ಇತಿಹಾಸ ತಿರುಚುವುದೇ ಬಿಜೆಪಿ, ಆರೆಸ್ಸೆಸ್ ಕೆಲಸ: ಸಿದ್ದರಾಮಯ್ಯ
ಬಿಜೆಪಿ ಆಡಳಿತದಿಂದ ಭಯದಲ್ಲಿ ಬದುಕುವ ವಾತಾವರಣ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
ಬಳ್ಳಾರಿ(ಅ.12): ಇತಿಹಾಸವನ್ನು ತಿರುಚುವುದೇ ಬಿಜೆಪಿ-ಆರ್‌ಎಸ್‌ಎಸ್‌ನವರ ಕೆಲಸ. ಇವರ ಮಾತನ್ನು ಯಾರೂ ನಂಬಬೇಡಿ. ಇವರು ಬರೀ ಸುಳ್ಳುಗಾರರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಭಾರತ ಐಕ್ಯತಾ ಯಾತ್ರೆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಜರುಗಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಿದ್ಧತಾ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯನ್ನು ಕೊಂದ ಕೊಲೆಗಡುಕ ಗೋಡ್ಸೆಯನ್ನು ಹಾಗೂ ಹಿಂದು-ಮುಸ್ಲಿಮರು ದೇಶದಲ್ಲಿ ಒಟ್ಟಿಗಿರಲು ಸಾಧ್ಯವಿಲ್ಲ. ಈ ದೇಶ ಪ್ರತ್ಯೇಕ ಆಗಬೇಕು ಎಂದು ಒತ್ತಾಯಿಸಿದ್ದ ಸಾವರ್ಕರ್ ಅವರನ್ನು ಈ ಬಿಜೆಪಿಯವರು ಪೂಜೆ ಮಾಡುತ್ತಿದ್ದಾರೆ. ಇತಿಹಾಸವನ್ನು ತಿರುಚುವುದೇ ಇವರ ಕೆಲಸ ಎಂದು ಕಿಡಿಕಾರಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ದೇಶದ್ರೋಹಿ ಎನ್ನುತ್ತಾರೆ. ಪ್ರಧಾನಿ ಮೋದಿ, ಅಮಿತ್ ಶಾ ಬಗ್ಗೆ ಮಾತನಾಡುವಂತಿಲ್ಲ. ಅವರ ವಿರುದ್ಧ ಮಾತನಾಡಿದರೆ ಪ್ರಕರಣ ದಾಖಲಿಸುತ್ತಾರೆ. ಅವರು ಮಾಡುತ್ತಿರುವ ಅನೀತಿಗಳನ್ನು ಕೇಳಿದರೆ ಮುಗಿಬೀಳುತ್ತಾರೆ. ಈ ಹಿಂದೆ ಎಂದೂ ಸಹ ದೇಶದಲ್ಲಿ ಇಂಥ ಭಯದ ವಾತಾವರಣ ಇರಲಿಲ್ಲ ಎಂದರು.
ಮೀಸಲಾತಿ ಹೆಚ್ಚಳ ಐತಿಹಾಸಿಕ ನಿರ್ಣಯ: ಸಚಿವ ಆನಂದ್ ಸಿಂಗ್
ರಾಜ್ಯದಲ್ಲೂ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದರು. 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಮೊದಲು ನಾವು ಹೇಳಲಿಲ್ಲ. ಗುತ್ತಿಗೆದಾರರ ಸಂಘವೇ ಹೇಳಿದೆ. ಅದನ್ನೇ ನಾವು ಹೇಳಿದ್ದೇವಷ್ಟೇ. ಆದರೂ ನಮ್ಮ ವಿರುದ್ಧ ಹರಿಹಾಯುತ್ತಾರೆ. ಹಾಗಾದರೆ ಇವರು ಮಾಡುವ ಅನೀತಿಗಳನ್ನು ಯಾರೂ ಪ್ರಶ್ನಿಸಬಾರದೇ? ಇವರೆಷ್ಟೇ ಭ್ರಷ್ಟಾಚಾರ ಮಾಡಿದರೂ ಸುಮ್ಮನಿರಬೇಕೇ? ಎಂದು ಪ್ರಶ್ನಿಸಿದರಲ್ಲದೆ, ಸಂವಿಧಾನಾತ್ಮಕವಾಗಿ ನೀಡಿದ ಹಕ್ಕನ್ನು ಕಸಿದುಕೊಳ್ಳಲು ಇವರಾರಯರು? ಎಂದರು.
ಈಗ ಶ್ರೀರಾಮುಲು ರಕ್ತ ಹೊರಬಂತೇ?-ಸಿದ್ದು
ಪರಿಶಿಷ್ಟಜಾತಿ, ಪಂಗಡಕ್ಕೆ ಮೀಸಲಾತಿ ಹೆಚ್ಚಿಸಲು ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷಗಳು ಬೇಕಾಯಿತೇ? ಅಧಿಕಾರಕ್ಕೆ ಬಂದ 24 ತಾಸಿನೊಳಗೆ ಮೀಸಲಾತಿ ಹೆಚ್ಚಿಸುವುದು ನಿಶ್ಚಿತ. ಬೇಕಾದರೆ ರಕ್ತದಲ್ಲಿ ಬರೆದು ಕೊಡುವುದಾಗಿ ಹೇಳಿದ್ದ ಸಚಿವ ಶ್ರೀರಾಮುಲು ರಕ್ತ ಈಗ ಹೊರಗೆ ಬಂತೇ? ಎಂದು ಸಿದ್ದರಾಮಯ್ಯ ಇದೇ ವೇಳೆ ವ್ಯಂಗ್ಯವಾಡಿದರು.