ಬೆಂಗಳೂರು(ಆ.14): ದಲಿತ ಶಾಸಕನಿಗೆ ಕಾಂಗ್ರೆಸ್‌ ರಕ್ಷಣೆ ನೀಡುತ್ತಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿಕೆಗೆ ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ತಿರುಗೇಟು ನೀಡಿದ್ದು, ರಾಜ್ಯ ಮತ್ತು ಕೇಂದ್ರದಲ್ಲಿ ಎರಡೂ ಕಡೆ ನಿಮ್ಮದೇ ಸರ್ಕಾರಗಳಿವೆ. ನಿಮ್ಮ ವೈಫಲ್ಯಕ್ಕೆ ಬೇರೆಯವರನ್ನು ಪ್ರಶ್ನಿಸಿದರೆ ಹೇಗೆ ಸ್ವಾಮಿ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಜಮೀರ್‌, ಅಖಂಡ ಶ್ರೀನಿವಾಸ ಮೂರ್ತಿ ದಲಿತ ಎಂಬ ಕಾರಣಕ್ಕೆ ನಮ್ಮ ಪಕ್ಷದಲ್ಲಿ ರಕ್ಷಣೆ ನೀಡುತ್ತಿಲ್ಲ ಎಂಬ ನಿಮ್ಮ ಆರೋಪ ಕೇವಲ ರಾಜಕೀಯ ಲಾಭಕ್ಕಷ್ಟೇ ಸೀಮಿತ. ಪೊಲೀಸ್‌ ಇಲಾಖೆ ನಿಮ್ಮ ಅಧೀನದಲ್ಲಿದೆ. ನಿಮ್ಮ ವೈಫಲ್ಯವನ್ನು ನಮ್ಮ ಮೇಲೆ ಹೇರಲು ಬರುತ್ತಿದ್ದೀರಿ. ದಲಿತರ ಬಗ್ಗೆ ಮಾತನಾಡುವ ತಾವೇ ಅಲ್ಲವೇ ಸಾಮಾಜಿಕ ನ್ಯಾಯ, ಜಾತ್ಯಾತೀತತೆ, ಸೋದರತೆ, ಸಮಾನತೆ ಸಾರುವ ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವವರು ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಮುಖಂಡರ ಮೇಲಿನ ಹಲ್ಲೆಗೆ ಕಾಂಗ್ರೆಸಿಗರಿಂದ ಬೆಂಬಲ?

ದಲಿತರನ್ನು ಹೀನಾಯವಾಗಿ ಟೀಕಿಸುವ, ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದಿರುವ ಹಾಗೂ ಸದಾ ಮೀಸಲಾತಿಯನ್ನು ವಿರೋಧಿಸುತ್ತಾ ಹೇಳಿಕೆ ನೀಡುವ ಅನಂತ ಕುಮಾರ್‌ ಹೆಗಡೆ ನಿಮ್ಮ ಪಕ್ಷದ ಸಂಸದರಲ್ಲವೇ? ಅವರಿಗೆ ಒಮ್ಮೆಯಾದರೂ ತಾವು ಬುದ್ದಿ ಹೇಳಿದ್ದೀರಾ? ನಿಮ್ಮ ಸುಳ್ಳು ಪ್ರಚಾರಗಳಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.