Asianet Suvarna News Asianet Suvarna News

ಪ್ರಾಮಾಣಿಕರಾಗಿದ್ರೆ ಭ್ರಷ್ಟಾಚಾರ ನ್ಯಾಯಾಂಗ ತನಿಖೆ ನಡೆಸಿ: ಸಿದ್ದರಾಮಯ್ಯ ಸವಾಲು

ನೀವು ಪ್ರಾಮಾಣಿಕರಾಗಿದ್ದರೆ ಸರ್ಕಾರಿ ಅಧಿಕಾರಿಗಳ ವರ್ಗಾವಣೆ, ನೇಮಕಾತಿ, ಎನ್‌ಓಸಿ ನೀಡಿಕೆ, ಕೆಲಸ ಮಂಜೂರಿನಲ್ಲಿ ಶೇ.40 ಕಮಿಷನ್‌ ನೀಡಬೇಕಾದ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. 

Former CM Siddaramaiah Slams On BJP Government At Chikkamagaluru gvd
Author
First Published Nov 4, 2022, 9:26 PM IST

ಚಿಕ್ಕಮಗಳೂರು (ನ.04): ನೀವು ಪ್ರಾಮಾಣಿಕರಾಗಿದ್ದರೆ ಸರ್ಕಾರಿ ಅಧಿಕಾರಿಗಳ ವರ್ಗಾವಣೆ, ನೇಮಕಾತಿ, ಎನ್‌ಓಸಿ ನೀಡಿಕೆ, ಕೆಲಸ ಮಂಜೂರಿನಲ್ಲಿ ಶೇ.40 ಕಮಿಷನ್‌ ನೀಡಬೇಕಾದ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವನ್ನು ಬದಲಾವಣೆ ಮಾಡಬೇಕೆಂದು ರಾಜ್ಯದ ಜನ ಚರ್ಚಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಇರುವುದರಿಂದ ಕರ್ನಾಟಕ ಕಾಂಗ್ರೆಸ್‌ಗೆ ಬಲ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಹುಲ್‌ ಗಾಂಧಿ ಅವರು ರಾಜ್ಯದಲ್ಲಿ 21 ದಿನಗಳ ಕಾಲ 510 ಕಿ.ಮೀ. ಮಾಡಿದ ‘ಭಾರತ್‌ ಜೋಡೋ’ ಐತಿಹಾಸಿಕ ಪಾದಯಾತ್ರೆಗೆ ನಮ್ಮ ನಿರೀಕ್ಷೆಗೂ ಮೀರಿ ಜನ ಸ್ಪಂದಿಸಿ, ಉತ್ಸಾಹ ಹುರುಪಿನಿಂದ ಭಾಗವಹಿಸಿದರು. ಇದೊಂದು ಯಶಸ್ವಿ ಪಾದಯಾತ್ರೆ, ಅದೂ ಕೂಡ ರಾಜ್ಯ ಕಾಂಗ್ರೆಸ್‌ ಪಕ್ಷಕ್ಕೆ ಬಲ ಕೊಟ್ಟಿದೆ. ಹಾಗಾಗಿ ಈ ಬಾರಿ ಬಿಜೆಪಿ ಸೋಲಿಸಿ ಕಾಂಗ್ರೆಸ್‌ ಪಕ್ಷಕ್ಕೆ ಜನ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು. ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಜನಸಾಮಾನ್ಯರು, ಮತದಾರರು ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಬೇಸತ್ತಿರುವ ಬಗ್ಗೆ ತಿಳಿಸಿದ್ದಾರೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆ, ನೇಮಕಾತಿ, ಎನ್‌ಓಸಿ ನೀಡಿಕೆ, ಕೆಲಸ ಮಂಜೂರಿನಲ್ಲಿ ಶೇ.40 ಕಮೀಷನ್‌ ನೀಡಬೇಕಾದ ಸ್ಥಿತಿ ಇದೆ. ಹಾಗಾಗಿ ಬಿಜೆಪಿ ಸರ್ಕಾರ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

Chikkamagaluru: ಶ್ರೀರಾಮಸೇನೆ ವತಿಯಿಂದ ನಡೆಯುವ ದತ್ತಮಾಲಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಅಧಿಸೂಚನೆ

ಕೆ.ಆರ್‌.ಪುರಂ ಇನ್‌ಸ್ಪೆಕ್ಟರ್‌ ನಂದೀಶ್‌ ಹೃದಯಾಘಾತದಿಂದ ಮೃತಪಟ್ಟರು. ಸಚಿವ ಎಂಟಿಬಿ ನಾಗರಾಜ್‌ ಓರ್ವ ಜವಾಬ್ದಾರಿಯುತ ಮಂತ್ರಿ ಎಂದುಕೊಂಡಿದ್ದೇನೆ. ನಂದೀಶ್‌ ಅವರ ಅಂತಿಮ ದರ್ಶನಕ್ಕೆ ತೆರಳುವಾಗ ಸಚಿವರ ಜೊತೆ ಇದ್ದ ಪೊಲೀಸರು ಇತರರೊಂದಿಗೆ ಮಾತನಾಡುತ್ತಾ, ‘ಏನ್ರಿ, ಟ್ರಾನ್ಸ್‌ಫರ್‌ಗೆ .70 ರಿಂದ .80 ಲಕ್ಷ ಲಂಚ ಕೊಟ್ಟುಬಂದರೆ ಹೃದಯಾಘಾತವಲ್ಲದೇ ಮತ್ತೇನಾಗುತ್ತದೆ’ ಎಂದಿದ್ದರು. ಅಲ್ಲದೇ ಎರಡು ದಿನದ ಹಿಂದೆ ಸಸ್ಪೆಂಡ್‌ ಮಾಡಿದ್ದರು. ಇಂತಹ ಮಾನಸಿಕ ಒತ್ತಡದಿಂದ ಹೃದಯಾಘಾತವಾಗಿದೆ ಎಂದು ಆರೋಪಿಸಿದರು.

ಪೊಲೀಸ್‌ ಅಧಿಕಾರಿ .70-.80 ಲಕ್ಷ ಸಾಲ ಮಾಡಿ ಲಂಚ ಕೊಟ್ಟು ವರ್ಗಾವಣೆಯಾಗಿ ಬಂದಿರುತ್ತಾರೆ. ಆ ಸ್ಥಳದಲ್ಲಿ ಬರೀ ಒಂದು ವರ್ಷ ಮಾತ್ರ ನಂತರ ಬದಲಾವಣೆ ಮಾಡುತ್ತಾರೆ. ಅಷ್ಟರೊಳಗೆ ಹಣ ಮಾಡಿಕೊಳ್ಳಬೇಕಲ್ಲ. ಮತ್ತೊಂದು ಪ್ರಕರಣದಲ್ಲಿ ಹುಬ್ಬಳ್ಳಿಯ ಬಸವರಾಜ್‌ ಅಮರಗೋಳ್‌ ಅವರು ಕೋವಿಡ್‌ ಮೊದಲ ಅಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಹಾಗೂ ಮೂಡಿಗೆರೆ ತಾಲೂಕುಗಳಿಗೆ ಪರಿಕರಗಳನ್ನು ವಿತರಿಸಿದ್ದಾರೆ. 2 ವರ್ಷದಿಂದ ಅಲೆದಾಡಿದರೂ ಹಣ ಬಿಡುಗಡೆ ಮಾಡಿಲ್ಲ. ಕೇಳಿದರೆ ಶೇ.35-ಶೇ.40 ಕಮೀಷನ್‌ ಕೊಡುವಂತೆ ತಾಕೀತು ಮಾಡಿದ್ದಾರೆ. 

ಆಗ ಅವರು, ಸಿಎಂಗೆ, ಆರ್‌ಡಿಪಿಆರ್‌ ಕಾರ್ಯದರ್ಶಿಗೆ ಪತ್ರ ಬರೆದು ಬಿಲ್‌ ಕೊಡಿಸಿ ಅಥವಾ ದಯಾಮರಣಕ್ಕೆ ಅವಕಾಶ ನೀಡಿ ಎಂದು ರಾಷ್ಟ್ರಪತಿಗೆ ಪತ್ರ ಹಾಕಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಭ್ರಷ್ಟಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂದು ಕಿಡಿಕಾರಿದರು. ‘ನಾ ಕಾವೂಂಗಾ, ನಾ ಖಾನೆದೂಂಗಾ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಾರೆ. ಡಬಲ್‌ ಎಂಜಿನ್‌ ಸರ್ಕಾರ ಬೇರೆ ಇದೆ. ಶೇ.40 ಕಮಿಷನ್‌ ಕೊಡಬೇಕೆಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದು ಒಂದು ವರ್ಷ ಕಳೆದರೂ ಕನಿಷ್ಠ ರಾಜ್ಯ ಸರ್ಕಾರದಿಂದ ವಿವರಣೆಯಾದರೂ ಕೇಳಬೇಕಲ್ಲಾ ಅದರ ಬಗ್ಗೆ ಚಕಾರವೇ ಎತ್ತಿಲ್ಲ ಎಂದರು.

Chikkamagaluru: ಹಿರೇಮಗಳೂರಿನ ಶ್ರೀ ಕೋದಂಡರಾಮ ದೇವಾಲಯದಲ್ಲಿ ಕನ್ನಡದಲ್ಲಿ ಪೂಜೆ

ನಮ್ಮ ಸರ್ಕಾರದಲ್ಲೂ ಈ ರೀತಿಯ ಅಕ್ರಮವಾಗಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆಗ ಅವರು ಪ್ರತಿಪಕ್ಷದಲ್ಲಿ ಇದ್ದಾಗ ಪ್ರಸ್ತಾಪ ಮಾಡಬಹುದಾಗಿತ್ತಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನೀವು ಪ್ರಾಮಾಣಿಕರಾಗಿದ್ದರೆ ನ್ಯಾಯಾಂಗ ತನಿಖೆ ನಡೆಸಿ, ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಭಾಪತಿ ಡಾ. ಬಿ.ಎಲ್‌.ಶಂಕರ್‌, ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್‌, ವಿಧಾನ ಪರಿಷತ್ತು ಮಾಜಿ ಸದಸ್ಯರಾದ ಎಂ.ಶ್ರೀನಿವಾಸ್‌, ಎ.ವಿ.ಗಾಯತ್ರಿ ಶಾಂತೇಗೌಡ, ಡಾ.ಡಿ.ಎಲ್‌.ವಿಜಯ್‌ಕುಮಾರ್‌, ಎಚ್‌.ಎಚ್‌. ದೇವರಾಜ್‌, ಎಂ.ಎಲ್‌. ಮೂರ್ತಿ, ಹಿರೇಮಗಳೂರು ಪುಟ್ಟಸ್ವಾಮಿ, ರವೀಶ್‌ ಕ್ಯಾತನಬೀಡು, ಶಿವಾನಂದಸ್ವಾಮಿ, ಎ.ಎನ್‌.ಮಹೇಶ್‌, ಮಂಜೇಗೌಡ ಇದ್ದರು.

Follow Us:
Download App:
  • android
  • ios