ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?: ಮಾಡಾಳು ಪ್ರಕರಣದಲ್ಲಿ ಸರ್ಕಾರದ ವಿರುದ್ಧ ಸಿದ್ದು ವಾಗ್ದಾಳಿ
ಬೆಂಗಳೂರಿನಲ್ಲಿ 40 ಲಕ್ಷ ಲಂಚ ಪಡೆಯುವಾಗ ಬಿಡಬ್ಲ್ಯುಎಸ್‌ಎಸ್ ಮುಖ್ಯಲೆಕ್ಕ ಪರಿಶೋಧಕ, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಎಂ.ವಿ.ಪ್ರಶಾಂತ್ ಮೇಲಿನ ಲೋಕಾಯುಕ್ತ ದಾಳಿ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದು, ಬಿಜೆಪಿ 40% ಕಮಿಷನ್ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಬೆಂಗಳೂರು (ಮಾ.04): ಬೆಂಗಳೂರಿನಲ್ಲಿ 40 ಲಕ್ಷ ಲಂಚ ಪಡೆಯುವಾಗ ಬಿಡಬ್ಲ್ಯುಎಸ್‌ಎಸ್ ಮುಖ್ಯಲೆಕ್ಕ ಪರಿಶೋಧಕ, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಎಂ.ವಿ.ಪ್ರಶಾಂತ್ ಮೇಲಿನ ಲೋಕಾಯುಕ್ತ ದಾಳಿ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದು, ಬಿಜೆಪಿ 40% ಕಮಿಷನ್ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅಲ್ಲದೆ, ಭ್ರಷ್ಟಾಚಾರಕ್ಕೆ ಅವಕಾಶ ನೀಡಲ್ಲ ಎನ್ನುವ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬೊಮ್ಮಾಯಿಯವರು ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಆರೋಪಕ್ಕೆ ದಾಖಲಾತಿ ಕೇಳಿದ್ದಾರೆ.
ಈಗ ವಿರೂಪಾಕ್ಷಪ್ಪ ಪುತ್ರನ ಬಂಧನವಾಗಿದೆ, ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಎಂದು ಪ್ರಶ್ನಿಸಿದರು. ಈ ಹಿಂದೆ 40% ಕಮಿಷನ್ ಆರೋಪ ಬಂದಾಗ ಮೋದಿ ಮಾತಾಡಲಿಲ್ಲ. ಈಗಲೂ ಮೌನವಾಗಿದ್ದಾರೆ. ಹೀಗಾಗಿ, ಪ್ರಧಾನಿ ಕೂಡ ರಾಜ್ಯ ಸರ್ಕಾರದ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ ಎನ್ನುವ ಸಂದೇಶ ಜನರಿಗೆ ರವಾನೆಯಾಗಿದೆ ಎಂದು ಟೀಕಿಸಿದರು. ಇದೇ ವೇಳೆ, ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಭ್ರಷ್ಟಾಚಾರದ ಬಗ್ಗೆ ಸಾಕ್ಷ್ಯ ಕೊಡಿ ಎಂದು ಮುಖ್ಯಮಂತ್ರಿ ಕೇಳುತ್ತಿದ್ದರು. ಈ ಲೋಕಾಯುಕ್ತ ದಾಳಿಗಿಂತ ಸಾಕ್ಷಿ ಬೇಕೇ? ಈಗಲಾದರೂ ಸಿಎಂ ರಾಜಿನಾಮೆ ನೀಡಲಿ ಎಂದು ಹೇಳಿದರು.
ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ
ಉಡುಪಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಬಿಜೆಪಿ ಶಾಸಕ ವಿರೂಪಾಕ್ಷಪ್ಪರನ್ನು ಬಂಧಿಸಬೇಕು. ಬೊಮ್ಮಾಯಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಮೋದಿ, ಜೆಪಿ ನಡ್ದಾ, ಅಮಿತ್ ಶಾ ಈಗ ಎಲ್ಲಿದ್ದಾರೆ?, ಇಡಿ, ಸಿಬಿಐ ಯಾವಾಗ ಕರ್ನಾಟಕಕ್ಕೆ ಬರುತ್ತದೆ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇದೇ ವೇಳೆ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಕೂಡ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಇವರು ನಾಯಕರಾ? ನಾಲಾಯಕರಾ ಜನರೇ ತೀರ್ಮಾನ ಮಾಡಬೇಕು: ಸಿದ್ದರಾಮಯ್ಯ
ಇಂದು ಕಾಂಗ್ರೆಸ್‌ನಿಂದ ಪ್ರತಿಭಟನೆ: ಈ ಮಧ್ಯೆ, ಪ್ರಶಾಂತ್ ಮಾಡಾಳ್ ಅವರ ಬೆಂಗಳೂರಿನ ನಿವಾಸದ ಎದುರು ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರಶಾಂತ್ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಪೋಸ್ಟರ್ ಪ್ರದರ್ಶಿಸುವ ಮೂಲಕ 40% ಸರ್ಕಾರ ಎಂದು ಘೋಷಣೆ ಕೂಗಿದರು. ಇದೇ ವೇಳೆ, ಶಿವಮೊಗ್ಗ, ಹುಬ್ಬಳ್ಳಿ, ಮೈಸೂರು ಸೇರಿದಂತೆ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು. ದಾಳಿ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಶನಿವಾರ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್ ನಿರ್ಧರಿಸಿದೆ. ರಣದೀಪ್‌ಸಿಂಗ್ ಸುರ್ಜೆವಾಲಾ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಶನಿವಾರ ಬೆಳಗ್ಗೆ 9 ಗಂಟೆಗೆ ರೇಸ್‌ಕೋರ್ಸ್ ಬಳಿಯ ಸಿಎಂ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ.