ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲು ನನ್ನ ಪ್ರಯತ್ನ ಹಾಗೂ ಅಳಿಲು ಸೇವೆ ಮಾಡುವೆ. ಅದಕ್ಕಾಗಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡುವೆ. ಪಕ್ಷದ ಸೂಚನೆಯಂತೆ ಸಂಘಟನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ. ಖುಷಿಯಿಂದ ವಾಪಸ್ ಬಂದಿದ್ದೇನೆ: ಶೆಟ್ಟರ್
ಬೆಂಗಳೂರು(ಜ.27): ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ, ಗೌರವ ನೀಡುತ್ತೇವೆ ಎಂಬುದಾಗಿ ಪಕ್ಷದ ಹಿರಿಯರು ಭರವಸೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಬಿಜೆಪಿಗೆ ವಾಪಸಾದ ಬೆನ್ನಲ್ಲೇ ಶುಕ್ರವಾರ ಪಕ್ಷದ ರಾಜ್ಯ ಕಚೇರಿಗೆ ಆಗಮಿಸಿದ ಅವರನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿ.ಸುನೀಲ್‌ಕುಮಾರ್, ಪ್ರೀತಂಗೌಡ, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮೊದಲಾದವರು ಸ್ವಾಗತಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲು ನನ್ನ ಪ್ರಯತ್ನ ಹಾಗೂ ಅಳಿಲು ಸೇವೆ ಮಾಡುವೆ. ಅದಕ್ಕಾಗಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡುವೆ. ಪಕ್ಷದ ಸೂಚನೆಯಂತೆ ಸಂಘಟನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ. ಖುಷಿಯಿಂದ ವಾಪಸ್ ಬಂದಿದ್ದೇನೆ.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಬಿಟ್ಟು ಹೋಗಲ್ಲ: ಡಿಕೆ ಶಿವಕುಮಾರ
ಎಲ್ಲರನ್ನೂ ವಿಶ್ವಾಸಕ್ಕೆತೆಗೆದುಕೊಂಡು ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಕಾರ್ಯಕರ್ತರ ಆಶಯ, ಧ್ವನಿ, ರಾಜ್ಯ, ರಾಷ್ಟ್ರೀಯ ನಾಯಕರ ಕರೆಗೆ ಸ್ಪಂದಿಸಿ ಬಿಜೆಪಿಗೆ ಮರಳಿದ್ದೇನೆ. ನೀವು ಹಿರಿಯ ನಾಯಕರು, ನಿಮಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ, ಗೌರವ ನೀಡುತ್ತೇವೆ ಎಂದು ಪಕ್ಷದ ಹಿರಿಯರು ತಿಳಿಸಿದ್ದಾರೆ. ಇದು ನಮ್ಮ ಮನೆ. ನಾವು ಕಟ್ಟಿ ಬೆಳೆಸಿದ ಮನೆ. ನಮ್ಮ ಕುಟುಂಬ ಬಿಜೆಪಿ ಜೊತೆ ಆತ್ಮೀಯತೆ ಹೊಂದಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ನಡೆದ ಕೆಲವೊಂದು ಘಟನೆಗಳ ಹಿನ್ನೆಲೆಯಲ್ಲಿ ನಾನು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದೆ ಎಂದರು.
ಪ್ರಧಾನಿ ಮೋದಿ ಅವರು 10 ವರ್ಷಗಪೊ ಕಾಲ ಆಡಳಿತ ನಡೆಸಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ದೃಷ್ಟಿಯಿಂದ ಹಾಗೂ ನಮ್ಮ ದೇಶವು ಆರ್ಥಿಕವಾಗಿ ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಬೇಕೆಂಬುದು ನನ್ನನ್ನೂ ಸೇರಿದಂತೆ ಭಾರತದ ನೂರಾರು ಕೋಟಿ ಜನರ ಅಭಿಲಾಷೆಯಿದೆ. ಹೀಗಾಗಿ ನಾನು ಬಿಜೆಪಿಗೆ ಬಂದಿದ್ದೇನೆ ಎಂದು ವಿವರಿಸಿದರು.
