Asianet Suvarna News Asianet Suvarna News

ಸಂತೋಷ್‌ ‘ಹಿಂದುತ್ವ ಜಪ’ ಬಿಟ್ಟು ‘ದಲಿತ ಜಪ’: ಸಿದ್ದರಾಮಯ್ಯ

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್‌ಸಿಪಿ-ಟಿಎಸ್‌ಪಿ ಯೋಜನೆಗೆ ನೀಡಿದ್ದ ಹಣ ರೂ.22,161 ಕೋಟಿ ಮಾತ್ರ, ನಮ್ಮ ಸರ್ಕಾರದ 5 ವರ್ಷಗಳಲ್ಲಿ ನೀಡಿದ್ದ ಹಣ ರೂ.88,395 ಕೋಟಿ. ಪ್ರಧಾನಿ ಮೋದಿಗೆ ಹೇಳಿ ಈ ಯೋಜನೆಯನ್ನು ರಾಷ್ಟ್ರ ಮಟ್ಟದಲ್ಲಿ ಜಾರಿಗೆ ತರುತ್ತೀರಾ? ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ

Former CM Siddaramaiah Reacts On B L Santosh Statement
Author
Bengaluru, First Published Aug 14, 2020, 10:48 AM IST

ಬೆಂಗಳೂರು(ಆ.14):  ಬಿ.ಎಲ್‌. ಸಂತೋಷ್‌ ಅವರು ‘ಹಿಂದುತ್ವ’ ಜಪ ನಿಲ್ಲಿಸಿ ‘ದಲಿತ’ ಜಪ ಶುರು ಮಾಡಿದ್ದಾರೆ. ‘ಹಿಂದು-ಒಂದು’ ಎಂದು ಭಜನೆ ಮಾಡುತ್ತೀರಿ ಜಾತಿ ಮೂಲದ ತಾರತಮ್ಯ, ಶೋಷಣೆ ಜೊತೆ ಗುದ್ದಾಡಿ ದಲಿತರೊಬ್ಬರು ಶಾಸಕರಾದರೂ ಅವರನ್ನು ದಲಿತರೆಂದೇ ಹಂಗಿಸುತ್ತೀರಿ. ನಿಮ್ಮನ್ನು ಕೂಡ ನಿಮ್ಮ ಜಾತಿಯಿಂದಲೇ ಕರೆಯೋಣವೇ?’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಕಾಂಗ್ರೆಸ್‌ಗೆ ದಲಿತ ಶಾಸಕನಿಗೆ ರಕ್ಷಣೆ ನೀಡಲು ಆಗಲಿಲ್ಲ’ ಎಂಬ ಬಿಜೆಪಿ ಮುಖಂಡ ಬಿ.ಎಲ್‌. ಸಂತೋಷ್‌ ಟ್ವೀಟ್‌ಗೆ ಸರಣಿ ಟ್ವೀಟ್‌ಗಳ ಮೂಲಕ ತಿರುಗೇಟು ನೀಡಿದ ಅವರು, ‘ದಲಿತರು ಜಾಗೃತರಾಗಿದ್ದಾರೆ. ಹಿತೈಷಿಗಳು ಯಾರು? ಹಿತಶತ್ರುಗಳು ಯಾರು? ಎನ್ನುವುದು ಅವರಿಗೆ ಗೊತ್ತಿದೆ. ಉರಿಯುವ ಮನೆಯಲ್ಲಿ ಇರಿಯುವ ಕೆಲಸ ಮಾಡಬೇಡಿ. ರಾಜ್ಯದಲ್ಲಿ ನಿಮ್ಮದೇ ಪಕ್ಷ ಅಧಿಕಾರದಲ್ಲಿರುವಾಗ ಒಬ್ಬ ದಲಿತ ಶಾಸಕನ ಮನೆಗೆ ರಕ್ಷಣೆ ನೀಡಲು ನಿಮಗೆ ಸಾಧ್ಯವಾಗಿಲ್ಲ. ಇನ್ನು ಕೋಟ್ಯಂತರ ಸಂಖ್ಯೆಯ ಬಡ-ಅಸಹಾಯಕ ದಲಿತರ ಮನೆಗಳಿಗೆ ರಕ್ಷಣೆ ನೀಡಲು ಹೇಗೆ ಸಾಧ್ಯ? ಇದು ತಲೆತಗ್ಗಿಸುವಂತಹ ವೈಫಲ್ಯವಲ್ಲವೇ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅನಂತ ಕುಮಾರ್‌ ಹೆಗಡೆಗೆ ಒಮ್ಮೆಯಾದರೂ ಬುದ್ದಿ ಹೇಳಿದ್ದೀರಾ? ಸಂತೋಷ್‌ಗೆ ಜಮೀರ್‌ ತಿರುಗೇಟು

ದಲಿತರ ಬಗ್ಗೆ ನಿಮ್ಮ ಮೊಸಳೆ ಕಣ್ಣೀರನ್ನು ದೇಶ ಕಂಡಿದೆ. ಸತ್ತ ದನದ ಚರ್ಮ ಸುಲಿದಿದ್ದಕ್ಕೆ, ಗೋಮಾಂಸ ತಿಂದಿದ್ದಕ್ಕೆ, ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ, ಕುದುರೆ ಏರಿದ್ದಕ್ಕೆ, ಮೀಸೆ ಬಿಟ್ಟಿದ್ದಕ್ಕೆ. ಹೀಗೆ ದಲಿತರನ್ನು ಬೆನ್ನತ್ತಿ ಹಿಂಸಿಸಿ ಸಾಯಿಸಿದ್ದು ಯಾರ ಆಡಳಿತದಲ್ಲಿ? ದಲಿತರು ನಾಯಿಗಳೆಂದು ತುಚ್ಛೀಕರಿಸಿದವರು, ಮೀಸಲಾತಿಯನ್ನು ವಿರೋಧಿಸುತ್ತಿರುವವರು, ಸಂವಿಧಾನವನ್ನು ಬದಲಾಯಿಸಬೇಕೆನ್ನುವವರು, ಡಾ.ಅಂಬೇಡ್ಕರ್‌ ಅವರನ್ನು ಅವಮಾನಿಸುವವರು ಯಾವ ಪಕ್ಷದವರು? ಇಂತಹ ಮನುಷ್ಯ ವಿರೋಧಿಗಳ ವಿರುದ್ಧ ನಿಮ್ಮ ಪಕ್ಷವೇನಾದರೂ ಕ್ರಮ ಕೈಗೊಂಡಿದೆಯೇ?’ ಎಂದು ಸಂತೋಷ್‌ ಅವರನ್ನು ಪ್ರಶ್ನಿಸಿದ್ದಾರೆ.

ನಿಮ್ಮ ಕಾಲದಲ್ಲಿ ದಲಿತರ ಹತ್ಯೆ, ದೌರ್ಜನ್ಯ ದುಪ್ಪಟ್ಟಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ ಹೇಳುತ್ತಿದೆ. ಹೀಗಿದ್ದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸುತ್ತೀರಿ. ಇದು ನಿಮ್ಮ ದಲಿತರ ಮೇಲಿನ ಕಾಳಜಿಯಲ್ಲವೇ? ದಿವಂಗತ ಬಂಗಾರು ಲಕ್ಷ್ಮಣ್‌ ಅವರನ್ನು ನಿಮ್ಮ ಪಕ್ಷದಲ್ಲಿ ಏಕೈಕ ಭ್ರಷ್ಟನೆಂಬ ರೀತಿಯಲ್ಲಿ ಬಲಿಕೊಟ್ಟಿದ್ದು ಯಾರು ಸಂತೋಷ್‌ ಅವರೇ?’ ಎಂದು ಕಿಡಿ ಕಾರಿದ್ದಾರೆ.

ಎಸ್‌ಸಿಪಿ-ಟಿಎಸ್‌ಪಿ ಯೋಜನೆ ಜಾರಿಗೆ ತನ್ನಿ:

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್‌ಸಿಪಿ-ಟಿಎಸ್‌ಪಿ ಯೋಜನೆಗೆ ನೀಡಿದ್ದ ಹಣ ರೂ.22,161 ಕೋಟಿ ಮಾತ್ರ. ನಮ್ಮ ಸರ್ಕಾರದ 5 ವರ್ಷಗಳಲ್ಲಿ ನೀಡಿದ್ದ ಹಣ ರೂ.88,395 ಕೋಟಿ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ ಈ ಯೋಜನೆಯನ್ನು ರಾಷ್ಟ್ರ ಮಟ್ಟದಲ್ಲಿ ಜಾರಿಗೆ ತರುತ್ತೀರಾ?’ ಎಂದು ಪ್ರಶ್ನೆ ಮಾಡಿದ್ದಾರೆ.
 

Follow Us:
Download App:
  • android
  • ios