ಕೇಂದ್ರ ಹಾಗೂ ರಾಜ್ಯ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ದೇಶದ್ರೋಹಿ ಎನ್ನುತ್ತಾರೆ. ಪ್ರಧಾನಿ ಮೋದಿ, ಅಮಿತ್‌ ಶಾ ಬಗ್ಗೆ ಮಾತನಾಡುವಂತಿಲ್ಲ. ಅವರ ವಿರುದ್ಧ ಮಾತನಾಡಿದರೆ ಪ್ರಕರಣ ದಾಖಲಿಸುತ್ತಾರೆ.

ಬಳ್ಳಾರಿ (ಅ.12): ಕೇಂದ್ರ ಹಾಗೂ ರಾಜ್ಯ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ದೇಶದ್ರೋಹಿ ಎನ್ನುತ್ತಾರೆ. ಪ್ರಧಾನಿ ಮೋದಿ, ಅಮಿತ್‌ ಶಾ ಬಗ್ಗೆ ಮಾತನಾಡುವಂತಿಲ್ಲ. ಅವರ ವಿರುದ್ಧ ಮಾತನಾಡಿದರೆ ಪ್ರಕರಣ ದಾಖಲಿಸುತ್ತಾರೆ. ಅವರು ಮಾಡುತ್ತಿರುವ ಅನೀತಿಗಳನ್ನು ಕೇಳಿದರೆ ಮುಗಿ ಬೀಳುತ್ತಾರೆ. ಈ ಹಿಂದೆ ಎಂದೂ ಸಹ ದೇಶದಲ್ಲಿ ಇಂತಹ ಭಯದ ವಾತಾವರಣ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಭಾರತ ಐಕ್ಯತಾ ಯಾತ್ರೆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಜರುಗಿದ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದರು. 40 ಪರ್ಸೆಂಟ್‌ ಕಮೀಷನ್‌ ಸರ್ಕಾರ ಎಂದು ಮೊದಲು ನಾವು ಹೇಳಲಿಲ್ಲ. ಗುತ್ತಿಗೆದಾರರ ಸಂಘವೇ ಹೇಳಿದೆ. ಅದನ್ನೇ ನಾವು ಹೇಳಿದ್ದೇವಷ್ಟೇ. ಆದರೂ ನಮ್ಮ ವಿರುದ್ಧ ಹರಿಹಾಯುತ್ತಾರೆ. ಹಾಗಾದರೆ ಇವರು ಮಾಡುವ ಅನೀತಿಗಳನ್ನು ಯಾರೂ ಪ್ರಶ್ನಿಸಬಾರದೇ? ಇವರೆಷ್ಟೇ ಭ್ರಷ್ಟಾಚಾರ ಮಾಡಿದರೂ ಸುಮ್ಮನಿರಬೇಕೇ? ಎಂದು ಪ್ರಶ್ನಿಸಿದರಲ್ಲದೆ, ಸಂವಿಧಾನಾತ್ಮಕವಾಗಿ ನೀಡಿದ ಹಕ್ಕನ್ನು ಕಸಿದುಕೊಳ್ಳಲು ಇವರಾರ‍ಯರು? ಎಂದು ಕೇಳಿದರು.

ಮೀಸಲಾತಿ ಹೆಚ್ಚಳ ಐತಿಹಾಸಿಕ ನಿರ್ಣಯ: ಸಚಿವ ಆನಂದ್‌ ಸಿಂಗ್‌

ಕೇಂದ್ರ, ರಾಜ್ಯದಲ್ಲಿ ಜನಪರವಾದ ಯಾವುದೇ ಯೋಜನೆಗಳಿಲ್ಲ. ಎರಡು ವರ್ಷಗಳಲ್ಲಿ ಬಡವರಿಗೆ ಒಂದೇ ಒಂದು ಮನೆ ನೀಡಿಲ್ಲ. ಬರೀ ಸುಳ್ಳು ಹೇಳಿಕೊಂಡು ಹೊರಟಿದ್ದಾರೆ. ಜಾತಿ, ಧರ್ಮಗಳ ನಡುವೆ ಜಗಳ ಹಚ್ಚಿದ್ದಾರೆ. ಕೋಮು ಸೌಹಾರ್ದತೆ ಹಾಳುಗೆಡವಿದ್ದಾರೆ. ಮನುಷ್ಯ ಸಂಬಂಧಗಳನ್ನು ನಾಶ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ನಮ್ಮ ಅಧಿಕಾರ ಅವಧಿಯಲ್ಲಿ 8 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು. ಆದರೆ, ಈ ಸರ್ಕಾರವೇಕೆ ನಾವು ಒತ್ತಾಯಿಸುವ ಪ್ರಕರಣಗಳನ್ನು ಸಿಬಿಐಗೆ ನೀಡಲು ಹಿಂದೇಟು ಹಾಕುತ್ತಿದೆ? ಇವರನ್ನು ಮಾನಗೆಟ್ಟಜನ ಎನ್ನದೆ ಮತ್ತೇನನ್ನಬೇಕು ಎಂದು ಪ್ರಶ್ನಿಸಿದರು.

ದೇಶ ಜೋಡಿಸುವ ಕೆಲಸವಾಗುತ್ತಿದೆ: ಬಿಜೆಪಿ ಸರ್ಕಾರ ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಕೆಲಸ ಮಾಡಿದೆ. ಜನರ ನಡುವೆ ವಿಶ್ವಾಸ ಮರೆಯಾಗಿದೆ. ಹೀಗಾಗಿ ರಾಹುಲ್‌ ಗಾಂಧಿ ಅವರು ದೇಶದಾದ್ಯಂತ 3750 ಕಿ.ಮೀಟರ್‌ ಪಾದಯಾತ್ರೆ ಮಾಡುತ್ತಿದ್ದು ಈ ಮೂಲಕ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಳ್ಳಾರಿಯಲ್ಲಿ ಮಾತ್ರ ರಾಹುಲ್‌ ಗಾಂಧಿ ಬಹಿರಂಗ ಸಭೆ ನಡೆಯುತ್ತಿದ್ದು, 5ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಬೇಕು. ಬಳ್ಳಾರಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಈ ಮೊದಲಿನಿಂದಲೂ ಇಲ್ಲಿನ ಜನ ಕಾಂಗ್ರೆಸ್‌ನ್ನು ಬೆಂಬಲಿಸುತ್ತಾ ಬಂದಿದ್ದಾರೆ ಎಂದು ಸ್ಮರಿಸಿದ ಸಿದ್ಧರಾಮಯ್ಯ, ಎಲ್ಲ ಶಾಸಕರು, ಮಾಜಿ ಶಾಸಕರು ಹಾಗೂ ಕಾರ್ಯಕರ್ತರು ಒಗ್ಗೂಡಿ ಪಾದಯಾತ್ರೆಯನ್ನು ಅಭೂತಪೂರ್ವ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. 

ಮಾಜಿ ಸಚಿವ ಎಂ.ಬಿ. ಪಾಟೀಲ್‌,ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಎಐಸಿಸಿ ಕಾರ್ಯದರ್ಶಿ ಶ್ರೀಧರಬಾಬು, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಶಾಸಕ ಬಿ.ನಾಗೇಂದ್ರ, ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಮಾತನಾಡಿದರು. ಮಾಜಿ ಸಚಿವ ಸಂತೋಷ್‌ ಲಾಡ್‌, ದಿವಾಕರಬಾಬು, ಮಾಜಿ ಶಾಸಕ ಅನಿಲ್‌ಲಾಡ್‌, ಶಾಸಕ ತುಕಾರಾಂ, ಗಣೇಶ್‌, ಭೀಮಾನಾಯ್ಕ, ಮೇಯರ್‌ ರಾಜೇಶ್ವರಿ ಸೇರಿದಂತೆ ಪಕ್ಷದ ಮುಖಂಡರು ಸಮಾರಂಭದಲ್ಲಿ ಹಾಜರಿದ್ದರು. ಪಕ್ಷದ ಜಿಲ್ಲಾಧ್ಯಕ್ಷ ಮಹ್ಮದ್‌ ರಫೀಕ್‌ ಹಾಗೂ ನಿರೂಪಕ ಎಂ.ವಿನೋದ್‌ ಕುಮಾರ್‌ ಕಾರ್ಯಕ್ರಮ ನಿರ್ವಹಿಸಿದರು.

ಗೋಡ್ಸೆ, ಸಾವರ್ಕರ್‌ ಪೂಜೆ ಮಾಡುತ್ತಿರುವ ಬಿಜೆಪಿ: ಮಹಾತ್ಮ ಗಾಂಧೀಜಿಯನ್ನು ಕೊಂದ ಕೊಲೆಗಡುಕ ಗೋಡ್ಸೆಯನ್ನು ಹಾಗೂ ಹಿಂದು-ಮುಸ್ಲಿಂ ಈ ದೇಶದಲ್ಲಿ ಒಟ್ಟಿಗೆ ಇರಲು ಸಾಧ್ಯವಿಲ್ಲ. ಈ ದೇಶ ಪ್ರತ್ಯೇಕ ಆಗಬೇಕು ಎಂದು ಒತ್ತಾಯಿಸಿದ್ದ ಸಾವರ್ಕರ್‌ನನ್ನು ಈ ಬಿಜೆಪಿಯವರು ಪೂಜೆ ಮಾಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಟೀಕಿಸಿದರು. ಇತಿಹಾಸವನ್ನು ತಿರುಚುವುದೇ ಬಿಜೆಪಿ-ಆರ್‌ಎಸ್‌ಎಸ್‌ನವರ ಕೆಲಸ. ಇವರ ಮಾತನ್ನು ಯಾರೂ ನಂಬಬೇಡಿ. ಇವರು ಬರೀ ಸುಳ್ಳುಗಾರರು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಪ್ರತಿ ಚುನಾವಣೆಯಲ್ಲಿ ಕೇಂದ್ರ ಬಿಂದುವಾಗೋ ಬಳ್ಳಾರಿ: ರಾಜಕಾರಣಿಗಳಿಗೆ ಈ ಜಿಲ್ಲೆಯ ಮೇಲೆ ವಿಶೇಷ ಪ್ರೀತಿ!

ಸಿದ್ಧರಾಮಯ್ಯ ಆಗಮನ; ಮುಗಿಬಿದ್ದ ಕಾರ್ಯಕರ್ತರು: ಸಿದ್ಧತಾ ಸಭೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗಮಿಸುತ್ತಿದ್ದಂತೆಯೇ ನೂರಾರು ಕಾರ್ಯಕರ್ತರು ಸಿದ್ಧರಾಮಯ್ಯರನ್ನು ವೀಕ್ಷಿಸಲು ಮುಗಿ ಬಿದ್ದರು.ಇದರಿಂದ ಕೆಲಹೊತ್ತು ಗೊಂದಲ ಸೃಷ್ಟಿಯಾಯಿತು. ಬಳಿಕ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಆಗಮಿಸಿ ತಿಳಿಗೊಳಿಸಿದರು. ಇದೇ ವೇಳೆ ಸಿದ್ಧರಾಮಯ್ಯ ಭಾಷಣ ನಡುವೆ ಶಿಳ್ಳೆ ಹೊಡೆದ ಯುವಕರಿಗೆ ಗದರಿಕೊಂಡ ಸಿದ್ಧರಾಮಯ್ಯ,‘ ಏ ಗಲಾಟೆ ಮಾಡಬಾರದು. ಸುಮ್ಮನೆ ಇರಿ.ಇಲ್ಲದಿದ್ದರೆ ಹೊರಗಡೆ ಹೋಗಿ’ಎಂದರು.