ಸಿ.ಟಿ.ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ?: ಸಿದ್ದರಾಮಯ್ಯ ಗರಂ
ನಾನು ಹಿಂದು ಅಲ್ಲವಾ?, ನಮ್ಮವ್ವ- ನಮ್ಮಪ್ಪ ಹಿಂದುಗಳು ಅಲ್ವಾ? ಸಿ.ಟಿ.ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ವಿಜಯಪುರ (ಫೆ.12): ನಾನು ಹಿಂದು ಅಲ್ಲವಾ?, ನಮ್ಮವ್ವ- ನಮ್ಮಪ್ಪ ಹಿಂದುಗಳು ಅಲ್ವಾ? ಸಿ.ಟಿ.ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಿ.ಟಿ.ರವಿ ಹಿಂದುಗಳ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಟಾಂಗ್ ನೀಡಿ, ಹಿಂದುತ್ವದ ಬಗ್ಗೆ ಗೊತ್ತಿದ್ದರೆ ತಿಳಿಸಿ. ಗೊತ್ತಿಲ್ಲದಿದ್ದರೆ ಕೇಳುವುದು ಬೇಡ ಎಂದು ಪತ್ರಕರ್ತರ ಮೇಲೆಯೇ ಹರಿಹಾಯ್ದರು. ನಮ್ಮ ಸರ್ಕಾರದಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೇವು. ಕೇವಲ ಐದರಷ್ಟು ಮುಸ್ಲಿಂರಿಗೆ ಕೊಟ್ಟಿದ್ದೇವು.
ಶೇ.95ರಷ್ಟು ಹಿಂದುಗಳಿಗೆ ಕೊಡಲಾಗಿತ್ತು. ಬಿಜೆಪಿ ಸರ್ಕಾರ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ ಎಂದು ತಿಳಿಸಿದರು. ಸಿದ್ದರಾಮಯ್ಯ ಆರೋಪಗಳು ಎಲ್ಲವೂ ಸುಳ್ಳು ಎಂದು ಬಿಜೆಪಿಯವರು ಹೇಳುವುದು ಎಷ್ಟುಸರಿ. ಈಗ ಇರುವ ಪಡಿತರ 7 ಕೆಜಿ ಅಕ್ಕಿ ವಿತರಣೆಯನ್ನು 5 ಕೆಜಿ ಅಕ್ಕಿಗೆ ಇಳಿಸಿದ್ದು ಸುಳ್ಳಾ? ಅಕ್ಕಿ ಕೇಂದ್ರ ಸರ್ಕಾರದ್ದು, ಚೀಲ ಮಾತ್ರ ಕಾಂಗ್ರೆಸ್ಸಿನದ್ದು ಎನ್ನುವ ಬಿಜೆಪಿಗರು ತಮ್ಮದೇ ಪಕ್ಷದ ಆಡಳಿತವಿರುವ ಉತ್ತರಪ್ರದೇಶ, ಗುಜರಾತ, ಆಸ್ಸಾಂನಲ್ಲಿ ಏಕೆ ಕೊಡುತ್ತಿಲ್ಲ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಪಡಿತರ ಅಕ್ಕಿ ನೀಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯಪಾಲರಿಂದ ಸುಳ್ಳು ಹೇಳಿಸಿದ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ ಆರೋಪ
ರೌಡಿಶೀಟರ್ ಕೇಸ್ ಹಿಂಪಡೆಯಲಿ: ಬೆಳಗಾವಿ ಕನ್ನಡ ಹೋರಾಟಗಾರರ ವಿರುದ್ಧ ರೌಡಿಶೀಟರ್ ಕೇಸ್ ಹಾಕಿದ್ದರೆ ಕೂಡಲೇ ಹಿಂಪಡೆಯಬೇಕು ಎಂದು ಮಾಜಿ ಮುಕ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದರು. ಕನ್ನಡಪರ ಹೋರಾಟಗಾರರ ವಿರುದ್ಧ ಕೇಸ್ ಹಾಕಬಾರದು. ಒಂದೊಮ್ಮೆ ರೌಡಿಶೀಟರ್ ಕೇಸ್ ಹಾಕಿದ್ದರೇ ತಕ್ಷಣ ವಾಪಸ್ ಪಡೆಯಬೇಕು. ರೌಡಿಶೀಟರ್ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕನ್ನಡ ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡಿದರೆ ಅವರ ಮೇಲೆ ಕೇಸ್ ಹಾಕಬಾರದು. ನಮ್ಮ ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡುವುದು ನಮ್ಮ ಹಕ್ಕು. ಅದನ್ನು ಉಳಿಸಬೇಕಾದದ್ದು ಸರ್ಕಾರ ಆದ್ಯ ಕರ್ತವ್ಯವೂ ಆಗಿದೆ ಎಂದರು. ಮಹಾರಾಷ್ಟ್ರದವರು ನಮ್ಮ ಭಾರತೀಯರೆ. ಹಾಗೆಂದು ಏನು ಮಾಡಿದರೂ ನಡೆಯುವುದಿಲ್ಲ. ಕಾಲು ಕೆದರಿ ಜಗಳಕ್ಕೆ ಬರುತ್ತಿದ್ದಾರೆ. ಮಹಾಜನ ವರದಿಯಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ತೀರ್ಮಾನವಾಗಿದೆ. ಮತ್ತೆ ಮರಾಠಿಗರು ಕಾಲು ಕೆದರಿ ಜಗಳ ಬರುವುದು ಸರಿಯಲ್ಲ ಎಂದು ತಿಳಿಸಿದರು.
ನೀವು ಮೊದಲ ಹೆಜ್ಜೆ ಇಟ್ಟಿದ್ದರೆ, ಶೆಡ್ಯೂಲ್ 9ಕ್ಕೆ ಸೇರಿರುತ್ತಿತ್ತು: ಸಿದ್ದುಗೆ ಬೊಮ್ಮಾಯಿ ತಿರುಗೇಟು
ಸಿದ್ದರಾಮಯ್ಯಗೆ ಶಾಲಾ ಬಾಲಕಿಯಿಂದ ಹಣ ದೇಣಿಗೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಂದಗಿಯಲ್ಲಿ ಶಾಲಾ ಬಾಲಕಿಯೊಬ್ಬಳು ತಾನು ಕೂಡಿಟ್ಟ.5 ಸಾವಿರ ನಗದು ಹಣವನ್ನು ದೇಣಿಗೆ ನೀಡಿದ್ದಾಳೆ. ಸಿಂದಗಿಯಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರಿಗೆ 11 ವರ್ಷದ ಬಾಲಕಿ ಜಿಯಾ ರಫೀಕ್ ಮನೂರ ಎಂಬುವಳು ಸಿದ್ದರಾಮಯ್ಯನವರು ಸಿಎಂ ಆಗಲಿ ಎಂದು ಚುನಾವಣೆಗೆ 5 ಸಾವಿರ ನಗದು ದೇಣಿಗೆ ನೀಡಿದಳು. ಬಾಲಕಿ ನೀಡಿದ ಹಣವನ್ನು ಸಿದ್ದರಾಮಯ್ಯ ಅವರು ವಾಪಸ್ ಬಾಲಕಿಗೆ ನೀಡಿ, ನಿನ್ನ ವಿದ್ಯಾಭ್ಯಾಸಕ್ಕೆ ಈ ಹಣ ಉಪಯೋಗಿಸಿಕೊಳ್ಳಲು ಸಲಹೆ ನೀಡಿದರು.