Asianet Suvarna News Asianet Suvarna News

ನಮ್ಮ ಕಣ್ಣೀರು ಭಾವನಾತ್ಮಕ, ಸಿದ್ದು ಕಣ್ಣೀರು ಕೃತಕ: ಸಿಎಂಗೆ ಎಚ್‌ಡಿಕೆ ತಿರುಗೇಟು


ಗ್ಯಾರಂಟಿ ಅನುಷ್ಠಾನಕ್ಕಾಗಿ 52 ಸಾವಿರ ಕೋಟಿ ರೂ.ಹೊಂದಿಸಲು ಕೋಟ್ಯಂತರ ರೂ.ಸಾಲ ಮಾಡಿದ್ದಾರೆ. ಒಂದು ಕಡೆ ಗ್ಯಾರಂಟಿ ನೀಡಿದರೂ ಮತ್ತೊಂದು ಕಡೆ ಜನರಿಗೆ ಹೆಚ್ಚು ತೆರಿಗೆ ಹಾಕಲಾಗುತ್ತಿದೆ. ಇದನ್ನು ಜನ ಏಕೆ ಅರ್ಥ ಮಾಡಿಕೊಂಡಿಲ್ಲ. ಈ ದುರಾಡಳಿತ ಕೊನೆಯಾಗಿಸಲು ಮೈತ್ರಿ ಅಭ್ಯರ್ಥಿ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ 

Former CM HD Kumaraswamy Taunt to CM Siddaramaiah Statement grg
Author
First Published Apr 4, 2024, 6:00 AM IST

ಮಂಡ್ಯ/ಮೈಸೂರು(ಏ.04):  ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಣ್ಣೀರು ಕೃತಕ. ಆದರೆ, ನಮ್ಮ ಕಣ್ಣೀರು ಭಾವನಾತ್ಮಕ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ವರುಣಾದಲ್ಲಿ ಸೋಮವಾರ ಸಿದ್ದರಾಮಯ್ಯನವರು ಮಾಡಿದ ಭಾವನಾತ್ಮಕ ಭಾಷಣ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರ ಅಭಿವೃದ್ಧಿ ಶೂನ್ಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. 

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಇವರು ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂಬುದನ್ನು ಹೇಳಲಿ. ಬಾದಾಮಿ ಕ್ಷೇತ್ರಕ್ಕೆ ಏನು ಕೊಟ್ಟರು ಎಂದು ಪ್ರಶ್ನಿಸಿದರು. ನಾನು ಸಿಎಂ ಆಗಿದ್ದಾಗ ಇವರಂತೆ ನನ್ನ ಮಗನಿಗೆ ಕ್ಷೇತ್ರದ ಜವಾಬ್ದಾರಿ ಕೊಟ್ಟಿರಲಿಲ್ಲ. ಯಡಿಯೂರಪ್ಪಗೆ ಆವತ್ತು ನಮ್ಮ ಸರ್ಕಾರ ಬೀಳಿಸಲು ಸಹಾಯ ಮಾಡಿದ್ದು ಯಾರು?. ಅದರಲ್ಲಿ ಸಿದ್ದರಾಮಯ್ಯನವರ ಚಿತಾವಣೆ ಇರಲಿಲ್ವಾ?. ಸಿದ್ಧವನದಲ್ಲಿ ಸಿದ್ಧ ಔಷಧ ಸಿದ್ದ ಮಾಡಿದ್ದು ಯಾರು?. ಸಿದ್ದರಾಮಯ್ಯನವರ ಮಾತಲ್ಲಿ ಬರೀ ಗರ್ವ ತುಂಬಿರುತ್ತೆ. ವಿಧಾನಸೌಧದಲ್ಲೇ ಮೈಸೂರು ಪೈಲ್ವಾನ್ ಥರ ತೊಡೆ ತಟ್ಟಿ ಗರ್ವ ತೋರಿಸಿದ್ದು ಯಾರು? ಎಂದು ಪ್ರಶ್ನಿಸಿದರು.

ಮೊದಲು ಬಾಯಿಗೆ ಬಂದಂಗೆ ಬೈತಿದ್ದ ಸಿದ್ದರಾಮಯ್ಯ ಈಗ ಸೋನಿಯಾ ಮುಂದೆ ನಡು ಬಗ್ಗಿಸಿ ನಿಲ್ತಾರೆ: ಎಚ್‌ಡಿ ಕುಮಾರಸ್ವಾಮಿ

ಎಚ್ಡಿಕೆಯನ್ನು ಸಿಎಂ ಮಾಡಿದ್ದು ಕಾಂಗ್ರೆಸ್‌ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, 2004ರಲ್ಲೇ ಬಿಜೆಪಿಯ ಅರುಣ್ ಜೇಟ್ಲಿ ನನಗೆ ಸಿಎಂ ಆಫರ್ ಕೊಟ್ಟಿದ್ದರು. ಆಗ ಸಿದ್ದರಾಮಯ್ಯರನ್ನು ಬಿಜೆಪಿ ಕೇಳಿರಲಿಲ್ಲ. ಅವರಿಗೆ ಯಾವಾಗಲೂ ದೇವೇಗೌಡರ ಭಜನೆ ಮಾಡುವುದೆ ಕೆಲಸ. ಸಿಎಂ ಜವಾಬ್ದಾರಿ ಜೊತೆಗೆ ಈಗ ಜ್ಯೋತಿಷ್ಯ ಕೂಡ ಕಲಿತಿರಬೇಕು. ಅವರು ಈಗ ದೊಡ್ಡ ಜ್ಯೋತಿಷಿ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇದ್ದಾಗ ನಾವು ಮೈತ್ರಿ ಧರ್ಮ ಪಾಲನೆ ಮಾಡಿದ್ದೇವೆ. ನಾನು ಮೈತ್ರಿ ಧರ್ಮ ಮುರಿದಿದ್ದರೆ ಕಾಂಗ್ರೆಸ್ ಒಂದು ಸ್ಥಾನವೂ ಬರ್ತಾ ಇರಲಿಲ್ಲ. ನಾನು ಮೈತ್ರಿ ಧರ್ಮ ಪಾಲನೆ ಮಾಡಬೇಡಿ ಎಂದು ಹೇಳಿದರೆ ಕಳೆದ ಬಾರಿಯೇ ಬಿಜೆಪಿ, ಬೆಂಗಳೂರು ಗ್ರಾಮಾಂತರದಲ್ಲಿ ಗೆಲ್ತಾ ಇತ್ತು. ನಮ್ಮ ಭದ್ರಕೋಟೆಗೆ ಕಾಂಗ್ರೆಸ್ ನುಗ್ಗಲು ಆಗ ನಾನೇ ಅವಕಾಶ ಮಾಡಿಕೊಟ್ಟು ಬಿಟ್ಟೆ. ಆಗ ಸಾಲ ಮಾಡಿ ಪಕ್ಷ ಸಂಘಟನೆ ಮಾಡಿದ್ದು ನಾವು. ಪೆಂಡಾಲ್ ಹಾಕಿ ವೇದಿಕೆ ಹಾಕಿದ್ದು ನಾವು, ಬಂದು ಭಾಷಣ ಮಾಡಿ ಹೋಗ್ತಾ ಇದ್ದಿದ್ದು ಸಿದ್ದರಾಮಯ್ಯ. ಜೆಡಿಎಸ್ ಸಂಘಟನೆಗೆ ಸಿದ್ದರಾಮಯ್ಯ ಯಾವತ್ತು ಸಾಲ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.

ಗ್ಯಾರಂಟಿ ಅನುಷ್ಠಾನಕ್ಕಾಗಿ 52 ಸಾವಿರ ಕೋಟಿ ರೂ.ಹೊಂದಿಸಲು ಕೋಟ್ಯಂತರ ರೂ.ಸಾಲ ಮಾಡಿದ್ದಾರೆ. ಒಂದು ಕಡೆ ಗ್ಯಾರಂಟಿ ನೀಡಿದರೂ ಮತ್ತೊಂದು ಕಡೆ ಜನರಿಗೆ ಹೆಚ್ಚು ತೆರಿಗೆ ಹಾಕಲಾಗುತ್ತಿದೆ. ಇದನ್ನು ಜನ ಏಕೆ ಅರ್ಥ ಮಾಡಿಕೊಂಡಿಲ್ಲ. ಈ ದುರಾಡಳಿತ ಕೊನೆಯಾಗಿಸಲು ಮೈತ್ರಿ ಅಭ್ಯರ್ಥಿ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

Follow Us:
Download App:
  • android
  • ios