ವರುಣಾ ಕ್ಷೇತ್ರದತ್ತ ಸಿದ್ದರಾಮಯ್ಯ ಒಲವು?: ಕೋಲಾರದಲ್ಲಿ ಒಳೇಟಿನ ಭೀತಿ
ಮುಂಬರುವ ವಿಧಾನಸಭಾ ಚುನಾವಣೆಗೆ ತಮ್ಮ ಸ್ಪರ್ಧೆಯ ಕ್ಷೇತ್ರ ಅಂತಿಮಗೊಳಿಸಲು ಕೋಲಾರ ಕಣ ಪರೀಕ್ಷೆ ನಡೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ‘ಕೋಲಾರ ಸಂಪೂರ್ಣ ಸೇಫ್ ಕ್ಷೇತ್ರವೇ ಅಥವಾ ತುಸು ರಿಸ್ಕ್ ಇರುವ ಕ್ಷೇತ್ರವೇ’ ಎಂಬ ಹೊಸ ಗೊಂದಲ ಆರಂಭಗೊಂಡಿದೆ.
ಬೆಂಗಳೂರು (ನ.19): ಮುಂಬರುವ ವಿಧಾನಸಭಾ ಚುನಾವಣೆಗೆ ತಮ್ಮ ಸ್ಪರ್ಧೆಯ ಕ್ಷೇತ್ರ ಅಂತಿಮಗೊಳಿಸಲು ಕೋಲಾರ ಕಣ ಪರೀಕ್ಷೆ ನಡೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ‘ಕೋಲಾರ ಸಂಪೂರ್ಣ ಸೇಫ್ ಕ್ಷೇತ್ರವೇ ಅಥವಾ ತುಸು ರಿಸ್ಕ್ ಇರುವ ಕ್ಷೇತ್ರವೇ’ ಎಂಬ ಹೊಸ ಗೊಂದಲ ಆರಂಭಗೊಂಡಿದೆ. ಇದರ ಪರಿಣಾಮವಾಗಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚುತ್ತಿದೆ ಎನ್ನುತ್ತವೆ ಮೂಲಗಳು.
ಕೋಲಾರ, ವರುಣಾ ಹಾಗೂ ಬಾದಾಮಿ ಕ್ಷೇತ್ರಗಳ ಪಟ್ಟಿಯನ್ನು ಫೈನಲ್ ಮಾಡಿದ್ದು, ಈ ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧಿಸುವುದಾಗಿ ಖುದ್ದು ಸಿದ್ದರಾಮಯ್ಯ ಅವರೇ ಘೋಷಿಸಿದ್ದಾರೆ. ಆದರೆ, ಈ ಮೂರರ ಪೈಕಿ ಯಾವುದು ಎಂಬ ಗುಟ್ಟು ಮಾತ್ರ ಬಿಟ್ಟುಕೊಡುತ್ತಿಲ್ಲ. ಈ ನಡುವೆ, ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಶಾಸಕರಾಗಿರುವ ವರುಣಾ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಆಸ್ಥೆ ವಹಿಸಿ ಅನುದಾನ ಬಿಡುಗಡೆ ಮಾಡಿಸಿರುವುದು ಅವರ ಅಂತಿಮ ಆಯ್ಕೆ ವರುಣಾ ಆಗುವ ಸಾಧ್ಯತೆಯೇ ಹೆಚ್ಚು ಎಂಬ ಮಾತಿಗೆ ಇಂಬು ನೀಡುತ್ತಿದೆ.
ಆರ್ಥಿಕವಾಗಿ ಹಿಂದುಳಿದವರ ಮೀಸಲು ದೇಶದಲ್ಲಿ ಅಸಮಾನತೆ ಹೆಚ್ಚಿಸುತ್ತೆ: ಸಿದ್ದರಾಮಯ್ಯ
ವರುಣಾ ಬಗ್ಗೆ ಚರ್ಚೆ ಶುರು: ಅಹಿಂದ ಮತ ವರ್ಗವನ್ನು ಯಥೇಚ್ಛ ಹೊಂದಿರುವ ಹಾಗೂ ಸಿದ್ದರಾಮಯ್ಯ ಅವರ ಭಾಗ್ಯ ಯೋಜನೆಗಳ ಬಗ್ಗೆ ವಿಶೇಷ ಒಲವನ್ನು ಕೋಲಾರ ಜನತೆ ಹೊಂದಿರುವುದರಿಂದ ಆ ಕ್ಷೇತ್ರವೇ ಸೇಫ್ ಎಂಬುದು ಸಿದ್ದರಾಮಯ್ಯ ಅವರ ಆಪ್ತರ ಹಾಗೂ ಆ ಜಿಲ್ಲೆಯ ಕಾಂಗ್ರೆಸ್ ನಾಯಕರ ಅಭಿಪ್ರಾಯವಾಗಿತ್ತು. ಇದರ ಪರಿಣಾಮವಾಗಿ ಸಿದ್ದರಾಮಯ್ಯ ಅವರು ಕೋಲಾರ ಕಣ ಪರೀಕ್ಷೆಯನ್ನು ನಡೆಸಿ ಬಂದರು. ಇದಾದ ನಂತರದ ಬೆಳವಣಿಗೆಗಳು ನಿಜಕ್ಕೂ ಈ ಕ್ಷೇತ್ರ ಅಷ್ಟುಸೇಫಾ ಎಂಬ ಅನುಮಾನ ಸಿದ್ದರಾಮಯ್ಯ ಆಪ್ತ ವರ್ಗದಲ್ಲೇ ಮೂಡುವಂತೆ ಆಗಿದೆ. ಇದರ ಪರಿಣಾಮ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಸೂಕ್ತವೇ ಎಂಬ ಚರ್ಚೆ ಸಿದ್ದರಾಮಯ್ಯ ಆಪ್ತ ಬಣದಲ್ಲಿ ನಡೆದಿದೆ.
ಕೋಲಾರದ ಬಗ್ಗೆ ಏಕೆ ಹಿಂದೇಟು?: ರಾಜ್ಯದಲ್ಲಿ ತಾವು ಎಲ್ಲೇ ನಿಂತರೂ ಬಿಜೆಪಿ ಹಾಗೂ ಜೆಡಿಎಸ್‌ನ ಒಗ್ಗೂಡಿದ ಬಲವನ್ನು ಎದುರಿಸಬೇಕಾಗುತ್ತದೆ ಎಂಬ ಅರಿವು ಸಿದ್ದರಾಮಯ್ಯ ಅವರಿಗೆ ಇದೆ. ಕೋಲಾರವೂ ಇದಕ್ಕೆ ಹೊರತಲ್ಲ ಎಂಬುದು ಗೊತ್ತಿತ್ತು. ತಮ್ಮ ಒಂದು ಕಾಲದ ಶಿಷ್ಯ ವರ್ತೂರು ಪ್ರಕಾಶ್‌ಗೆ ಟಿಕೆಟ್ ನೀಡುವ ಅಥವಾ ಪಕ್ಷೇತರನನ್ನಾಗಿ ಕಣಕ್ಕೆ ಇಳಿಸಿದರೂ ಅಂತಿಮವಾಗಿ ಜೆಡಿಎಸ್‌ಗೆ ಪೂರಕವಾಗಿಯೇ ಕೋಲಾರದಲ್ಲಿ ಬಿಜೆಪಿ ಕೆಲಸ ಮಾಡುತ್ತದೆ ಎಂಬುದು ಸ್ಪಷ್ಟವಿತ್ತು.
ಇಷ್ಟಾಗಿಯೂ ಆ ಕ್ಷೇತ್ರದ ಕಣ ಪರೀಕ್ಷೆಗೆ ಮುಂದಾಗಿದ್ದು ಜನರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಅರಿಯುವುದರ ಜತೆಗೆ ತಮ್ಮದೇ ಪಕ್ಷದೊಳಗಿನ ಒಳ ಸುಳಿಗಳು ಹೊರ ಬರುತ್ತವೆಯೇ ಎಂಬುದನ್ನು ಪರಿಶೀಲಿಸುವುದು ಆಗಿತ್ತು. ಕೋಲಾರ ಜಿಲ್ಲೆಯ ಬಣ ರಾಜಕಾರಣ ಚುನಾವಣೆಯಲ್ಲಿ ಹೇಗೆ ವರ್ತಿಸುತ್ತದೆ ಎಂಬುದರ ಝಲಕ್ ಪಡೆಯುವ ಉದ್ದೇಶವಿತ್ತು. ಇದು ಈಗ ಸ್ಪಷ್ಟವಾಗಿದೆ. ಸಿದ್ದರಾಮಯ್ಯ ಅವರ ಕಣ ಪರೀಕ್ಷೆಗೆ ಜಿಲ್ಲೆಯ ಪ್ರಮುಖ ನಾಯಕ ಕೆ.ಎಚ್. ಮುನಿಯಪ್ಪ ಗೈರು ಹಾಜರಾಗಿದ್ದರು. ಅಲ್ಲದೆ, ‘ಬಣ ರಾಜಕಾರಣದಲ್ಲಿನ ಗೊಂದಲ ಬಗೆಹರಿಸಿ. ನಂತರ ಕೋಲಾರದಲ್ಲಿ ಸ್ಪರ್ಧಿಸುವ ತೀರ್ಮಾನ ಕೈಗೊಳ್ಳಿ’ ಎಂದು ನಯವಾಗಿಯೇ ಮುನಿಯಪ್ಪ ಎಚ್ಚರಿಸಿದ್ದಾರೆ. ಮುನಿಯಪ್ಪ ಅವರು ಈ ರೀತಿ ಹೇಳಿಕೆ ನೀಡಿರುವುದರ ಹಿಂದೆ ಹಲವು ಶಕ್ತಿಗಳು ಕೆಲಸ ಮಾಡಿರುವ ಗುಮಾನಿಗಳಿವೆ.
ಅಲ್ಲದೆ, ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದಾದರೆ ತಮ್ಮ ಪರ ನಿಂತು ಕ್ಷೇತ್ರದಲ್ಲಿ ಕೆಲಸ ಮಾಡುವ ಪಡೆಯ ಅಗತ್ಯವಿದೆ. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದ ಹಾಲಿ ಶಾಸಕ ಶ್ರೀನಿವಾಸಗೌಡ, ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಕೊತ್ತೂರು ಮಂಜು, ನಜೀರ್ ಅಹ್ಮದ್, ಡಾ. ಎಂ.ಸಿ. ಸುಧಾಕರ್, ನಂಜೇಗೌಡ, ಶಿಡ್ಲಘಟ್ಟಮುನಿಯಪ್ಪ ಹಾಗೂ ಮಾಜಿ ಸಚಿವ ಕೃಷ್ಣ ಬೈರೇಗೌಡರಂತಹ ನಾಯಕರೂ ಇದ್ದಾರೆ. ಆದರೆ, ಕೃಷ್ಣ ಬೈರೇಗೌಡ ಅವರೊಬ್ಬರನ್ನು ಹೊರತುಪಡಿಸಿ ಉಳಿದ ನಾಯಕರು ದೊಡ್ಡ ಮಟ್ಟದಲ್ಲಿ ಮತದಾರರ ಮೇಲೆ ಹಿಡಿತ ಹೊಂದಿದ್ದಾರೆ ಎಂದೇನೂ ಇಲ್ಲ.
ಇದರರ್ಥ ಕೋಲಾರದಲ್ಲಿ ಸ್ಪರ್ಧಿಸುವುದಾದರೆ ಸಂಪೂರ್ಣ ತಮ್ಮ ಸ್ವಂತ ಇಮೇಜ್ ಹಾಗೂ ಶಕ್ತಿಯಿಂದಲೇ ಗೆಲ್ಲಬೇಕು ಎಂಬುದು ಸಿದ್ದರಾಮಯ್ಯ ಅವರಿಗೆ ಮನದಟ್ಟಾಗಿದೆ. ಜಾತಿ ಲೆಕ್ಕಾಚಾರದ ಪ್ರಕಾರ ಕೋಲಾರ ಹಿಂದಿನಿಂದಲೂ ಅಹಿಂದ ವರ್ಗಕ್ಕೆ ಪೂರಕ ಕ್ಷೇತ್ರ. ಈ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆಯೇ ಸ್ಪರ್ಧೆ. ದಲಿತರು, ಒಕ್ಕಲಿಗರು, ಮುಸ್ಲಿಂ, ಕುರುಬರು ಹಾಗೂ ಇತರೆ ಸಣ್ಣ ಪುಟ್ಟಹಿಂದುಳಿದ ಜಾತಿಗಳು ದೊಡ್ಡ ಸಂಖ್ಯೆಯಲ್ಲಿವೆ. ಕುರುಬರು, ಮುಸ್ಲಿಮರು, ಹಿಂದುಳಿದ ಜಾತಿಗಳ ಬಲದ ಮೇಲೆ ಹಾಗೂ ಸ್ವಲ್ಪವೇ ದಲಿತ ಮತಗಳು ಒಲಿದರೂ ಗೆಲುವು ಸುಲಭ ಎಂಬುದು ಲೆಕ್ಕಾಚಾರ. ಆದರೆ, ಕಾಂಗ್ರೆಸ್‌ನ ಒಳ ಏಟು ಈ ಸುಲಭ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಬಲ್ಲದು ಎಂಬ ಆತಂಕ ನಿರ್ಮಾಣವಾಗಿದೆ.
ಕೋಲಾರದಲ್ಲಿ ಸಿದ್ದು ಬಲಿಕೊಡಲು ಕಾಂಗ್ರೆಸ್ ಸಿದ್ಧತೆ: ಸಚಿವ ಸುಧಾಕರ್
ವರುಣಾ ಏಕೆ ಬೇಕು?: ಕೋಲಾರಕ್ಕೆ ಹೋಲಿಸಿದರೆ ವರುಣಾ ಸಾಕಷ್ಟು ಸುರಕ್ಷಿತ ಕ್ಷೇತ್ರ ಎಂಬ ಭಾವನೆಯಿದೆ. ಲಿಂಗಾಯತರು ದೊಡ್ಡ ಸಂಖ್ಯೆಯಲ್ಲಿದ್ದರೂ ಉಳಿದ ಜಾತಿಗಳು ವರುಣಾದಲ್ಲಿ ಪ್ರಭಾವಿಯಾಗಿಯೇ ಇವೆ. ಅಲ್ಲದೇ ಸ್ವಂತ ನಿವಾಸ ಹಾಗೂ ಊರು ಎರಡು ಈ ಕ್ಷೇತ್ರದಲ್ಲೇ ಇವೆ. ಅಲ್ಲದೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಅತ್ಯುತ್ತಮ ಕಾರ್ಯಕರ್ತರ ಪಡೆಯಿದೆ. ಜಿಲ್ಲಾ ಕಾಂಗ್ರೆಸ್ ನಾಯಕರಲ್ಲೂ ಒಡಕಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ಆಯ್ಕೆಯ ಕ್ಷೇತ್ರಗಳಲ್ಲಿ ವರುಣಾ ಅತ್ಯಂತ ಸುರಕ್ಷಿತ.
ಆದರೆ, ಈ ಕ್ಷೇತ್ರದ ಹಾಲಿ ಶಾಸಕ ಯತೀಂದ್ರ ಅವರು ಸಿದ್ದರಾಮಯ್ಯ ಅವರ ಪುತ್ರ. ಒಂದು ಅವಧಿಗೆ ಶಾಸಕರಾಗಿರುವ ಅವರು ಈ ಬಾರಿಯೂ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದೇ ಸಮೀಕ್ಷೆಗಳು ಹೇಳಿವೆ. ಹೀಗಿರುವಾಗ ತುಸು ರಿಸ್ಕ್ ಇದೆ ಎಂಬ ಒಂದೇ ಕಾರಣಕ್ಕೆ ಕೋಲಾರ ಕ್ಷೇತ್ರವನ್ನು ಕೈಬಿಟ್ಟು ಪುತ್ರನ ಭವಿಷ್ಯ ಸೃಷ್ಟಿಸುವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೇ ಎಂಬ ತುಮುಲವೂ ಸಿದ್ದರಾಮಯ್ಯ ಅವರಿಗೆ ಇದೆ ಎನ್ನಲಾಗುತ್ತಿದೆ.