ಭ್ರಷ್ಟಾಚಾರ ಕುರಿತು ತನಿಖೆ ನಡೆಸಿ: ಸಿದ್ದು ಸವಾಲ್
ನನ್ನ ವಿರುದ್ಧದ ಆರೋಪಗಳ ತನಿಖೆಗೆ ಸಿದ್ಧ, ದಮ್ ಇದ್ದರೆ ಜಡ್ಜ್‌ರಿಂದ ತನಿಖೆ ಮಾಡಿಸಿ, ಬಿಜೆಪಿ ಆರೋಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲ್
ಬೆಂಗಳೂರು(ಜ.25): ‘ಬಿಜೆಪಿ ನಾಯಕರು ನನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳ ತನಿಖೆಗೆ ನಾನು ಸಿದ್ಧ. ಮಾತೆತ್ತಿದರೆ ದಮ್, ತಾಕತ್ ಎಂದು ಬೊಬ್ಬಿಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಿಜವಾಗಲೂ ದಮ್ ಇದ್ದರೆ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳ ಪೈಕಿ ಯಾರ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಲಿ.’ ಹೀಗಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ನೇತೃತ್ವದ ಸರ್ಕಾರದಲ್ಲಿ 35 ಸಾವಿರ ಕೋಟಿ ರು.ನಷ್ಟುಹಗರಣ ನಡೆದಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಅವರು ಆರೋಪ ಮಾಡಿದ್ದಾರಲ್ಲಾ ಎಂಬ ಪ್ರಶ್ನೆಗೆ, ‘ನನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳ ತನಿಖೆಗೆ ನಾನು ಸಿದ್ಧನಿದ್ದೇನೆ. ಮುಖ್ಯಮಂತ್ರಿ ಅವರಿಗೆ ತಾಕತ್ ಇದ್ದರೆ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಸರ್ಕಾರಗಳ ಭ್ರಷ್ಟಾಚಾರಗಳನ್ನು ತನಿಖೆ ನಡೆಸಲಿ. ಆಗ ಯಾರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಗೊತ್ತಾಗುತ್ತದೆ’ ಎಂದರು.
ಪ್ರಧಾನಿ ಮೋದಿ ಕರ್ನಾಟಕದ ರೈತರಿಗೆ ಟೋಪಿ ಹಾಕಿ ಮೋಸ ಮಾಡಿದ್ದಾರೆ: ಸಿದ್ದರಾಮಯ್ಯ
‘ನಮ್ಮ ಸರ್ಕಾರ ಇದ್ದಾಗ ಪ್ರತಿಪಕ್ಷದಲ್ಲಿದ್ದವರು ಬಿಜೆಪಿಯವರೇ. ನಾವು ಅಕ್ರಮ, ಭ್ರಷ್ಟಾಚಾರ ನಡೆಸಿದ್ದರೆ ಆಗಲೇ ದನಿ ಎತ್ತಬಹುದಿತ್ತು. ಅದೂ ಹೋಗಲಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕಾಂಗ್ರೆಸ್ ವಿರುದ್ಧದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿಸಬಹುದಿತ್ತು. ಅಧಿಕಾರಕ್ಕೆ ಬಂದು ಮೂರು ಮುಕ್ಕಾಲು ವರ್ಷ ಕಳೆದರೂ ಇದ್ಯಾವುದನ್ನೂ ಇದುವರೆಗೆ ಮಾಡದೆ ಈಗ ಚುನಾವಣೆ ಹೊಸ್ತಿಲಲ್ಲಿ ಬಾಯಿ ಬಡಿದುಕೊಳ್ಳುತ್ತಿರುವುದೇಕೆ? ಸಿಎಂಗೆ ತನಿಖೆ ಮಾಡಿಸುವ ದಮ್, ತಾಕತ್ ಇರಲಿಲ್ಲವಾ?’ ಎಂದು ಪ್ರಶ್ನಿಸಿದರು.
ವಿಶ್ವದ ನಂ.1 ಭ್ರಷ್ಟ ಸರ್ಕಾರ:
‘ಹಿಂದಿನ ಯಡಿಯೂರಪ್ಪ ಸರ್ಕಾರ ದೇಶದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಎಂದು ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಪಡೆದಿತ್ತು. ಈಗೇನಾದರೂ ಸಮೀಕ್ಷೆ ನಡೆದರೆ ವಿಶ್ವದಲ್ಲಿಯೇ ಅತ್ಯಂತ ಭ್ರಷ್ಟಸರ್ಕಾರ ಎಂಬ ಕುಖ್ಯಾತಿ ಗಳಿಸಬಹುದು. ಈಗಿನ ಸರ್ಕಾರದ ಅವಧಿಯಲ್ಲಿ ವಿಧಾನಸೌಧದ ಗೋಡೆ-ಗೋಡೆಗಳು ಕೂಡ ಲಂಚ, ಲಂಚ ಎಂದು ಪಿಸುಗುಡುತ್ತಿವೆ. ಬೀದಿಯಲ್ಲಿ ಜನ ಇದು 40 ಪರ್ಸೆಂಟ್ ಸರ್ಕಾರ ಎಂದು ಗೇಲಿ ಮಾಡುತ್ತಿದ್ದಾರೆ’ ಎಂದರು.
‘ಸರ್ಕಾರಿ ಕಾಮಗಾರಿ ನಡೆಸುವವರೇ ಸರ್ಕಾರದ ವಿರುದ್ಧ ಲಂಚದ ಆರೋಪ ಮಾಡುತ್ತಿರುವುದು ದೇಶದಲ್ಲಿಯೇ ಮೊದಲ ಪ್ರಕರಣ. ಲಂಚಕ್ಕಾಗಿ ಪೀಡಿಸುವ ಸಚಿವ-ಶಾಸಕರಿಂದ ಬೇಸತ್ತು ಗುತ್ತಿಗೆದಾರರು ಮತ್ತು ವರ್ಗಾವಣೆಯಲ್ಲಿ ದುಡ್ಡು ಕಳೆದುಕೊಂಡು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ಕೊಲೆಗಡುಕ ಸರ್ಕಾರವಲ್ಲದೆ ಮತ್ತೇನು?’ ಎಂದು ಪ್ರಶ್ನಿಸಿದರು.
ಕೋಲಾರದಲ್ಲಿ ಸಿದ್ದು ಸೋಲಿಸಲು ದಳಪತಿ ತಂತ್ರ: ಒಕ್ಕಲಿಗ, ಮುಸ್ಲಿಂ ಮತ ಸೆಳೆಯುವ ಜೆಡಿಎಸ್ ಪ್ಲಾನ್
‘ಲೋಕಾಯುಕ್ತ ಸಂಸ್ಥೆ ಬಗ್ಗೆ ಮಾತನಾಡುವ ನೈತಿಕ ಅಧಿಕಾರ ಬಿಜೆಪಿಗೆ ಇಲ್ಲ. ರಾಜ್ಯ ಹೈಕೋರ್ಚ್ ಆದೇಶದ ಮೇರೆಗೆ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತರ ಹಿಂದಿನ ಸ್ಥಾನಮಾನ ನೀಡಲಾಗಿದೆಯೇ ಹೊರತು, ಇದರಲ್ಲಿ ಬಿಜೆಪಿಯ ಪಾತ್ರ ಇಲ್ಲ. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 10 ವರ್ಷಗಳ ಕಾಲ ಆ ರಾಜ್ಯದಲ್ಲಿ ಲೋಕಾಯುಕ್ತರನ್ನೇ ನೇಮಕ ಮಾಡಿರಲಿಲ್ಲ ಎನ್ನುವುದು ನೆನಪಿರಲಿ. ಕೇಂದ್ರದಲ್ಲಿ ಲೋಕಪಾಲ ಕಾಯ್ದೆಯನ್ನು ಜಾರಿಗೆ ತರುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ ಇಲ್ಲಿಯವರೆಗೆ ಲೋಕಪಾಲರ ನೇಮಕದ ಬಗ್ಗೆ ಬಾಯಿ ಬಿಟ್ಟಿಲ್ಲ ಯಾಕೆ? ಜೈಲಿಗೆ ಹೋಗುವ ಭಯವೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ತಮ್ಮ ಹಗರಣ ಮುಚ್ಚಲು ಬಿಜೆಪಿ ಆರೋಪ: ಡಿಕೆಶಿ
ಬೆಂಗಳೂರು: ಬಿಜೆಪಿ ಸರ್ಕಾರಕ್ಕೆ ‘40% ಕಮಿಷನ್ ಸರ್ಕಾರ’ ಎಂಬ ಬಿರುದು ಬಂದಿದೆ. ಅದನ್ನು ಮುಚ್ಚಿಹಾಕಲು ಕಾಂಗ್ರೆಸ್ ವಿರುದ್ಧ ಚುನಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರ ಆರೋಪ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 35 ಸಾವಿರ ಕೋಟಿ ರು. ಭ್ರಷ್ಟಾಚಾರ ನಡೆದಿದೆ ಎಂದು ಈಗ ಬಿಜೆಪಿಗರು ಆರೋಪಿಸುತ್ತಿದ್ದಾರೆ. ಮೂರೂವರೆ ವರ್ಷದಿಂದ ಅಧಿಕಾರದಲ್ಲಿದ್ದರೂ ತನಿಖೆ ನಡೆಸದೆ ಕಡ್ಲೇಪುರಿ ತಿನ್ನುತ್ತಿದ್ದರಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.