ಸೂಲಿಬೆಲೆ[ನ.27]: ಸರ್ಕಾರ ಬೀಳಿಸಲು ಸಿದ್ದರಾಮಯ್ಯ ನೀಡಿದ್ದ ಸೂಚನೆಯಂತೆ ಆಪ್ತರೆಲ್ಲ ಸೇರಿ ರಾಜೀನಾಮೆ ಕೊಟ್ಟರು ಎಂದು ಕಂದಾಯ ಸಚಿವ ಆರ್‌.ಅಶೋಕ ಆರೋಪಿಸಿದ್ದು ಇದನ್ನು ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್‌ ಸಮರ್ಥಿಸಿಕೊಂಡಿದ್ದಾರೆ.

ಹೊಸಕೋಟೆ ಅನುಗೊಂಡಹಳ್ಳಿ ಹೋಬಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಶೋಕ, ಎಂ.ಟಿ.ಬಿ.ನಾಗರಾಜ್‌ ನನಗೆ ಪರಿಚಯವಿರಲಿಲ್ಲ. ಬಾಂಬೆಯಲ್ಲಿ ನಾವೆಲ್ಲ ಒಟ್ಟಿಗೆ ಇದ್ದೀವಿ. ಸರ್ಕಾರ ಬೀಳಿಸೋಕೆ ಹೇಳಿದ್ದೇ ಸಿದ್ದರಾಮಯ್ಯ. ಅದರಂತೆ ಆಪ್ತರೆಲ್ಲ ಕೈ ಜೋಡಿಸಿ ರಾಜಿನಾಮೆ ಕೊಟ್ಟರು ಎಂದು ಹೇಳಿದರು. ಈಗಲೂ ಕೆಲ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಸಂಪರ್ಕದಲ್ಲಿದ್ದು, ಉಪ ಚುನಾವಣೆ ಮುಗಿದ ನಂತರ ಅವರೆಲ್ಲ ಸೇರಿಕೊಳ್ಳುತ್ತಾರೆ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್‌ ಮಾತನಾಡಿ, ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರೂ ಎಷ್ಟುಬೇಡಿದರೂ ಅಭಿವೃದ್ಧಿಗಾಗಿ ಅನುದಾನ ಕೊಡಲಿಲ್ಲ. ಸಿದ್ದರಾಮಯ್ಯನವರ ಬಳಿ ಕೇಳಿದಾಗ ಸರ್ಕಾರ ಬೀಳಿಸೋಣ ಅಂತ ಹೇಳಿದರು. ಅದಕ್ಕೆ ರಾಜೀನಾಮೆ ಕೊಟ್ಟೆ. ಈಗ ನನ್ನನ್ನು ಮೋಸಗಾರ, ದ್ರೋಹಿ ಅನ್ನುತ್ತಿದ್ದಾರೆ ಎಂದು ತಿಳಿಸಿದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.