ಹಿಂಬಾಗಿಲಿನಿಂದ ಬಂದವರನ್ನು ಮುಂಬಾಗಿಲಿನಿಂದ ಓಡಿಸಿ: ಸಿದ್ದರಾಮಯ್ಯ
ಬಿಜೆಪಿಯವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಮುಂಬಾಗಿಲಿನಿಂದ ಓಡಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತದಾರಿಗೆ ಕರೆ ನೀಡಿದರು.
ಮಂಡ್ಯ (ಅ.29): ಬಿಜೆಪಿಯವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮುಂಬಾಗಿಲಿನಿಂದ ಓಡಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತದಾರಿಗೆ ಕರೆ ನೀಡಿದರು. ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ಶುಕ್ರವಾರ ಶ್ರೀಹುಲಿಯೂರಮ್ಮ (ಹಳೇ ಊರಮ್ಮ)ದೇವಿ ದೇವಾಲಯ ಸೇವಾ ಸಮಿತಿ ಟ್ರಸ್ವ್ ಸಹಯೋಗದಲ್ಲಿ ನಡೆದ ಶ್ರೀಹುಲಿಯೂರಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ನನ್ನ ಐದು ವರ್ಷದ ಆಡಳಿತದಲ್ಲಿ ಯಾರಿಂದಲೂ ಛೀ...ಥೂ.. ಎಂದು ಅಧಿಕಾರ ನಡೆಸಲಿಲ್ಲ. ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ.
ಆದರೆ, ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ನಿಂತು ಹೋಗಿದೆ ದೂರಿದರು. ಜನರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೆ. ಪ.ಜಾತಿ, ವರ್ಗ, ಹಿಂದುಳಿದವರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದೇವೆ. ಈ ಸರ್ಕಾರದಲ್ಲಿ ಎಲ್ಲವೂ ನಿಂತುಹೋಗಿವೆ. ಕೆಲಸ ಮಾಡದ ಇವರನ್ನು ಹಾಗೆಯೇ ಕಳುಹಿಸೋಣ ಎಂದರು. ನಮ್ಮ ಸರ್ಕಾರ ಬಂದಾಗ 165 ಭರವಸೆ ನೀಡಿದ್ದೆವು. ಇದರಲ್ಲಿ 158 ಭರವಸೆ ಈಡೇರಿಸಿದ್ದೇವೆ. 30ಕ್ಕೂ ಹೆಚ್ಚು ಕಾರ್ಯಕ್ರಮ ಮಾಡಿದ್ದೇವೆ. ಸಮಾಜದ ಎಲ್ಲ ಬಡವರಿಗೆ ಅಂದರೆ, ಕುರುಬರಿಗಷ್ಟೇ ಅಲ್ಲದೇ ಮುಸ್ಲಿಂ, ಒಕ್ಕಲಿಗರು, ಬ್ರಾಹ್ಮಣರು, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಜಾತಿ ಬಡವರಿಗೆ ಏಳು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಿದೆವು ಎಂದರು.
ಮೀಸಲಾತಿ ಹೆಚ್ಚಳಕ್ಕಾಗಿ ಸಮುದಾಯಗಳು ಕೇಳುವುದು ತಪ್ಪಲ್ಲ: ಸಿದ್ದರಾಮಯ್ಯ
ಶಾಲಾ ಮಕ್ಕಳಿಗೆ ಉಚಿತವಾಗಿ ಸೌಲಭ್ಯ, ರೈತರಿಗೆ 50,000 ಸಾಲ ಮನ್ನಾ ಮಾಡಿದೆವು. ಇವೆಲ್ಲವನ್ನೂ ಕೇವಲ ಒಂದು ಜಾತಿಗೆ ನೀಡಲಿಲ್ಲ. ಜಾತಿಗಳಿಗೆ ಸೀಮಿತವಾದ ಅಧಿಕಾರ ಮಾಡಲಿಲ್ಲ. ಆದರೆ, ಬಿಜೆಪಿ ತಾರತಮ್ಯ ಮಾಡುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರಿಗೆ ವಿದ್ಯಾರ್ಥಿ ವೇತನ ಕೊಡಲಿಲ್ಲ. ಇವರ ಯೋಗ್ಯತೆಗೆ ಹಿಂದುಳಿದ ಜಾತಿ ಮಕ್ಕಳಿಗೆ ಪ್ರತಿ ತಿಂಗಳು ವಿದ್ಯಾಸಿರಿ ಯೋಜನೆಯನ್ನು 1,500 ಕೊಡುವುದನ್ನು ಜಾರಿಗೆ ತಂದಿದ್ದೆ. ಈಗ ಎಲ್ಲವನ್ನೂ ನಿಲ್ಲಿಸಿರುವ ಬಿಜೆಪಿಯವರಿಗೆ ಮಾತನಾಡುವ ನೈತಿಕತೆ ಇಲ್ಲ. ಇಂತಹವರು ಮತ್ತೆ ಅಧಿಕಾರಕ್ಕೆ ಬರಬೇಕಾ ಎಂದು ಪ್ರಶ್ನಿಸಿದರು.
ಮೈಷುಗರ್ ಕಾರ್ಖಾನೆಗೆ 50 ಕೋಟಿ ರು. ಕೊಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದರೂ ಕೊಡಲಿಲ್ಲ. ಅನೇಕ ಬಾರಿ ಮನವಿ ಮಾಡಿದರೂ ಸಹ ನೀಡಲಿಲ್ಲ. ಕಬ್ಬಿನ ಬೆಲೆ ಬಿದ್ದಿರುವಾಗ 1,800 ಕೋಟಿ ನೀಡಿದ್ದೆ. ಈಗ ಹೆಚ್ಚಿನ ಬೆಲೆಗಾಗಿ ರೈತರು ಧರಣಿ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಾರ್ಖಾನೆಯನ್ನು ಆರಂಭಿಸಿ ರೈತರಿಗೂ ಅನುಕೂಲ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಶುದ್ಧ ಮನಸ್ಸಿನಿಂದ ಕೆಲಸ ಮಾಡಿ: ಶುದ್ಧ ಮನಸ್ಸಿನಿಂದ ಸ್ವಾರ್ಥ ಬಿಟ್ಟು ಇನ್ನೊಬ್ಬರಿಗಾಗಿ ನಾವು ಕೆಲಸ ಮಾಡಬೇಕು. ಆಗ ದೇವರು ಮೆಚ್ಚುತ್ತಾನೆ. ನಮಗೋಸ್ಕರ ಮಾಡಿಕೊಂಡರೆ ದೇವರು ಮೆಚ್ಚುವುದಿಲ್ಲ. ನಿಮ್ಮ ಕುಟುಂಬಕ್ಕಷ್ಟೇ ಕೈಮುಗಿದು ಬೇಡಿಕೊಂಡರೆ ನಿಮ್ಮಪ್ಪರಾಣೆಗೂ ಒಳ್ಳೆಯದು ಮಾಡಲ್ಲ. ಬೇರೆಯವರಿಗೆ ಒಳ್ಳೆದಾಗ್ಲಿ ಎಂದು ಕೇಳಿಕೊಂಡರೆ ನಿಮಗೆ ಒಳ್ಳೆಯದಾಗುತ್ತೆ ಎಂದರು. ಕೇವಲ ದೇವಸ್ಥಾನ, ಪ್ರತಿಮೆಗಳನ್ನು ಸ್ಥಾಪನೆ ಮಾಡಿದರೆ ಸಾಲದು, ಎಲ್ಲರೂ ಸತ್ಯದಿಂದ ನಡೆದುಕೊಳ್ಳಬೇಕು. ಸತ್ಯವೇ ದೇವರು, ಸ್ವರ್ಗ ಎನ್ನುತ್ತೇವೆ. ನಿತ್ಯವೇ ನರಕ ಎಂದು ಕರೆಯುತ್ತೇವೆ. ಇವೆರಡೂ ಇಲ್ಲಿಯೇ ಇದೆ.
ಸಿದ್ದರಾಮಯ್ಯ ದಲಿತರು, ಹಿಂದುಳಿದ ನಾಯಕರನ್ನು ತುಳಿದಿದ್ದಾರೆ: ಸಚಿವ ಶ್ರೀರಾಮುಲು
ನಾವು ಮಾಡುವ ಕೆಲಸದಲ್ಲಿ ದೇವರನ್ನು ಕಂಡುಕೊಳ್ಳಬೇಕು. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಇದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಸಲಹೆ ನೀಡಿದರು. ಸಮಾರಂಭದಲ್ಲಿ ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ, ಮುಖಂಡರಾದ ದಡದಪುರ ಶಿವಣ್ಣ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮುಖಂಡರಾದ ಗಣಿಗ ರವಿಕುಮಾರ್, ಡಾ.ಕೃಷ್ಣ, ಕೆ.ಕೆ.ರಾಧಾಕೃಷ್ಣ, ಸಿ.ಡಿ.ಗಂಗಾಧರ್, ಸಿದ್ಧಾರೂಢ ಸತೀಶ್ಗೌಡ, ಮನ್ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಟ್ರಸ್ಟ್ ಗೌರವಾಧ್ಯಕ್ಷ ಜಿ.ಹುಚ್ಚಪ್ಪ, ಅಧ್ಯಕ್ಷ ಆನಂದ್, ಮರೀಗೌಡ, ಜವರಪ್ಪ, ಚಂದ್ರು, ಕಂಬದಹಳ್ಳಿ ಪುಟ್ಟಸ್ವಾಮಿ ಭಾಗವಹಿಸಿದ್ದರು.