ವರದಿಯಲ್ಲಿ ಎಲ್ಲೂ ಅವ್ಯವಹಾರ ಆಗಿದೆ ಎಂದು ಹೇಳಿಲ್ಲ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 35 ಸಾವಿರ ಕೋಟಿ ರು. ಭ್ರಷ್ಟಾಚಾರ ಆಗಿದೆ ಎಂಬ ಸುಧಾಕರ್‌ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಪ್ರದರ್ಶಿಸಿದ ಅವರು, ‘ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು (ಸಿಎಜಿ) ಪ್ರತಿ ವರ್ಷ ರಾಜ್ಯದ ಹಣಕಾಸು ಸ್ಥಿತಿಗತಿಯ ಬಗ್ಗೆ ವರದಿಯನ್ನು ಸಿದ್ಧಪಡಿಸಿ ಕೊಡುತ್ತಾರೆ.

2016-17ನೇ ಸಾಲಿನ ವರದಿಯನ್ನು 2018ರಲ್ಲಿ ನೀಡಿದ್ದಾರೆ. ಅದರಲ್ಲಿ 2016-17ನೇ ಸಾಲಿನ ಆರ್ಥಿಕ ವರ್ಷದ ಆಯವ್ಯಯದಲ್ಲಿ 1,86,052 ಕೋಟಿ ರು.ಗಳಲ್ಲಿ ಶೇ.19 (35 ಸಾವಿರ ಕೋಟಿ ರು.) ತಾಳೆಯಾಗುತ್ತಿಲ್ಲ (ನಾನ್‌ ರಿಕನ್ಸಲೇಷನ್‌) ಎಂದು ಉಲ್ಲೇಖಿಸಲಾಗಿದೆ. ಅನುದಾನ ಮತ್ತು ಖರ್ಚು ತಾಳೆಯಾಗುತ್ತಿದೆಯೇ ಅಥವಾ ಇಲ್ಲವೇ ಎಂದು ನೋಡುವುದು ಲೆಕ್ಕಪರಿಶೋಧಕರ ವರದಿ. ನಾನ್‌ ರಿಕನ್ಸಲೇಷನ್‌ ಎಂಬುದನ್ನು ಭ್ರಷ್ಟಾಚಾರ ಎಂದು ಯಾವ ಅರ್ಥದಲ್ಲಿ ಹೇಳುತ್ತಾರೆ? ಓದಿಕೊಂಡವರು, ಸಾಮಾನ್ಯ ಜ್ಞಾನ ಇರುವವರು ಈ ರೀತಿ ಮಾತನಾಡುವುದಿಲ್ಲ ಎಂದು ಹೇಳಿದರು.

ಬೊಮ್ಮಾಯಿ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ, ಬಿಜೆಪಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲ್ಲ: ರಣದೀಪ್ ಸುರ್ಜೇವಾಲ

2008-09ರಲ್ಲಿ ಶೇ.49 ಭ್ರಷ್ಟಾಚಾರ ಆಗಿತ್ತಾ?: 2008-09ರಲ್ಲಿ ತಾಳೆಯಾಗದ ಅನುದಾನ ಶೇ.49ರಷ್ಟುಇತ್ತು. ಆಗ ಇವರದ್ದೇ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು. ನಮ್ಮ ಅವಧಿಯಲ್ಲಿ (2015-16) ಶೇ.16ರಷ್ಟುಮಾತ್ರ ತಾಳೆಯಾಗದ ಅನುದಾನ ಆಗಿತ್ತು. ಹಾಗಾದರೆ, ಬಿಜೆಪಿಯ ಅವಧಿಯಲ್ಲಿ ಶೇ.49 ರಷ್ಟುಭ್ರಷ್ಟಾಚಾರ ಆಗಿತ್ತು ಎಂದು ಒಪ್ಪಿಕೊಳ್ಳುತ್ತಾರಾ? ಇದು ಎಂತಹ ಸಾಮಾನ್ಯರಿಗೂ ಅರ್ಥವಾಗುವ ವಿಚಾರವಲ್ಲವೇ? ನಮ್ಮ ಅವಧಿಯಲ್ಲಿ ಆಗಿರುವ ಸಾಧನೆಯನ್ನು ಮೆಚ್ಚುಕೊಳ್ಳುವುದು ಬಿಟ್ಟು ಸುಳ್ಳು ಹಬ್ಬಿಸುವುದು ಸರಿಯೇ ಎಂದು ಕಿಡಿ ಕಾರಿದರು.

ಕೇಂದ್ರವೇ ಅವ್ಯವಹಾರ ಆಗಿಲ್ಲ ಎಂದಿದೆ: ಸುಧಾಕರ್‌ ಅವರು ಬೆಂಗಳೂರಿನ ವೈಟ್‌ ಟಾಪಿಂಗ್‌ ಯೋಜನೆಯಲ್ಲಿ ಅವ್ಯವಹಾರ ನಡೆದಿತ್ತು ಎಂದಿದ್ದಾರೆ. 2019ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕ್ಯಾಪ್ಟನ್‌ ದೊಡ್ಡಿಹಾಳ್‌ ಎಂಬ ನಿವೃತ್ತ ಮುಖ್ಯ ಎಂಜಿನಿಯರ್‌ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಕ್ವಾಲಿಟಿ ಮಾನಿಟರ್‌ ಸೆಲ್‌ ರಚಿಸಿದ್ದರು. 4 ಜನರ ಈ ತಂಡವು ವೈಟ್‌ ಟಾಪಿಂಗ್‌ ಹಾಗೂ ಟೆಂಡರ್‌ ಶ್ಯೂರ್‌ ಕಾಮಗಾರಿಗಳ ಬಗ್ಗೆ ವರದಿ ಸಲ್ಲಿಸಿದ್ದು, ಯಾವುದೇ ಅವ್ಯವಹಾರ ಆಗಿಲ್ಲ ಎಂದು ಹೇಳಿದೆ. ಇದನ್ನು ಯಡಿಯೂರಪ್ಪ ಅವರ ಸರ್ಕಾರವೂ ಅಂಗೀಕರಿಸಿದೆ. ಇಷ್ಟಿದ್ದರೂ ಕೇವಲ ರಾಜಕೀಯಕ್ಕಾಗಿ ಆರೋಪ ಮಾಡಿದರೆ ಏನರ್ಥ? ಎಂದು ಪ್ರಶ್ನಿಸಿದರು.

‘ಕೋವಿಡ್‌ ಅವಧಿಯಲ್ಲಿ 3000 ಕೋಟಿ ಭ್ರಷ್ಟಾಚಾರ’: 2020-21ರಲ್ಲಿ ಕೊರೋನಾ ಸಂದರ್ಭದಲ್ಲಿ 3 ಸಾವಿರ ಕೋಟಿ ರು. ಭ್ರಷ್ಟಾಚಾರ ಆಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾದ ಎಚ್‌.ಕೆ. ಪಾಟಿಲ್‌ ಅವರು ವರದಿ ಕೊಟ್ಟಿದ್ದಾರೆ. ಈ ಬಗ್ಗೆ ತನಿಖೆ ಮಾಡಲು ಸಿಎಜಿಗೆ (ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು) ಸರ್ಕಾರ ಅನುಮತಿ ನೀಡಲಿಲ್ಲ. ಇದು ಭ್ರಷ್ಟಾಚಾರ ಎಂದು ಸಿದ್ದರಾಮಯ್ಯ ಆರೋಪಿಸಿದರು.  ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, 3 ಸಾವಿರ ಕೋಟಿ ರು. ಭ್ರಷ್ಟಾಚಾರದ ಬಗ್ಗೆ ಎಚ್‌.ಕೆ. ಪಾಟಿಲ್‌ ಸಮಿತಿ ವರದಿ ನೀಡಿದರೂ ಸ್ಪೀಕರ್‌ ಮಹಾಶಯರು ಸದನದಲ್ಲಿ ಮಂಡಿಸಲು ಅವಕಾಶ ನೀಡಲಿಲ್ಲ. 

ಅಲ್ಲದೆ ಕೊರೋನಾ ಅವಧಿಯ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಲೆಕ್ಕಪತ್ರ ಸಮಿತಿಯು ಎಜಿ ಅವರಿಗೆ ಪತ್ರ ಬರೆದಿತ್ತು. ಈ ವೇಳೆ ಎಜಿಯವರು ಆಡಳಿತ ಇಲಾಖೆ ಪತ್ರ ಬರೆಯಬೇಕು ಎಂದಿದ್ದರು. ಆದರೆ ಆಡಳಿತ ಇಲಾಖೆಯಾದ ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಲೆಕ್ಕ ಪರಿಶೋಧನೆ ನಡೆಸಲು ಎಜಿ ಅವರಿಗೆ ಅನುಮತಿ ಕೊಡಲೇ ಇಲ್ಲ.  ನಿಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿಲ್ಲ ಎಂದಾದರೆ ತನಿಖೆಗೆ ಒಪ್ಪಿಗೆ ಕೊಡಬೇಕಾಗಿತ್ತಲ್ಲ ಎಂದು ಈ ಸಂದರ್ಭದಲ್ಲಿ ಅವರು ಸುಧಾಕರ್‌ ಅವರನ್ನು ಪ್ರಶ್ನಿಸಿದರು. 

ದತ್ತಪೀಠದ ಬಗ್ಗೆ ವಿವಾದಾತ್ಮಕ ಹೇಳಿಕೆ: ಕೊನೆಗೂ ಕ್ಷಮೆಯಾಚಿಸಿದ ಶಾಸಕ ಟಿ.ಡಿ.ರಾಜೇಗೌಡ

ಆಪರೇಷನ್‌ ಕಮಲಕ್ಕೆ ಜೆಡಿಎಸ್‌ ಕಾರಣ: ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಆಪರೇಷನ್‌ ಕಮಲಕ್ಕೆ ಜೆಡಿಎಸ್‌ ಪಕ್ಷ ಕಾರಣ. ಜೆಡಿಎಸ್‌ ಬಿಜೆಪಿ ಜತೆ ಸಮ್ಮಿಶ್ರ ಸರ್ಕಾರ ರಚಿಸಿದ್ದಾಗ ಒಪ್ಪಂದದಂತೆ ಅಧಿಕಾರ ಕೊಟ್ಟಿದ್ದರೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಇದೀಗ ಆಪರೇಷನ್‌ ಕಮಲ ಮಾಡಲೂ ಜೆಡಿಎಸ್‌ ಕಾರಣ. ರಾಜ್ಯದಲ್ಲಿ ಆಪರೇಷನ್‌ ಕಮಲ ಸಂಸ್ಕೃತಿ ತಂದಿದ್ದೇ ಬಿಜೆಪಿ. ಬಿಜೆಪಿಗೆ ಈವರೆಗೆ ಎಂದೂ ಬಹುಮತ ಬಂದಿಲ್ಲ’ ಎಂದು ಹೇಳಿದರು.

Follow Us:
Download App:
  • android
  • ios