ಬೊಂಬ್ಡಾ ಬಡಿದರೂ ಜೆಡಿಎಸ್ ಅಧಿಕಾರಕ್ಕೆ ಬರಲ್ಲ: ಸಿದ್ದರಾಮಯ್ಯ ಭವಿಷ್ಯ
ಜೆಡಿಎಸ್‌ನಲ್ಲಿ ಮುಖಂಡರ ಅಭಿಪ್ರಾಯಕ್ಕೆ ಬೆಲೆ ಇಲ್ಲ. ದೇವೇಗೌಡರು, ಕುಮಾರಸ್ವಾಮಿ ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ಪಕ್ಷದಲ್ಲಿ ಇರಲು ಬಿಡುವುದಿಲ್ಲ. ನನಗೂ ಈ ಅನುಭವ ಆಗಿದೆ. ಆದರೆ, ಎಷ್ಟೇ ಬೊಂಬ್ಡಾ ಬಡಿದರೂ ಜೆಡಿಎಸ್‌ನವರು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದರು.
ಬೆಂಗಳೂರು (ಮಾ.31): ಜೆಡಿಎಸ್‌ನಲ್ಲಿ ಮುಖಂಡರ ಅಭಿಪ್ರಾಯಕ್ಕೆ ಬೆಲೆ ಇಲ್ಲ. ದೇವೇಗೌಡರು, ಕುಮಾರಸ್ವಾಮಿ ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ಪಕ್ಷದಲ್ಲಿ ಇರಲು ಬಿಡುವುದಿಲ್ಲ. ನನಗೂ ಈ ಅನುಭವ ಆಗಿದೆ. ಆದರೆ, ಎಷ್ಟೇ ಬೊಂಬ್ಡಾ ಬಡಿದರೂ ಜೆಡಿಎಸ್‌ನವರು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದರು. ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗುಬ್ಬಿ ಜೆಡಿಎಸ್ ಮಾಜಿ ಸಚಿವ ಶ್ರೀನಿವಾಸ್(ವಾಸು) ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್‌ಗೆ ದ್ರೋಹ ಮಾಡುವ ಕೆಲಸವನ್ನು ವಾಸು ಮಾಡಿಲ್ಲ. ಆದರೂ ಬಲವಂತವಾಗಿ ಪಕ್ಷದಿಂದ ಆಚೆ ತಳ್ಳಿದ್ದಾರೆ.
ದೇವೇಗೌಡರು, ಕುಮಾರಸ್ವಾಮಿ ಹೇಳಿದಂತೆ ಕೇಳಿದರೆ ಮಾತ್ರ ಅಲ್ಲಿರಲು ಸಾಧ್ಯ. ಕುಟುಂಬದ ತೀರ್ಮಾನವೇ ಅಲ್ಲಿ ಅಂತಿಮವಾಗಿದೆ. ನನಗೂ ಈ ಅನುಭವ ಆಗಿದ್ದು ವಾಸೂ ಸಹ ಅನುಭವಿಸಿದ್ದಾರೆ. ಆದರೆ ಏನೇ ಬೊಂಬ್ಡಾ ಬಡಿದರೂ ಜೆಡಿಎಸ್ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನ.1ರಂದು ನಾನು ಗುಬ್ಬಿಗೆ ಹೋಗಿದ್ದಾಗ ವಾಸು ಅಳಲು ತೋಡಿಕೊಂಡು ಬಹಳ ನೋವಿನಿಂದ ಮಾತನಾಡಿದ್ದರು. ಇದೀಗ ಕಾಂಗ್ರೆಸ್ ಕುಟುಂಬಕ್ಕೆ ಯಾವುದೇ ಷರತ್ತಿಲ್ಲದೇ ಹಿಂದಿರುಗಿದ್ದಾರೆ. ಮೂಡಿಗೆರೆ ಕ್ಷೇತ್ರದ ಪುರಸಭೆ ಮಾಜಿ ಅಧ್ಯಕ್ಷ ಹಾಲಪ್ಪ, ಈ ಹಿಂದೆ ಮಂಡ್ಯದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸತ್ಯಾನಂದ, ಮಾಜಿ ಅಧ್ಯಕ್ಷರಾದ ಸುಲ್ತಾನ್, ಬಾಬು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದು ಅವರೆಲ್ಲರನ್ನೂ ಸ್ವಾಗತಿಸುತ್ತೇನೆ ಎಂದು ಹೇಳಿದರು.
ಅಭಿವೃದ್ಧಿಯಲ್ಲಿ ಎಂದೂ ರಾಜಕೀಯ ಮಾಡಿಲ್ಲ: ಸಚಿವ ಸಿ.ಸಿ.ಪಾಟೀಲ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಸೇರುವಂತೆ ಬಿಜೆಪಿ ಶಾಸಕರನ್ನು ಸಂಪರ್ಕಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಕಳೆದ ಚುನಾವಣೆ ನಂತರ ಬಿಜೆಪಿಯವರು ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರು ಸೇರಿದಂತೆ 18 ಶಾಸಕರ ಮನೆ ಬಾಗಿಲು ತಟ್ಟಿಅವರನ್ನು ಕರೆದುಕೊಂಡು ಹೋದರಲ್ಲಾ ಆಗ ಮುಖ್ಯಮಂತ್ರಿಗಳ ನೈತಿಕತೆ ಎಲ್ಲಿಗೆ ಹೋಗಿತ್ತು ಎಂದು ಪ್ರಶ್ನಿಸಿದರು.
ಬಿಜೆಪಿಯ ಅನೇಕರು ಕಾಂಗ್ರೆಸ್‌ಗೆ: ಈ ಹಿಂದೆ ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಕಾಂತರಾಜು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಕೋಲಾರದ ವಿಧಾನ ಪರಿಷತ್ ಸದಸ್ಯ ಮನೋಹರ್, ಶಾಸಕ ಶ್ರೀನಿವಾಸ ಗೌಡ, ಮಧು ಬಂಗಾರಪ್ಪ, ದೇವೇಂದ್ರಪ್ಪ ಸೇರಿದಂತೆ 37 ಜೆಡಿಎಸ್ ಮುಖಂಡರು ಪಕ್ಷಕ್ಕೆ ಆಗಮಿಸಿದ್ದಾರೆ. ಬಿಜೆಪಿಯ ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ, ಬಾಬುರಾವ್ ಚಿಂಚನಸೂರು, ಯಡಿಯೂರಪ್ಪ ಅವರ ಆತ್ಮೀಯರಾಗಿದ್ದ ಮೋಹನ್ ನಿಂಬಿಕಾಯಿ, ಯು.ಬಿ.ಬಣಕಾರ್, ಬಸವರಾಜ ಬೊಮ್ಮಾಯಿ ಆಪ್ತ ಮಂಜುನಾಥ್ ಕುನ್ನೂರು ಮತ್ತಿತರರು ಪಕ್ಷ ಸೇರಿದ್ದು, ಮುಂದೆ ಬಿಜೆಪಿಯ ಹಲವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಬಹಿರಂಗಪಡಿಸಿದರು.
ಈ ಸಲ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ: ಜಗದೀಶ್ ಶೆಟ್ಟರ್ ಅಭಿಮತ
ಗಾಳಕ್ಕೆ ಬಿದ್ದಿರಲಿಲ್ಲ ಶ್ರೀನಿವಾಸ್: ಗುಬ್ಬಿ ಶ್ರೀನಿವಾಸ್ ಅವರು ಸತತವಾಗಿ ನಾಲ್ಕು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ನಾನು ಅನೇಕ ವರ್ಷಗಳಿಂದ ಅವರಿಗೆ ಗಾಳ ಹಾಕುತ್ತಿದ್ದೆ. ಅದಕ್ಕೆ ಬಿದ್ದಿರಲಿಲ್ಲ. ಸಿದ್ದರಾಮಯ್ಯ ಗಾಳ ಹಾಕಿದ್ದರೂ ಬಿದ್ದಿರಲಿಲ್ಲ. ಆದರೆ ಈಗ ರಾಜ್ಯದ ಮತದಾರರ ಚಿತ್ತ ಯಾವ ಕಡೆ ಇದೆ ಎಂದು ತಿಳಿದು ಮತದಾರರ ಗಾಳಕ್ಕೆ ಬಿದ್ದಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.